ಲೆಕ್ಕಪತ್ರದ ಲೋಪದೋಷ ಸರಿಪಡಿಸಿ ಮಂಡನೆ

| Published : Jul 06 2025, 01:48 AM IST

ಸಾರಾಂಶ

ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಕುಶಾಲನಗರ ಪುರಸಭೆ ಸಾಮಾನ್ಯ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷೆ ಜಯಲಕ್ಷ್ಮಿಚಂದ್ರು ಅಧ್ಯಕ್ಷತೆಯಲ್ಲಿ ಕುಶಾಲನಗರ ಪುರಸಭೆ ಸಾಮಾನ್ಯ ಸಭೆ ನಡೆಯಿತು.ಸಭೆ ಆರಂಭದಲ್ಲಿಯೇ ಪುರಸಭೆ ವತಿಯಿಂದ 2025ನೇ ಫೆಬ್ರವರಿಯಿಂದ ಮೇ ವರೆಗಿನ ಮಾಹೆಯ ಜಮಾ ಖರ್ಚಿನ ವರದಿಯಲ್ಲಿ 88 ಲಕ್ಷ ರು. ವ್ಯತ್ಯಾಸ ಕಂಡುಬಂದಿರುವ ಬಗ್ಗೆ ಸದಸ್ಯ ಡಿ.ಕೆ.ತಿಮ್ಮಪ್ಪ ಪ್ರಸ್ತಾಪಿಸಿ ಸ್ಪಷ್ಟೀಕರಣ ನೀಡುವಂತೆ ಒತ್ತಾಯಿಸಿದರು. ಈ ಬಗ್ಗೆ ಧ್ವನಿಗೂಡಿಸಿದ ಸದಸ್ಯರಾದ ಜೈವರ್ಧನ್ ಹಾಗೂ ಅಮೃತ್ ರಾಜ್ ವರದಿಯ ಲೋಪದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಜೊತೆಗೆ ಜಮಾ ಖರ್ಚಿನ ವರದಿಯನ್ನು ಸರಿಪಡಿಸಿ ಮುಂದಿನ ಸಭೆಗೆ ಮಂಡಿಸಿದ ನಂತರವೇ ಜಮಾ ಖರ್ಚಿನ ವರದಿಗೆ ಅನುಮೋದನೆ ನೀಡುವುದಾಗಿ ವಿಪಕ್ಷ ಸದಸ್ಯರು ಹೇಳಿದರು.

ಲೆಕ್ಕಪತ್ರದಲ್ಲಿ ಆಗಿರುವ‌ ತಾಂತ್ರಿಕ ಲೋಪದೋಷವನ್ನು ಸರಿಪಡಿಸಿ ಸಭೆಗೆ ಮಂಡಿಸಲಾಗುವುದು ಎಂದು ಮುಖ್ಯಾಧಿಕಾರಿ ಗಿರೀಶ್ ಭರವಸೆ ನೀಡಿದರು. ಪಟ್ಟಣ ಮತ್ತು ಪುರಸಭೆ ವ್ಯಾಪ್ತಿಯ ಹಳೆಯ ಮನೆಗಳಿಗೆ ಎನ್ಓಸಿ ನೀಡುತ್ತಿಲ್ಲ ಎಂದು ಸದಸ್ಯ ಜಗದೀಶ್ ಸಭೆಯ ಗಮನಕ್ಕೆ ತಂದರು.ಈ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಲೈಸನ್ಸ್ ಪಡೆಯದ ಅನಧಿಕೃತ ಮನೆಗಳಿಗೆ ಹಾಗೂ ಕಾನೂನು ಉಲ್ಲಂಘಿಸಿರುವ ಮನೆಗಳಿಗೆ ಎನ್.ಒ.ಸಿ. ನೀಡದಂತೆ ಸುಪ್ರೀಂ ಕೋರ್ಟ್ ಆದೇಶವಿದೆ ಎಂದು‌ ಮುಖ್ಯಾಧಿಕಾರಿ ಗಿರೀಶ್ ಹೇಳಿದರು.ಸದಸ್ಯ ಜೈವರ್ಧನ್, ಆನಂದ್ ಕುಮಾರ್, ಅಮೃತ್ ರಾಜ್, ನವೀನ್, ಹರೀಶ್, ಪ್ರಕಾಶ್ ಮಾತನಾಡಿ, ಜನಸಾಮಾನ್ಯರಿಗೆ ತೊಂದರೆ‌‌ ಆಗದಂತೆ ಹಳೆಯ‌ ಮನೆಗಳಿಗೆ‌ಎನ್ ಒ ಸಿ ನೀಡುವಂತೆ ಸಲಹೆ ನೀಡಿದರು.ಅನುದಾನಕ್ಕೆ ಪ್ರಸ್ತಾಪ:

ಮೀನುಗಾರಿಕಾ ಇಲಾಖೆ ವತಿಯಿಂದ ಕುಶಾಲನಗರ, ಸೋಮವಾರಪೇಟೆ ಗಳಲ್ಲಿ ಸುಸಜ್ಜಿತ, ಹೈಟೆಕ್ ಎರಡು ಮೀನುಗಾರಿಕೆ ಮಾರುಕಟ್ಟೆ ನಿರ್ಮಾಣಕ್ಕೆ ಡಿಪಿಆರ್ ಸಲ್ಲಿಸಲಾಗಿದ್ದು, 2 ಕೋಟಿ ರು. ಅನುದಾನಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ ಎಂದು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನಾ ಭರತ್ ಹೇಳಿದರು. ಇದಕ್ಕಾಗಿ ಕುಶಾಲನಗರದ ಕಾವೇರಿ ಬಡಾವಣೆಯಲ್ಲಿ 10 ಸೆಂಟ್ ಜಾಗ ಗುರುತಿಸಲಾಗಿದೆ ಎಂದರು. ಈ ಬಗ್ಗೆ ಮಾತನಾಡಿದ ಸದಸ್ಯ ತಿಮ್ಮಪ್ಪ ಜಾಗದ ದಾಖಲೆಗಳು ಯಾರ ಹೆಸರಿನಲ್ಲಿವೆ ಎಂಬುದನ್ನು ಮೊದಲು ಗುರುತಿಸಿ ಎಲ್ಲಾ ದಾಖಲೆಗಳನ್ನು ಮೀನುಗಾರಿಕೆ ಇಲಾಖೆಗೆ ಸಲ್ಲಿಸಬೇಕು ಎಂದರು. ಈ ಯೋಜನೆ ಅನುಷ್ಠಾನಕ್ಕೆ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು. ಯಾವುದೇ ಯೋಜನೆಗಳನ್ನು ತರುವ ಸಂದರ್ಭ ವಾರ್ಡ್ ಸದಸ್ಯರ ಗಮನಕ್ಕೆ ತರಬೇಕು ಎಂದು ಸದಸ್ಯ ಜಗದೀಶ್ ಆಗ್ರಹಿಸಿದರು.

ಬಸವೇಶ್ವರ ಬಡಾವಣೆ ರಸ್ತೆಯಲ್ಲಿರುವ ತೇಗದ ಮರ ತೆರವುಗೊಳಿಸಿ ರಸ್ತೆ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸದಸ್ಯ ನವೀನ್ ಕುಮಾರ್ ಮನವಿ ಮಾಡಿದರು. ಗೊಂದಿಬಸವನಹಳ್ಳಿ ಗ್ರಾಮದ ರಸ್ತೆಯಲ್ಲಿ ಹುಣಸೆ ಮರ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಪ್ರಕಾಶ್ ಹೇಳಿದರು. ಕೂಡಲೇ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಜಗದೀಶ್ ಒತ್ತಾಯಿಸಿದರು. ಪಾಲಿಟೆಕ್ನಿಕ್ ಕಾಲೇಜು ಮುಂಭಾಗ ಹಾಗೂ ಕೆಎಸ್ಆರ್ಟಿಸಿ ಮುಂದೆ ಇಂದಿರಾ ಕ್ಯಾಂಟಿನ್ ಬಳಿ ಇರುವ ದೊಡ್ಡ ಮರದ ರೆಂಬೆಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಪ್ರಕಾಶ್ ಒತ್ತಾಯಿಸಿದರು. ಈ ಸಂದರ್ಭ ಸದಸ್ಯರಾದ ಪಿ ಅಮೃತರಾಜ್ ಸರ್ಕಾರಿ ಬಸ್ ನಿಲ್ದಾಣದ ಆವರಣದಲ್ಲಿ ಬೆಳೆಸಿರುವ ಮರ ಗಿಡಗಳಿಗೆ ಹಾನಿ ಮಾಡದೆ ಮರಗಳಲ್ಲಿ ನೆಲೆ ಕಂಡಿರುವ ವಲಸೆ ಪಕ್ಷಿಗಳನ್ನು ಸಂರಕ್ಷಿಸುವಂತೆ ಸಾರ್ವಜನಿಕ ಹಿತಾಸಕ್ತಿ ಮೇರೆಗೆ ರಾಜ್ಯ ಉಚ್ಚ ನ್ಯಾಯಾಲಯ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವ ಕುರಿತು ಸಭೆಯ ಗಮನಕ್ಕೆ ತಂದರು. ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು:

ಬೆಂಡೆ ಬೆಟ್ಟದಿಂದ‌ ಕಾಡಾನೆಗಳು ಗೊಂದಿಬಸವನಹಳ್ಳಿ ಕಡೆಗೆ ಬರುತ್ತಿವೆ. ಇವುಗಳ ನಿಯಂತ್ರಣ ಕಂದಕ ನಿರ್ಮಾಣ ಮಾಡಬೇಕು. ಹಾಗೂ ಮಂಗಗಳ ಹಾವಳಿ ನಿಯಂತ್ರಣ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಸದಸ್ಯರಾದ ಪ್ರಕಾಶ್, ರೇಣುಕಾ ಒತ್ತಾಯಿಸಿದರು.

ದಂಡಿನಪೇಟೆ ಬಡಾವಣೆಯಲ್ಲಿ ವಿದ್ಯುತ್ ಕಂಬಗಳು ಹಾನಿಯಾಗಿ ಅಪಾಯವನ್ನು ಆಹ್ವಾನಿಸುತ್ತಿದ್ದರೂ ಅವುಗಳ ಬದಲಾವಣೆ ಮಾಡಿಲ್ಲ ಎಂದು ಸದಸ್ಯ ಆನಂದ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು. ಸದಸ್ಯರಾದ ಶಿವ ಶಂಕರ್, ಜಯಲಕ್ಷ್ಮಮ್ಮ, ನವೀನ , ಹರೀಶ್, ರೂಪ ಮಾತನಾಡಿ ತಮ್ಮ ವಾರ್ಡ್ ಗಳಲ್ಲಿನ ಹಳೆಯ ವಿದ್ಯುತ್ ಕಂಬಗಳನ್ನು ಬದಲಿಸಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಮಾತನಾಡಿ ಚೆಸ್ಕಂ ಅಧಿಕಾರಿ ‌ಸುಮೇಶ್ ಈಗಾಗಲೇ ಇಲಾಖೆ ವತಿಯಿಂದ ಪಟ್ಟಣದ ಎಲ್ಲಾ ಹಳೆಯ ವಿದ್ಯುತ್ ಕಂಬಗಳ ಬದಲಾವಣೆ ಹಾಗೂ ಹೊಸದಾಗಿ ಕೇಬಲ್ ಅಳವಡಿಕೆ, ಹೊಸ ಬಡಾವಣೆಗಳಿಗೆ ಟಿಸಿ ಅಳವಡಿಕೆ ಸೇರಿದಂತೆ ಇನ್ನಿತರ ಕಾಮಗಾರಿಗಾಗಿ ರು.10 ಕೋಟಿಗೆ ಡಿಪಿಆರ್ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸದ್ಯದಲ್ಲಿಯೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಜೊತೆಗೆ ಅಪಾಯಕಾರಿ ವಿದ್ಯುತ್ ಕಂಬಗಳನ್ನು ತ್ವರಿತವಾಗಿ ಬದಲಾವಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿ ಸುಮೇಶ್ ತಿಳಿಸಿದರು.ತನಿಖೆ ನಡೆಸಬೇಕು:

ಯುಜಿಡಿ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಕಳೆದ ಸಭೆಯಲ್ಲಿ ಯುಜಿಡಿಗೆ ಬಿಡುಗಡೆಯಾದ ಅನುದಾನ ಹಾಗೂ ಕಾಮಗಾರಿ ಬಗ್ಗೆ ತನಿಖೆ ನಡೆಸಬೇಕು ಎಂದು ಕೈಗೊಂಡ ನಿರ್ಣಯದ ಬಗ್ಗೆ ಏನು ಕ್ರಮ ಕೈಗೊಂಡಿದ್ದಿರಿ ಎಂದು ಸದಸ್ಯ ಆನಂದ್ ಕುಮಾರ್, ಪ್ರಕಾಶ್ ಅಧ್ಯಕ್ಷೆ ಯನ್ನು ಪ್ರಶ್ನಿಸಿದರು. ಸದಸ್ಯ ತಿಮ್ಮಪ್ಪ ಮಾತನಾಡಿ ಸರ್ಕಾರದ ಹಣ ಪೋಲಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದರು. ಜಲಮಂಡಳಿ ಕಾರ್ಯಪಾಲಕ ಎಂಜಿನಿಯರ್ ಉಮೇಶ್‌ಚಂದ್ರ ಮಾತನಾಡಿ, ಯುಜಿಡಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಈಗ ಎಲ್ಲಾ ಮನೆಗಳಿಗೆ ಸಂಪರ್ಕ ನೀಡಿ ನಿರ್ವಹಣೆ ಮಾಡಬೇಕಾಗಿದೆ. ಅದಕ್ಕಾಗಿ 12.5 ಲಕ್ಷ ರು. ಹಣವನ್ನು ಪುರಸಭೆ ವತಿಯಿಂದ ನೀಡಬೇಕು ಎಂದು ಹೇಳಿದರು. ಯುಜಿಡಿ‌ ಕಾಮಗಾರಿ ಸರಿಯಾಗಿ ನಡೆದಿಲ್ಲ. ಯುಜಿಡಿ ಯಶಸ್ವಿಯಾಗಿರುವ‌ ಪಟ್ಟಣಗಳಿಗೆ ಪುರಸಭೆ ವತಿಯಿಂದ ನಿಯೋಗ ತೆರಳಿ ಪರಿಶೀಲನೆ ನಡೆಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳೋಣ ಎಂದು ಹೇಳಿದರು.ಪುರಸಭೆ ವತಿಯಿಂದ ನಿರ್ಮಾಣ ಮಾಡಿರುವ‌ ವಾಣಿಜ್ಯ ಸಂಕೀರ್ಣಗಳ ಹರಾಜಿಗೆ ಟೆಂಡರ್ ಕರೆಯಲು ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು. ಪುರಸಭೆ ವತಿಯಿಂದ ಪೊಲೀಸ್ ಇಲಾಖೆ ಮನವಿ ಮೇರೆಗೆ ಅಪರಾಧ ತಡೆಯಲು ಹಾಗೂ ಪತ್ತೆ ಹಚ್ಚಲು ಅನುಕೂಲವಾಗುವಂತೆ ಪಟ್ಟಣ ವಿವಿಧ ಸಿಸಿ ಟಿವಿ ಕ್ಯಾಮರಾ ಅಳವಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.ಗುಂಡೂರಾವ್ ಬಡಾವಣೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮಂಜೂರು ಆಗಿರುವ‌ 25 ಸೆಂಟ್ ಜಾಗದ ಜೊತೆಗೆ ಹೆಚ್ಚುವರಿಯಾಗಿ 25 ಸೆಂಟ್ ಜಾಗ ನೀಡಲು ಸಮ್ಮತಿ ಸೂಚಿಸಲಾಯಿತು. ಪುರಸಭೆ ವ್ಯಾಪ್ತಿಯ ರಸ್ತೆಗಳಲ್ಲಿರುವ ಗುಂಡಿ ಮುಚ್ಚುವ ಕಾಮಗಾರಿಗೆ ಅಧ್ಯಕ್ಷರು ಮಂಜೂರಾತಿ ನೀಡಿದ್ದು, ಕಾಮಗಾರಿಗೆ ಅನುಮೋದನೆ ನೀಡಲಾಯಿತು.ಈ ಸಂದರ್ಭ ಪುರಸಭೆ ಉಪಾಧ್ಯಕ್ಷೆ ಪುಟ್ಟಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ವಾರ್ಡಿನ ಸದಸ್ಯರು, ನಾಮ ನಿರ್ದೇಶಿತ ಸದಸ್ಯರು ಕಂದಾಯ ಅಧಿಕಾರಿ ರಾಮು, ಆರೋಗ್ಯ ಅಧಿಕಾರಿ ಉದಯಕುಮಾರ್, ವಿವಿಧ ಇಲಾಖೆ‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.