ಕುಶಾಲನಗರ: ಕುಶಾಲನಗರದ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ನಲ್ಲಿ (ಎನ್.ಟಿ.ಸಿ) ನಡೆಯುತ್ತಿದೆ ಎನ್ನಲಾದ ಬಲವಂತದ ಮತಾಂತರ, ‌ಮಹಿಳೆಯರ ದೌರ್ಜನ್ಯ ಆರೋಪದ ಹಿನ್ನೆಲೆಯಲ್ಲಿ ಎನ್.ಟಿ.ಸಿ. ಅಂಗಡಿ ಮಳಿಗೆಗಳ‌ ಮಾಲೀಕರು, ಸಿಬ್ಬಂದಿ ಸಭೆ ನಡೆಯಿತು.ಎನ್.ಟಿ.ಸಿ.ಕೇಂದ್ರದ‌ ಮಾಲೀಕ ಅಬ್ದುಲ್ ಸಲಾಂ ರಾವುತರ್ ನೇತೃತ್ವದಲ್ಲಿ ಎನ್.ಟಿ.ಸಿ ಕೇಂದ್ರದ ಎಲ್ಲಾ ವರ್ತಕರು ಅಂಗಡಿ ಮುಂಗಟ್ಟುಗಳನ್ನು‌ ಮುಚ್ಚಿ ವಹಿವಾಟು ಬಂದ್ ಮಾಡಿ ಬಹಿರಂಗ ಸಭೆ ನಡೆಸಿ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚಿಸಿದರು.ಕೇಂದ್ರದ ವಿರುದ್ಧ ಉಂಟಾಗಿರುವ ಆರೋಪಗಳ ಬಗ್ಗೆ ಮಹಿಳೆಯರು ಮುಕ್ತವಾಗಿ ತಮ್ಮ ಅನುಭವ, ಅಭಿಪ್ರಾಯ ತಿಳಿಸಿದರು.ನಿಸರ್ಗಧಾಮ ಟೂರಿಸ್ಟ್ ಸೆಂಟರ್ ನಲ್ಲಿ ಯಾವುದೇ ಬಲವಂತದ ಮತಾಂತರವಾಗಲಿ ಅಥವಾ ಮಹಿಳಾ‌ ದೌರ್ಜನ್ಯ ಘಟನೆಗಳು ಇದುವರೆಗೂ ನಡೆದಿಲ್ಲ. ಈ ಕೇಂದ್ರದ ಮೇಲೆ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಎಲ್ಲಾ ಮಹಿಳಾ ಕಾರ್ಮಿಕರು ‌ಒಕ್ಕೊರಲಿನಿಂದ ಖಂಡಿಸಿದರು.

ಹಲವು ಮಹಿಳೆಯರು ಎನ್.ಟಿ.ಸಿಯ‌ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಇಲ್ಲಿ ನಮಗೆ ಸುರಕ್ಷತಾ ವಾತಾವರಣವಿದೆ. ಯಾವುದೇ ಅಹಿತಕರ ಅನುಭವ ನಮಗೆ ಉಂಟಾಗಿಲ್ಲ ಎಂದು ಮಹಿಳಾ ಕಾರ್ಮಿಕರು ಅಭಿಪ್ರಾಯ ವ್ಯಕ್ತಪಡಿಸಿದರು.ಎನ್.ಟಿ.ಸಿ ವಾಣಿಜ್ಯ ಕೇಂದ್ರದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಅಥವಾ ಬಲವಂತದ ಮತಾಂತರ ನಡೆಯುತ್ತಿದ್ದಲ್ಲಿ ಅದು ನಮ್ಮ ಗಮನಕ್ಕೆ ತರಬೇಕಿದೆ. ಇದರೊಳಗೆ ವಹಿವಾಟು ನಡೆಸುತ್ತಿದ್ದ ವ್ಯಕ್ತಿ ಅದೇ ಅಂಗಡಿಯಲ್ಲಿದ್ದ ಮಹಿಳೆಯನ್ನು ‌ಮತಾಂತರ ಪ್ರಕರಣ ಕೇಂದ್ರದ ಹೊರಗೆ ನಡೆದ ಪ್ರಕರಣವಾಗಿದೆ‌. ಅವರ ವೈಯಕ್ತಿಕ ವಿಚಾರಕ್ಕೂ ಎನ್.ಟಿ.ಸಿಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರದ ಮಾಲೀಕ ಅಬ್ದುಲ್ ಸಲಾಂ ತಿಳಿಸಿದರು.

ಎಲ್ಲಾ ರೀತಿಯ ಸುರಕ್ಷತೆ, ರಕ್ಷಣೆಗಾಗಿ ಕೇಂದ್ರದಲ್ಲಿ ನೂರಾರು ಸಿಸಿ ಕ್ಯಾಮರಾ ಕೂಡ ಅಳವಡಿಸಲಾಗಿದೆ.

ತಾನು ಕೂಡ ಬಲವಂತದ ಮತಾಂತರ ಹಾಗೂ ಮಹಿಳಾ ದೌರ್ಜನ್ಯವನ್ನು ಖಂಡಿಸುತ್ತೇನೆ ಎಂದು ಹೇಳಿದ ಸಲಾಂ ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಮಂಗಳವಾರ ನಡೆಯುವ ಮಹಿಳಾ ದೌರ್ಜನ್ಯ ವಿರೋಧಿ ಹೋರಾಟಕ್ಕೆ ಕೂಡ ನಮ್ಮ ಬೆಂಬಲವಿದೆ ಎಂದರು.

ಎನ್.ಟಿ.ಸಿ ಕೇಂದ್ರ ಡ್ರಗ್ಸ್ ಮುಕ್ತ ವಾತಾವರಣವನ್ನು ಹೊಂದಿದೆ. ಕೇಂದ್ರದ ಒಳಗೆ ಯಾರಾದರೂ ಮಾದಕವಸ್ತುಗಳನ್ನು ತಂದು ಮಾರಾಟ ಮಾಡುವುದಾಗಲಿ ಅಥವಾ ಸೇವನೆ‌ ಮಾಡುವ ಪ್ರಕರಣ ಕಂಡು ಬಂದಲ್ಲಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.


ಎನ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕಿ ಆಶಾ ಸಲಾಂ ಮಾತನಾಡಿ, ಈ ಕೇಂದ್ರದಲ್ಲಿ ಎಲ್ಲಾ ಜಾತಿ, ಧರ್ಮದ ಜನರು ಒಗ್ಗಟ್ಟಿನಿಂದ ಪರಸ್ಪರ ಸಹಬಾಳ್ವೆಯಿಂದ‌ ಕೆಲಸ‌ ಮಾಡಿಕೊಂಡು ಹೋಗುತ್ತಿದ್ದಾರೆ. ಕೇಂದ್ರದಲ್ಲಿ ಗಣಪತಿ ಹಬ್ಬ, ಕ್ರಿಸ್ಮಸ್, ರಂಜಾನ್ ಸೇರಿದಂತೆ ರಾಷ್ಟ್ರೀಯ ಹಬ್ಬಗಳನ್ನು ಎಲ್ಲರೂ ಒಟ್ಟಾಗಿ ಸೇರಿ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ. ಎಲ್ಲಾ ಧರ್ಮದವರು ಅನ್ಯೋನ್ಯತೆಯಿಂದ ಭಾವೈಕ್ಯತೆಯಿಂದ ಜೀವನ ಕಂಡುಕೊಂಡಿದ್ದಾರೆ. ಅನಗತ್ಯ ಆರೋಪಗಳು ಸಲ್ಲದು ಎಂದರು.ಸಭೆಯಲ್ಲಿ ಉದ್ಯಮಿ ರಜಾಕ್ ಹೊಸಕೋಟೆ, ಮೈಸಿ ಕತ್ತಣ್ಣೀರ, ಆರ್.ಎ.ವಸನದ ಪರಂಜ್ಯೋತಿ ಮಾತನಾಡಿದರು.

ಎನ್.ಟಿ.ಸಿ.ಸಿಬ್ಬಂದಿ, ಆವರಣದ ಅಂಗಡಿಗಳ ವರ್ತಕರು ಪಾಲ್ಗೊಂಡಿದ್ದರು.