ಅಪರಾಧ ನಡೆದ ಬಳಿಕ ತನಿಖೆ ನಡೆಸುವುದಕ್ಕಿಂತ, ಅಪರಾಧ ನಡೆಯದಂತೆ ಮುನ್ನೆಚ್ಚರಿಕೆ ವಹಿಸುವುದು ಮುಖ್ಯ. ಸಾರ್ವಜನಿಕರಲ್ಲಿ ಕಾನೂನು ಅರಿವು ಮೂಡಿಸಿ, ಅಪರಾಧಗಳ ಬಗ್ಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ಕುಷ್ಟಗಿ ಪೊಲೀಸರು ಇದೀಗ ಸಾರ್ವಜನಿಕ ಸ್ಥಳಗಳಲ್ಲೇ ಜಾಗೃತಿ ಫಲಕಗಳ ಅಳವಡಿಕೆ ಮೂಲಕ ಕಾನೂನು ಪಾಠ ಆರಂಭಿಸಿದ್ದಾರೆ.

ಪರಶಿವಮೂರ್ತಿ ಮಾಟಲದಿನ್ನಿ

ಕುಷ್ಟಗಿ: ಅಪರಾಧ ನಡೆದ ಬಳಿಕ ತನಿಖೆ ನಡೆಸುವುದಕ್ಕಿಂತ, ಅಪರಾಧ ನಡೆಯದಂತೆ ಮುನ್ನೆಚ್ಚರಿಕೆ ವಹಿಸುವುದು ಮುಖ್ಯ. ಸಾರ್ವಜನಿಕರಲ್ಲಿ ಕಾನೂನು ಅರಿವು ಮೂಡಿಸಿ, ಅಪರಾಧಗಳ ಬಗ್ಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ಕುಷ್ಟಗಿ ಪೊಲೀಸರು ಇದೀಗ ಸಾರ್ವಜನಿಕ ಸ್ಥಳಗಳಲ್ಲೇ ಜಾಗೃತಿ ಫಲಕಗಳ ಅಳವಡಿಕೆ ಮೂಲಕ ಕಾನೂನು ಪಾಠ ಆರಂಭಿಸಿದ್ದಾರೆ.

ಕುಷ್ಟಗಿ ವೃತ್ತದ ಸಿಪಿಐ ವಿಶ್ವನಾಥ ಹಿರೇಗೌಡರ ಹಾಗೂ ಕುಷ್ಟಗಿ ಪೊಲೀಸ್ ಠಾಣೆಯ ಪಿಎಸ್ಐ ಹನುಮಂತಪ್ಪ ತಳವಾರ ಅವರ ನೇತೃತ್ವದಲ್ಲಿ ಪಟ್ಟಣ ಸೇರಿದಂತೆ ಠಾಣಾ ವ್ಯಾಪ್ತಿಯ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಫಲಕಗಳನ್ನು ಅಳವಡಿಸಲಾಗಿದೆ.

ಫಲಕಗಳಲ್ಲಿ ಏನಿದೆ?: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಸಂಬಂಧಿಸಿದ ಪೋಕ್ಸೊ ಕಾಯ್ದೆ, ಸೈಬರ್ ಅಪರಾಧಗಳಿಂದ ಸುರಕ್ಷತೆ, ಕಳ್ಳತನ ತಡೆ ಕ್ರಮಗಳು, ಡ್ರಗ್ಸ್ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮ, ಸಾರ್ವಜನಿಕರ ಸುರಕ್ಷತೆ ಸೇರಿದಂತೆ ಪೊಲೀಸ್ ಇಲಾಖೆಯ ವಿವಿಧ ಜನಪರ ಯೋಜನೆಗಳು ಹಾಗೂ ಸಹಾಯವಾಣಿ ಸೇವೆಗಳ ಮಾಹಿತಿಯನ್ನು ಫಲಕಗಳಲ್ಲಿ ನೀಡಲಾಗಿದೆ.

ಮೊಬೈಲ್ ಹಾಗೂ ಇಂಟರ್ನೆಟ್ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೈಬರ್ ವಂಚನೆಗಳ ಬಗ್ಗೆ ಸಾರ್ವಜನಿಕರಲ್ಲಿ ಎಚ್ಚರಿಕೆ ಮೂಡಿಸುವುದು ಅಗತ್ಯವಾಗಿದೆ. ಅಪರಿಚಿತ ಲಿಂಕ್‌ ಕ್ಲಿಕ್ ಮಾಡುವುದು, ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವುದು, ಬ್ಯಾಂಕ್ ಖಾತೆ ಅಥವಾ ಒಟಿಪಿ ವಿವರಗಳನ್ನು ನೀಡುವುದರಿಂದ ಉಂಟಾಗಬಹುದಾದ ಅಪಾಯಗಳ ಕುರಿತು ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಅದೇ ರೀತಿ ಮಕ್ಕಳ ಸುರಕ್ಷತೆ, ಮಾದಕ ವಸ್ತುಗಳಿಂದ ದೂರವಿರುವುದು, ಕಳ್ಳತನ ತಡೆ ಹಾಗೂ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡುವ ಜವಾಬ್ದಾರಿಯ ಬಗ್ಗೆಯೂ ಸಾರ್ವಜನಿಕರಿಗೆ ತಿಳಿಸಲಾಗುತ್ತಿದೆ.

ಗ್ರಾಮಗಳಿಗೂ ತಲುಪಿದ ಜಾಗೃತಿ: ಪೊಲೀಸ್ ಇಲಾಖೆಯ ಜಾಗೃತಿ ಕಾರ್ಯಕ್ರಮಗಳು ಪಟ್ಟಣ ಪ್ರದೇಶದಲ್ಲಷ್ಟೇ ಸೀಮಿತವಲ್ಲ, ಗ್ರಾಮಗಳಲ್ಲೂ ಫಲಕ ಅಳವಡಿಸಲಾಗಿದೆ. ಬಸ್ ನಿಲ್ದಾಣ, ಜನಸಂದಣಿ ಪ್ರದೇಶಗಳು ಹಾಗೂ ಸಾರ್ವಜನಿಕರ ಗಮನ ಸೆಳೆಯುವ ಸ್ಥಳಗಳಲ್ಲಿ ಫಲಕಗಳನ್ನು ಅಳವಡಿಸಲಾಗುತ್ತಿದೆ.

ಕುಷ್ಟಗಿ ಪೊಲೀಸರ ಜಾಗೃತಿ ಫಲಕಗಳ ಅಭಿಯಾನವು ಅಪರಾಧ ನಡೆದ ಬಳಿಕ ಕ್ರಮಕ್ಕಿಂತ ಅಪರಾಧ ನಡೆಯುವ ಮುನ್ನ ಎಚ್ಚರಿಕೆ ಎಂಬ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸುವ ಪ್ರಯತ್ನವಾಗಿದೆ. ಪೊಲೀಸ್ ಇಲಾಖೆ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಾಗೃತಿ ಮೂಡಿಸುವ ಉದ್ದೇಶ: ಅಪರಾಧ ನಿಯಂತ್ರಣದಲ್ಲಿ ಪೊಲೀಸರ ಜತೆಗೆ ಸಾರ್ವಜನಿಕರ ಸಹಕಾರವೂ ಅತ್ಯಂತ ಮುಖ್ಯ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ಅದನ್ನು ನಿರ್ಲಕ್ಷಿಸದೆ ಪೊಲೀಸರ ಗಮನಕ್ಕೆ ತರಬೇಕು. ಕಾನೂನು ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರಮುಖ ಸ್ಥಳಗಳಲ್ಲಿ ಜಾಗೃತಿ ಫಲಕಗಳನ್ನು ಅಳವಡಿಸಲಾಗುತ್ತಿದೆ. ಅಪರಾಧ ನಡೆಯುವ ಮುನ್ನವೇ ಮುನ್ನೆಚ್ಚರಿಕೆ ವಹಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುವುದು ಈ ಅಭಿಯಾನದ ಉದ್ದೇಶ ಎಂದು ಕುಷ್ಟಗಿ ಸಿಪಿಐ ವಿಶ್ವನಾಥ ಹಿರೇಗೌಡರ್ ಹೇಳಿದರು.

ಮುನ್ನೆಚ್ಚರಿಕೆಯಿಂದ ತಡೆಯಲು ಸಾಧ್ಯ: ಮಕ್ಕಳ ಸುರಕ್ಷತೆ ಹಾಗೂ ಸೈಬರ್ ಅಪರಾಧಗಳ ಕುರಿತು ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಅಪರಿಚಿತ ವ್ಯಕ್ತಿಗಳಿಂದ ಬರುವ ಕರೆ, ಸಂದೇಶ ಹಾಗೂ ಲಿಂಕ್‌ಗಳಿಗೆ ಪ್ರತಿಕ್ರಿಯಿಸುವ ಮುನ್ನ ಪರಿಶೀಲನೆ ನಡೆಸಬೇಕು. ಮಕ್ಕಳ ಮೇಲೆ ದೌರ್ಜನ್ಯ ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಸಾರ್ವಜನಿಕರು ಜಾಗ್ರತರಾಗಿದ್ದರೆ ಹಲವು ಅಪರಾಧಗಳನ್ನು ಮುನ್ನೆಚ್ಚರಿಕೆಯ ಮೂಲಕವೇ ತಡೆಯಲು ಸಾಧ್ಯ ಎಂದು ಕುಷ್ಟಗಿ ಪಿಎಸ್ಐ ಹನುಮಂತಪ್ಪ ತಳವಾರ ಹೇಳಿದರು.