ನೀಟ್ ಪರೀಕ್ಷೆ ಅಕ್ರಮ ವಿರುದ್ದ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಬಂಧನವನ್ನು ಖಂಡಿಸಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ‌ಸಮಿತಿ ವತಿಯಿಂದ ಕೇಂದ್ರ ಸರಕಾರದ ವಿರುದ್ದ ಪ್ರತಿಭಟನೆ ‌ನಡೆಯಿತು.

ಕುಶಾಲನಗರ: ನೀಟ್ ಪರೀಕ್ಷೆ ಅಕ್ರಮ ವಿರುದ್ದ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಬಂಧನವನ್ನು ಖಂಡಿಸಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ‌ಸಮಿತಿ ವತಿಯಿಂದ ಕೇಂದ್ರ ಸರಕಾರದ ವಿರುದ್ದ ಪ್ರತಿಭಟನೆ ‌ನಡೆಯಿತು.

ನೀಟ್ ಪ್ರಶ್ನೆ‌ ಪತ್ರಿಕೆಯ‌ ನಿರಂತರ ಸೋರಿಕೆಯ ನೈತಿಕ ಹೊಣೆ ಹೊತ್ತು ಕೇಂದ್ರ ಸಚಿವ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಆಂದೋಲನ ನಿರತ ವಿದ್ಯಾರ್ಥಿ ಹಾಗೂ ಪೋಷಕರ ವಿರುದ್ದ ಪೈಶಾಚಿಕ ದಾಳಿ ನಡೆಸಿದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದ ಪ್ರತಿಭಟನಾಕಾರರು ನರೇಂದ್ರ ಮೋದಿ, ಅಮಿತ್ ಶಾ ವಿರುದ್ದ ಧಿಕ್ಕಾರ ಕೂಗಿ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿದರು.

ಬಂಧನಕ್ಕೊಳಪಡಿಸಿರುವ ವಿದ್ಯಾರ್ಥಿಗಳ ಬಿಡುಗಡೆಗೆ ಆಗ್ರಹಿಸಿ ಮತ್ತು ‌ಅವರ ಮೇಲೆ ಹೂಡಿರುವ ಮೊಕದ್ದಮೆಗಳನ್ನು ಕೈಬಿಡುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಲಾಯಿತು.

ಕುಶಾಲನಗರ ಬೈಚನಹಳ್ಳಿ ಮಾರಿಯಮ್ಮ ದೇವಸ್ಥಾನದ ಬಳಿಯಿಂದ‌ ನಡೆದ ಬೃಹತ್ ‌ಪ್ರತಿಭಟನಾ ಮೆರವಣಿಗೆ ಪಟ್ಟಣದ ರಥಬೀದಿ‌ ಮೂಲಕ ಹಳೆ ಮಾರುಕಟ್ಟೆ ರಸ್ತೆ, ಟೌನ್ ಕಾಲೊನಿ ಮೂಲಕ ಕುಶಾಲನಗರ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತಕ್ಕೆ ಆಗಮಿಸಿತು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ದೇಶಾದ್ಯಂತ ಬಿಜೆಪಿ ಸರಕಾರದ ವಿರುದ್ದ ಜನತೆ ಆಕ್ರೋಶಭರಿತರಾಗಿದ್ದಾರೆ. ಹಲವು ಹಗರಣಗಳಿಂದ ರೋಸಿ ಹೋಗಿದ್ದಾರೆ ಎಂದರು.

ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಮೋದಿ ಸರಕಾರವನ್ನು ಪ್ರಶ್ನಿಸುವವರ, ಹೋರಾಟ, ಚಳವಳಿಗಳನ್ನು ಹಮ್ಮಿಕೊಳ್ಳುವವರಿಗೆ ಒಂದೊಂದು ಹಣೆಪಟ್ಟಿ ಕಟ್ಟಿ ಅವರ ಸದ್ದಡಗಿಸುವ ದಮನಕಾರಿ‌ ನೀತಿಯನ್ನು ಬಿಜೆಪಿ ಸರಕಾರ ಅನುಸರಿಸುತ್ತಿದೆ ಎಂದರು.

ಮುಖಂಡ ನಾಪಂಡ ಮುತ್ತಪ್ಪ ಮಾತನಾಡಿ, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಕುಶಾಲನಗರದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

ಕೆಪಿಸಿಸಿ ಸಂಯೋಜಕ ನಟೇಶ್ ಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ, ಎನ್ಎಸ್ ಯುಐನ ಬಸವರಾಜು ಮಾತನಾಡಿದರು.

ಪಕ್ಷದ ಪ್ರಮುಖರಾದ ಸಜಿ, ಜೆ. ಫಿಲೋಮಿನಾ, ಶಶಿ ಭೀಮಯ್ಯ, ಬಿ.ಎಸ್. ಚಂದ್ರಶೇಖರ್, ಕಾಂಗ್ರೆಸ್ ನ ವಿವಿಧ ಘಟಕ, ಸಮಿತಿಗಳ ಪದಾಧಿಕಾರಿಗಳು, ಮಾಜಿ ಜನಪ್ರತಿನಿಧಿಗಳು ಕಾರ್ಯಕರ್ತರು ಇದ್ದರು.