ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ವಿದ್ಯಾರ್ಥಿ ಜೀವನದಲ್ಲಿ ನಿರ್ದಿಷ್ಟ ಗುರಿಯೊಂದಿಗೆ ಕಠಿಣ ಪರಿಶ್ರಮ ಮೂಲಕ ಅಧ್ಯಯನ ಕೈಗೊಂಡಲ್ಲಿ ಮಾತ್ರ ಯಶಸ್ಸು ಲಭಿಸಲು ಸಾಧ್ಯ ಎಂದು ನಿವೃತ್ತ ಪ್ರಾಂಶುಪಾಲ ಡಾ.ದೇವರಾಜು ಸಲಹೆ ನೀಡಿದ್ದಾರೆ.ಪಟ್ಟಣದ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳಬೇಕು, ದುಶ್ಚಟಗಳಿಂದ ದೂರ ಇರಬೇಕು. ಪೋಷಕರು ಮಕ್ಕಳ ಮೇಲೆ ಇಟ್ಟಿರುವ ನಿರೀಕ್ಷೆಗೆ ತಕ್ಕಂತೆ ನಿರಂತರ ಓದುವ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ , ಶಿಕ್ಷಕ ವರ್ಗ ಅವರ ಅವಿರತ ಶ್ರಮ ಮೂಲಕ ಉತ್ತಮ ಶಿಕ್ಷಣ ನೀಡಿ ವಿದ್ಯಾರ್ಥಿಗಳನ್ನು ಸಮಾಜದ ಮುಖ್ಯ ವಾಹಿನಿಗೆ ನೀಡುತ್ತಿರುವ ಕಾಯಕ ಶ್ಲಾಘನೀಯ ಎಂದರು.
ವಿವೇಕಾನಂದ ಪಿಯು ಕಾಲೇಜು ಮತ್ತು ಎಂಜಿಎಂ ಪದವಿ ಕಾಲೇಜಿನ ಗೌರವ ಪ್ರಾಂಶುಪಾಲ ಎಂ.ನಾಗೇಶ್ ಮಾತನಾಡಿ, ವಿದ್ಯಾರ್ಥಿ ಜೀವನ ಅಮೂಲ್ಯವಾದುದು , ಶೈಕ್ಷಣಿಕ ಸಾಧನೆಯೊಂದಿಗೆ ಜೀವನದಲ್ಲಿ ಏನಾದರೂ ಸಾಧಿಸುವ ಛಲ ಹೊಂದಿ ವಿಧ್ಯಾರ್ಥಿ ಜೀವನ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಕೂಡಿಗೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ದೀಪಿಕಾ ಮೂರ್ತಿ ಮಾತನಾಡಿ,
ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಗುರುಗಳ ಮಾರ್ಗದರ್ಶನದಂತೆ ಓದಿನ ಕಡೆಗೆ ಹೆಚ್ಚಿನ ಗಮನ ನೀಡುವ ಮೂಲಕ ಉತ್ತಮ ಫಲಿತಾಂಶ ತರಲು ಶ್ರಮಿಸಬೇಕು ಎಂದರು.ವಿವೇಕಾನಂದ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಎನ್.ಎನ್.ಶಂಭುಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು.ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಕ್ಲಾರಾ ರೇಷ್ಮಾ ಎಂಜಿಎಂ ಪದವಿ ಕಾಲೇಜಿನ ಪ್ರಾಂಶುಪಾಲೆ ಟಿ.ಎ.ಲಿಖಿತಾ ಮತ್ತಿತರರಿದ್ದರು. ವಿದ್ಯಾರ್ಥಿಗಳಾದ ವಾತ್ಸಲ್ಯ, ಏಂಜೆಲಾ,ಮಾನ್ಯ, ಶೆರೀನ್ ಅನಿಸಿಕೆ ವ್ಯಕ್ತಪಡಿಸಿದರು.
ಡಾ.ದೀಪೀಕಾಮೂರ್ತಿ ಅವರನ್ನು ಸಂಸ್ಥೆ ವತಿಯಿಂದ ಗೌರವಿಸಲಾಯಿತು.ವಿದ್ಯಾರ್ಥಿನಿ ಚಂದ್ರನಾ ಮತ್ತು ತಂಡದವರು ಪ್ರಾರ್ಥಿಸಿದರು. ರಿಲಾ ಸ್ವಾಗತಿಸಿದರು. ವಿ.ಕೀರ್ತನಾ ನಿರೂಪಿಸಿದರು.ಉಪನ್ಯಾಸಕಿ ರಫ್ಮಾ ಫಾತಿಮಾ ವಂದಿಸಿದರು.