ಯೂರಿಯಾ ಗೊಬ್ಬರ ಅಭಾವ: ಖರೀದಿಗೆ ಮುಗಿಬಿದ್ದ ರೈತರು

| Published : Jul 19 2025, 01:00 AM IST

ಯೂರಿಯಾ ಗೊಬ್ಬರ ಅಭಾವ: ಖರೀದಿಗೆ ಮುಗಿಬಿದ್ದ ರೈತರು
Share this Article
  • FB
  • TW
  • Linkdin
  • Email

ಸಾರಾಂಶ

ಕುಷ್ಟಗಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉತ್ತಮ ಮಳೆ ಆಗಿದ್ದು, ಇದರಿಂದ ರಸಗೊಬ್ಬರಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಅದರಲ್ಲೂ ಕಡಿಮೆ ದರವಿರುವ ಕಾರಣಕ್ಕೆ ಯೂರಿಯಾ ಗೊಬ್ಬರಕ್ಕೆ ವ್ಯಾಪಕ ಬೇಡಿಕೆ ಬಂದಿದೆ.

ಕುಷ್ಟಗಿ:

ಕೃಷಿಗೆ ಅಗತ್ಯವಾದ ಯೂರಿಯಾ ಗೊಬ್ಬರ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಕೊರತೆ ಉಂಟಾಗಿದ್ದು, ಸಮರ್ಪಕವಾಗಿ ಗೊಬ್ಬರ ಸಿಗದೆ ರೈತರು ಅಂಗಡಿಯಿಂದ ಅಂಗಡಿಗೆ, ಊರಿಂದ ಊರಿಗೆ ಅಲೆಯುವಂತೆ ಆಗಿದೆ.

ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉತ್ತಮ ಮಳೆ ಆಗಿದ್ದು, ಇದರಿಂದ ರಸಗೊಬ್ಬರಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಅದರಲ್ಲೂ ಕಡಿಮೆ ದರವಿರುವ ಕಾರಣಕ್ಕೆ ಯೂರಿಯಾ ಗೊಬ್ಬರಕ್ಕೆ ವ್ಯಾಪಕ ಬೇಡಿಕೆ ಬಂದಿದೆ. ಮೆಕ್ಕೆಜೋಳ, ಸಜ್ಜೆ ಸೇರಿದಂತೆ ಅನೇಕ ಬೆಳೆ ಬೆಳೆಯಲಾಗುತ್ತದೆ ಅಗತ್ಯ ಪ್ರಮಾಣದಲ್ಲಿ ಯೂರಿಯಾ ನೀಡಿದರೆ ಬೆಳೆಗಳು ಚೇತರಿಸಿಕೊಂಡು ಬೆಳವಣಿಗೆಯಾತ್ತದೆ ಎಂಬ ಉದ್ದೇಶದಿಂದ ಖರೀದಿಸಲು ರೈತರು ಮುಂದಾಗಿದ್ದಾರೆ.

ಮುಗಿಬಿದ್ದ ಜನರು:

ಗುರುವಾರ ರಾತ್ರಿ ಪಟ್ಟಣಕ್ಕೆ ಯುರಿಯಾ ಗೊಬ್ಬರ ಬಂದಿದೆ ಎಂಬ ಸುದ್ದಿ ಕೇಳಿದ ನೂರಾರು ರೈತರು ಶುಕ್ರವಾರ ಪಟ್ಟಣದ ಗೊಬ್ಬರದ ಅಂಗಡಿಗಳ ಮುಂದೆ ಗೊಬ್ಬರ ಖರೀದಿಗಾಗಿ ಮುಗಿಬಿದ್ದರು. ಕೆಲವರು ಸಮರ್ಪಕ ಪ್ರಮಾಣದಲ್ಲಿ ಯೂರಿಯಾ ಗೊಬ್ಬರನ್ನು ಸರಬರಾಜು ಮಾಡದ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು ಯೂರಿಯಾ ಗೊಬ್ಬರದ ಅವಶ್ಯಕತೆ ಹೆಚ್ಚಿದೆ. ಬೇಡಿಕೆಗೆ ತಕ್ಕಂತೆ ಗೊಬ್ಬರ ಪೂರೈಸಲು ಸರ್ಕಾರಕ್ಕೆ ಆಗುತ್ತಿಲ್ಲ. ಇದರಿಂದ ಖರೀದಿಗೆ ಮುಗಿಬೀಳಬೇಕಾಗಿದೆ. ಕೂಡಲೇ ಸರ್ಕಾರ ಅಗತ್ಯಕ್ಕೆ ತಕ್ಕಂತೆ ಗೊಬ್ಬರ ಪೂರೈಸಬೇಕೆಂದು ರೈತರು ಒತ್ತಾಯಿಸಿದ್ದಾರೆ.

ರೈತರ ಬೇಡಿಕೆ ತಕ್ಕಂತೆ ಗೊಬ್ಬರ ಪೂರೈಸಲಾಗುವುದು. ಶುಕ್ರವಾರ ಕುಷ್ಟಗಿಗೆ 95 ಟನ್ ಯೂರಿಯಾ ಗೊಬ್ಬರ ಬಂದಿದ್ದು ಮತ್ತಷ್ಟು ಬರಲಿದೆ. ಆದರಿಂದ ರೈತರು ಆತಂಕಕ್ಕೆ ಒಳಗಾಗಬಾರದು.

ನಾಗರಾಜ ಕಾತರಕಿ ಸಹಾಯಕ ನಿರ್ದೇಶಕ ಕೃಷಿ ಇಲಾಖೆ ಕುಷ್ಟಗಿ