ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರಪಟ್ಟಣದ ಐತಿಹಾಸಿಕ ದೇವಾಲಯ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಉದ್ಯಮಿ ಫ್ರೆಸರ್ ಪೇಟೆಯ ಲಕ್ಷ್ಮಯ್ಯ ಶೆಟ್ಟಿ ಅವರ ಮೊಮ್ಮಕ್ಕಳಾದ ಎಫ್ .ಎಲ್.ಮಣಿ ಅವರು ಹಿರಿಯರ ಸ್ಮರಣಾರ್ಥ ಶಕ್ತಿ ಗಣಪತಿ 16 ನೇ ಅವತಾರದ ರಜತ ಕವಚ ಸಮರ್ಪಣೆ ಮಾಡಿದರು.ದೇವಾಲಯದಲ್ಲಿ ಪ್ರಧಾನ ಅರ್ಚಕ ನಾಗೇಂದ್ರ ಬಾಬು ಮತ್ತು ರಾಘವೇಂದ್ರ ಭಟ್ ನೇತೃತ್ವದಲ್ಲಿ ಗಣಪತಿ ಹೋಮ ಹಾಗೂ ವಿಶೇಷ ಪೂಜೆ ಸಲ್ಲಿಸಲಾಯಿತು. ನೂತನ ರಜತ ಕವಚಕ್ಕೆ ಪೂಜೆ ಪುರಸ್ಕಾರ ನೆರವೇರಿಸಿದ ಬಳಿಕ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಎಂ.ಕೆ.ದಿನೇಶ್ ಅವರಿಗೆ ಹಸ್ತಾಂತರಿಸಿದರು.ಈ ಸಂದರ್ಭ ದೇವಾಲಯದ ಪ್ರಧಾನ ಅರ್ಚಕ ನಾಗೇಂದ್ರ ಬಾಬು ಮಾತನಾಡಿ, ಶ್ರೀ ಮಹಾಗಣಪತಿ 32 ಅವತಾರ ಗಳನ್ನು ಹೊಂದಿದ್ದು, ಈ ವಿಚಾರ ಕುರಿತು ಭಕ್ತರಿಗೆ ತಿಳಿಸಿ ಅವರಿಂದ ಕವಚಗಳನ್ನು ದಾನ ರೂಪದಲ್ಲಿ ಪಡೆದು ಪ್ರತಿ ದಿನ ಈ ಕವಚಗಳನ್ನು ದೇವರಿಗೆ ಧರಿಸಿ ವಿಶೇಷ ಪೂಜೆ ಸಲ್ಲಿಸುವ ಉದ್ದೇಶ ಹೊಂದಲಾಗಿದೆ ಎಂದರು.ಇದೇ ಸಂದರ್ಭ ನಂಜರಾಯಪಟ್ಟಣ ಕಾಫಿ ಬೆಳೆಗಾರರಾದ ಕರುಂಬಯ್ಯ ಮತ್ತು ಕವಿತಾ ಅವರು ದೇವಾಲಯಕ್ಕೆ ಬೆಳ್ಳಿಯ ಅಭಿಷೇಕ ಪಾತ್ರೆ ದಾನವಾಗಿ ನೀಡಿದರು.ದೇವಾಲಯ ಸಮಿತಿ ವತಿಯಿಂದ ದಾನಿಗಳಾದ ಮಣಿ ಹಾಗೂ ಕುಟುಂಬ ಮತ್ತು ಕರುಂಬಯ್ಯ ಅವರ ದಂಪತಿಗಳನ್ನು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭ ದೇವಾಲಯ ಸಮಿತಿ ಮಾಜಿ ಅಧ್ಯಕ್ಷ ವಿ.ಎನ್.ವಸಂತ ಕುಮಾರ್, ವ್ಯವಸ್ಥಾಪಕ ಶ್ರೀನಿವಾಸ್ ರಾವ್, ಸಂಘಟನಾ ಕಾರ್ಯದರ್ಶಿ ಕೆ.ಎನ್.ದೇವರಾಜು ಮತ್ತಿತರರು ಇದ್ದರು.