ಸಾರಾಂಶ
ಕುಶಾಲನಗರದ ಐತಿಹಾಸಿಕ ದೇವಸ್ಥಾನ ಶ್ರೀ ಗಣಪತಿ ದೇವರ ರಥೋತ್ಸವ ಸಾವಿರಾರು ಸಂಖ್ಯೆಯ ಭಕ್ತಾದಿಗಳ ಉಪಸ್ಥಿತಿಯಲ್ಲಿ ಭಕ್ತಿ ಭಾವದಿಂದ ಮಂಗಳವಾರ ಜರುಗಿತು. ಗಣಪತಿ ದೇವರನ್ನು ರಥದಲ್ಲಿ ಪ್ರತಿಷ್ಠಾಪಿಸಿ ಭಕ್ತಾದಿಗಳು ರಥ ಬೀದಿಯ ಮೂಲಕ ಆಂಜನೇಯ ದೇವಾಲಯ ತನಕ ಘೋಷಣೆಗಳೊಂದಿಗೆ ಭಕ್ತಿ ಭಾವದಿಂದ ಎಳೆದರು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರದ ಐತಿಹಾಸಿಕ ದೇವಸ್ಥಾನ ಶ್ರೀ ಗಣಪತಿ ದೇವರ ರಥೋತ್ಸವ ಸಾವಿರಾರು ಸಂಖ್ಯೆಯ ಭಕ್ತಾದಿಗಳ ಉಪಸ್ಥಿತಿಯಲ್ಲಿ ಭಕ್ತಿ ಭಾವದಿಂದ ಮಂಗಳವಾರ ಜರುಗಿತು.ಕಾರ್ತಿಕ ಮಾಸ ಕೃಷ್ಣ ಪಕ್ಷದಲ್ಲಿ ನಡೆಯುವ ದೇವಾಲಯದ ರಥೋತ್ಸವ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಬೆಳಗಿನಿಂದಲೇ ದೇವರಿಗೆ ಪಂಚಾಮೃತ ಅಭಿಷೇಕ, ಏಕವಾರ, ರುದ್ರಾಭಿಷೇಕ ಪುಷ್ಪಾಲಂಕಾರ ರಥ ಪೂಜೆ ರಥ ಬಲಿ ನಂತರ ಗಣಪತಿ ದೇವರನ್ನು ರಥದಲ್ಲಿ ಪ್ರತಿಷ್ಠಾಪಿಸಿ ಭಕ್ತಾದಿಗಳು ರಥ ಬೀದಿಯ ಮೂಲಕ ಆಂಜನೇಯ ದೇವಾಲಯ ತನಕ ಘೋಷಣೆಗಳೊಂದಿಗೆ ಭಕ್ತಿ ಭಾವದಿಂದ ಎಳೆದರು.ದೇವಾಲಯದ ಪ್ರಧಾನ ಅರ್ಚಕ ಆರ್.ಕೆ. ನಾಗೇಂದ್ರ ಬಾಬು, ರಾಘವೇಂದ್ರ ಭಟ್ ಮತ್ತು ಅರ್ಚಕರ ತಂಡದಿಂದ ಪೂಜಾ ವಿಧಿ ವಿಧಾನಗಳು ಜರುಗಿದವು.
ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯ ಸಾವಿರಾರು ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡಿದ್ದರು. ಜಾತ್ರೋತ್ಸವ ಅಂಗವಾಗಿ ದೇವಾಲಯದ ಒಳ ಆವರಣವನ್ನು ವಿಶೇಷವಾಗಿ ಹೂಗಳಿಂದ ಸಿಂಗರಿಸಲಾಗಿತ್ತು.ಅಯ್ಯಪ್ಪ ಸ್ವಾಮಿ ದೇವರ ಮಾಲಾಧಾರಿಗಳು ರಥದ ಮುಂದೆ ಕರ್ಪೂರ ಆರತಿ ಬೆಳಗಿ ಅಯ್ಯಪ್ಪ ಸ್ವಾಮಿ ಘೋಷಣೆ ಕೂಗಿದರು.
ಭಕ್ತರು ತಮ್ಮ ಹರಕೆಯ ಹೆಸರಿನಲ್ಲಿ ಈಡುಗಾಯಿ ಒಡೆಯುತ್ತಿದ್ದ ದೃಶ್ಯ ಕಂಡು ಬಂತು.ಮಡಿಕೇರಿ ಶಾಸಕ ಡಾ.ಮಂತರ್ ಗೌಡ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿದರು.
ಶ್ರೀ ಗಣಪತಿ ದೇವಾಲಯ ಸಮಿತಿ ಅಧ್ಯಕ್ಷ ಎಂ.ಕೆ.ದಿನೇಶ್ ಮಾತನಾಡಿ, ಗೋ ಜಾತ್ರೆ ಮತ್ತು ಕೃಷಿ ಮೇಳ ಡಿಸೆಂಬರ್ 7ರಿಂದ 3 ದಿನಗಳ ಕಾಲ ನಡೆಯುತ್ತದೆ ಎಂದರು.ಪ್ರಧಾನ ಅರ್ಚಕ ಆರ್ ಕೆ ನಾಗೇಂದ್ರ ಬಾಬು ಹಾಜರಿದ್ದರು.
ಗುಂಡೂರಾವ್ ಜಾತ್ರಾ ಮೈದಾನದಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಡಿ.1ರ ತನಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜಾತ್ರಾ ಮೈದಾನದಲ್ಲಿ ನಡೆಯಲಿವೆ ಎಂದು ಸಾಂಸ್ಕೃತಿಕ ಸಮಿತಿ ಸಂಚಾಲಕ ವಿ ಪಿ ಶಶಿಧರ್ ತಿಳಿಸಿದರು.ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ಕುಶಾಲನಗರ ಡಿ ವೈ ಎಸ್ ಪಿ ಆರ್ ವಿ ಗಂಗಾಧರಪ್ಪ ನೇತೃತ್ವದಲ್ಲಿ 100ಕ್ಕೂ ಅಧಿಕ ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.
ದೇವಾಲಯ ಸೇವಾ ಸಮಿತಿಯ ಕಾರ್ಯಕಾರಿ ಮಂಡಳಿ ಅಧ್ಯಕ್ಷ ಎಂ ಕೆ ದಿನೇಶ್, ಉಪಾಧ್ಯಕ್ಷ ಆರ್ ಬಾಬು, ಗೌರವಾಧ್ಯಕ್ಷ ವಿ ಎನ್ ವಸಂತಕುಮಾರ್, ಕಾರ್ಯದರ್ಶಿ ಬಿ ಕೆ ಮುತ್ತಣ್ಣ, ಖಜಾಂಚಿ ಎಸ್ ಕೆ ಸತೀಶ್, ಸಹ ಕಾರ್ಯದರ್ಶಿ ಕೆ ಎನ್ ದೇವರಾಜ್, ನಿರ್ದೇಶಕರಾದ ವಿ ಡಿ ಪಂಡರಿಕಾಕ್ಷ, ಹೆಚ್ ಎಂ ಚಂದ್ರು, ಟಿ ಆರ್ ಶರವಣಕುಮಾರ್ ಮತ್ತು ವಿಶೇಷ ಆಹ್ವಾನಿತರಾದ ಎಚ್ ಎನ್ ರಾಮಚಂದ್ರ, ಡಿ ಅಪ್ಪಣ್ಣ, ವೈ ಆರ್ ನಾಗೇಂದ್ರ ಡಿ ಸಿ ಜಗದೀಶ್, ಕೆ ಎನ್ ಸುರೇಶ್, ಕೆ ಸಿ ನಂಜುಂಡಸ್ವಾಮಿ, ಎಂ ಮುನಿಸ್ವಾಮಿ, ವಿ ಎಸ್ ಆನಂದಕುಮಾರ್, ವ್ಯವಸ್ಥಾಪಕ ಎಸ್ ಕೆ ಶ್ರೀನಿವಾಸ್ ರಾವ್ ಇದ್ದರು.ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಸಾವಿರಾರು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಕುಶಾಲನಗರ ತಾಲೂಕು ಸೇರಿದಂತೆ ನೆರೆಯ ಪಿರಿಯಾಪಟ್ಟಣ, ಅರಕಲಗೂಡು ತಾಲೂಕುಗಳ ಸುತ್ತಮುತ್ತಲ ವ್ಯಾಪ್ತಿಯ ಭಕ್ತಾದಿಗಳು ಪಾಲ್ಗೊಂಡಿದ್ದರು.