ಸಾರಾಂಶ
ಕುಷ್ಟಗಿ:
ಗದಗ-ವಾಡಿ ರೈಲ್ವೆ ಕಾಮಗಾರಿ ಕುಷ್ಟಗಿ ಪಟ್ಟಣದ ವರೆಗೆ ಅಂತಿಮಗೊಂಡ ಹಿನ್ನಲೆಯಲ್ಲಿ ಶುಕ್ರವಾರ ರೈಲು ಓಡಿಸುವ ಮೂಲಕ ಅಂತಿಮ ಪ್ರಾಯೋಗಿಕ ಪರೀಕ್ಷೆ ಕೈಗೊಂಡಿದ್ದು ಪರೀಕ್ಷೆ ಕಾರ್ಯ ಯಶಸ್ವಿಯಾಗಿದೆ.ಪಟ್ಟಣದಿಂದ ಲಿಂಗನಬಂಡಿ ವರೆಗೆ 10 ಕಿಲೋ ಮೀಟರ್ ರೈಲ್ವೆ ಮಾರ್ಗದ ಕಾಮಗಾರಿ ಅಂತಿಮಗೊಂಡ ಹಿನ್ನಲೆ ಬೆಂಗಳೂರಿನ ರೈಲ್ವೆ ಸುರಕ್ಷತಾ ಆಯುಕ್ತ ಎ.ಎಂ. ಚೌಧರಿ ನೇತೃತ್ವದಲ್ಲಿ ಪರಿಣಿತರ ಅಧಿಕಾರಿಗಳ ತಂಡವು ರೈಲ್ವೆ ಮಾರ್ಗದಲ್ಲಿನ ಹಳಿ ಜೋಡಣೆ, ಹಳಿಗಳ ಅಳತೆ, ತಿರುವು, ಬ್ರಿಡ್ಜ್ ಹಾಗೂ ರೈಲು ನಿಲ್ದಾಣದಲ್ಲಿನ ಮೂಲಭೂತ ಸೌಕರ್ಯ ಸೇರಿದಂತೆ ಅನೇಕ ಕಾಮಗಾರಿ ಪರಿಶೀಲಿಸಿತು.
129 ಕಿಲೋ ಮೀಟರ್ ಸ್ಪೀಡ್:ಡೀಸೆಲ್ ಆಧಾರಿತ ಎರಡು ರೈಲುಗಳ ಮೂಲಕ 129 ವೇಗದ ಮಿತಿಯಲ್ಲಿ ವೇಗವಾಗಿ ಓಡಿಸಲಾಯಿತು. ಈ ವೇಳೆ ಯಾವುದೇ ತೊಂದರೆ ಕಂಡು ಬಂದಿಲ್ಲ. ಅಧಿಕಾರಿಗಳಿಗೆ ಕೆಲವು ದಾಖಲಾತಿ ಒದಗಿಸುವಂತೆ ಸೂಚನೆ ಕೊಡಲಾಗಿದ್ದು ದಾಖಲಾತಿ ಕೊಟ್ಟ ನಂತರ ಮುಂದಿನ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ.
ಈ ಕುರಿತು ಹುಬ್ಬಳ್ಳಿ ಡಿವಿಜನಲ್ ಮ್ಯಾನೇಜರ್ ಬೇಲಾ ಮೀನಾ ಮಾತನಾಡಿ, ಪ್ರಾಯೋಗಿಕ ಪರೀಕ್ಷಾ ಕಾರ್ಯ ಯಸಶ್ವಿಯಾಗಿದ್ದು ಇನ್ನೂ ಇಲಾಖೆಯಿಂದ ಕೆಲವು ದಾಖಲಾತಿ ಕೇಳಿದ್ದು ನಂತರ ವರದಿಯನ್ನು ಸರ್ಕಾರಕ್ಕೆ ಕಳಿಸುವ ಮೂಲಕ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ. ಉದ್ಘಾಟನೆಯ ದಿನಾಂಕವನ್ನು ಸರ್ಕಾರ ನಿರ್ಧರಿಸಲಿದೆ ಎಂದು ಹೇಳಿದರು.ಎಇಇ ಅಶೋಕ ಮುದಗೌಡರ ಮಾತನಾಡಿ, 129 ವೇಗದ ಮೀತಿಯಲ್ಲಿ ರೈಲು ಓಡಿದ್ದು ಯಾವುದೇ ತೊಂದರೆಗಳು ಇಲ್ಲ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ ಎಂದರು.
ಜನರ ಸಂತಸ:ರೈಲ್ವೆ ಸಂಚಾರದ ಪ್ರಾಯೋಗಿಕ ಪರೀಕ್ಷೆಗಾಗಿ ಬಂದಿರುವ ರೈಲು ನೋಡಿದ ಜನರು ಪಟ್ಟಣದಲ್ಲಿ ರೈಲು ಪ್ರಾರಂಭವಾಗುತ್ತಿದೆ ಎಂದು ಮುಗಿಬಿದ್ದು ನೋಡಲು ಆಗಮಿಸಿದ್ದರು. ರೈಲಿನಲ್ಲಿ ಓಡಾಡಿ ಪೋಟೋ ತೆಗೆದುಕೊಂಡು ಸಂಭ್ರಮಿಸಿದರು.
ಈ ವೇಳೆ ರೈಲ್ವೆ ಅಧಿಕಾರಿಗಳಿಗೆ ಸ್ಥಳೀಯರು ಕುಷ್ಟಗಿ-ನರಗುಂದ-ಘಟಪ್ರಭಾ ಹೊಸ ರೈಲ್ವೆ ಮಾರ್ಗ ಆರಂಭಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು. ಹುಬ್ಬಳಿ, ಬೆಂಗಳೂರು, ತಿರುಪತಿ, ಕೋಲ್ಲಾಪುರ ಸೇರಿದಂತೆ ವಿವಿಧ ನಗರಗಳಿಗೆ ತೆರಳಲು ಕುಷ್ಟಗಿ ಕೇಂದ್ರ ಬಿಂದುವಾಗಿದೆ. ಸಮೀಪದ ಇಲಕಲ್ಲ, ಗಜೇಂದ್ರಗಡ, ತಾವರಗೇರಾ ಇದ್ದು ಕುಷ್ಟಗಿ ರೈಲು ಸಂಚಾರಿ ಅವಲಂಬನೆಯಾಗಿದೆ. ಹೀಗಾಗಿ ಕುಷ್ಟಗಿಯ ರೈಲ್ವೆ ನಿಲ್ದಾಣವನ್ನು ಜಂಕ್ಷನ್ ಪಾಯಿಂಟ್ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.