ಕುಷ್ಟಗಿ: ದುಷ್ಟ ಶಕ್ತಿಗಳ ವಿರುದ್ಧ ಶಿಷ್ಟ ಶಕ್ತಿಗಳ ವಿಜಯದ ಸಂಕೇತವಾದ ವಿಜಯದಶಮಿ ಹಬ್ಬವನ್ನು ಪಟ್ಟಣ ಸೇರಿದಂತೆ ತಾಲೂಕಿನ ದೋಟಿಹಾಳ, ಕೇಸೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬುಧವಾರ ಸಡಗರ-ಸಂಭ್ರಮದಿಂದ ಆಚರಿಸಲಾಯಿತು.

ಆಯುಧ ಪೂಜೆ, ಶಕ್ತಿ ದೇವತೆಗಳ ಆರಾಧನೆ, ಸಾಂಪ್ರದಾಯಿಕ ಭೋಜನ, ಉಡಿ ತುಂಬುವ ಕಾರ್ಯಕ್ರಮ ಹಾಗೂ ಬನ್ನಿ ವಿನಿಮಯದ ಮೂಲಕ ಗ್ರಾಮೀಣ ಜನರು ಹಬ್ಬದ ಸಂಭ್ರಮ ಹಂಚಿಕೊಂಡರು.

ವಿಜಯದಶಮಿ ಅಂಗವಾಗಿ ರೈತರು ತಮ್ಮ ಕೃಷಿ ಉಪಕರಣಗಳು, ಟ್ರ್ಯಾಕ್ಟರ್ ಹಾಗೂ ಇತರ ಯಂತ್ರೋಪಕರಣಗಳನ್ನು ಸ್ವಚ್ಛಗೊಳಿಸಿ ಹೂವು, ಕಬ್ಬು ಮತ್ತು ಜೋಳದ ದಂಟುಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಿದರು. ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ಕುಟುಂಬದ ಸುಖ-ಶಾಂತಿಗಾಗಿ ದೇವರಲ್ಲಿ ಪ್ರಾರ್ಥಿಸಿದರು.

ಕೃಷಿಯನ್ನೇ ನಂಬಿ ಬದುಕುವ ರೈತರು ಸಂಕಷ್ಟಗಳ ನಡುವೆಯೂ ಸಂಪ್ರದಾಯವನ್ನು ಮುಂದುವರಿಸಿದ್ದು ವಿಶೇಷವಾಗಿತ್ತು.

ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆಗಳು ನಡೆದವು. ಮಹಿಳೆಯರು ಮನೆಗಳಲ್ಲಿ ಪೂಜೆ ಸಲ್ಲಿಸಿ ಹೋಳಿಗೆ, ಹುಗ್ಗಿ, ಚಪಾತಿ ಹಾಗೂ ವಿವಿಧ ಪಲ್ಯ ಸೇರಿದಂತೆ ಸಾಂಪ್ರದಾಯಿಕ ಅಡುಗೆಗಳನ್ನು ತಯಾರಿಸಿದರು. ಕುಟುಂಬದ ಸದಸ್ಯರು ಒಟ್ಟಿಗೆ ಕುಳಿತು ಊಟ ಮಾಡಿದರು. ಹೊರ ಊರುಗಳಿಗೆ ಉದ್ಯೋಗಕ್ಕಾಗಿ ತೆರಳಿದ್ದವರು ಗ್ರಾಮಗಳಿಗೆ ಮರಳಿ ಕುಟುಂಬದವರೊಂದಿಗೆ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು.


ಬನ್ನಿ ವಿನಿಮಯಕ್ಕೆ ವಿಶೇಷ ಮಹತ್ವ: ವಿಜಯದಶಮಿ ಹಬ್ಬದ ಪ್ರಮುಖ ಆಚರಣೆಯಾದ ಬನ್ನಿ ಮುಡಿಯುವ ಕಾರ್ಯಕ್ರಮವು ಗ್ರಾಮಗಳಲ್ಲಿ ಸಂಭ್ರಮದಿಂದ ನಡೆಯಿತು. ದೇವಸ್ಥಾನ ಹಾಗೂ ಶಮಿ ವೃಕ್ಷಗಳ ಬಳಿ ಪೂಜೆ ಸಲ್ಲಿಸಿದ ಬಳಿಕ ಜನರು ಪರಸ್ಪರ ಬನ್ನಿ ಎಲೆಗಳನ್ನು ವಿನಿಮಯ ಮಾಡಿಕೊಂಡರು. ಮನೆಮನೆಗೆ ತೆರಳಿ ಹಿರಿಯರಿಗೆ ಬನ್ನಿ ನೀಡಿ ಆಶೀರ್ವಾದ ಪಡೆದರು.

ನಾವು ನೀವು ಬನ್ನಿ ತಗೊಂಡು ಬಂಗಾರದಂಗ ಇರೋಣ ಎಂಬ ಆತ್ಮೀಯ ಮಾತುಗಳೊಂದಿಗೆ ಪರಸ್ಪರ ಶುಭಾಶಯ ಕೋರಿದರು.

ಹೀಗೆ ಕೃಷಿ ಉಪಕರಣಗಳ ಪೂಜೆ, ದೇವರ ಆರಾಧನೆ, ಸಾಂಪ್ರದಾಯಿಕ ಭೋಜನ ಹಾಗೂ ಬನ್ನಿ ವಿನಿಮಯದೊಂದಿಗೆ ಕುಷ್ಟಗಿ ತಾಲೂಕಿನಲ್ಲಿ ವಿಜಯದಶಮಿ ಹಬ್ಬವು ಸಂಭ್ರಮದಿಂದ ಸಂಪನ್ನಗೊಂಡಿತು.

ಒಗ್ಗಟ್ಟಿನಿಂದ ಬದುಕಬೇಕು: ವಿಜಯದಶಮಿ ಹಬ್ಬ ಕೆಟ್ಟದರ ವಿರುದ್ಧ ಒಳ್ಳೆಯದರ ವಿಜಯವನ್ನು ಸಾರುತ್ತದೆ. ಬನ್ನಿ ಎಲೆಗಳನ್ನು ಬಂಗಾರವೆಂದು ಭಾವಿಸಿ ಪರಸ್ಪರ ವಿನಿಮಯ ಮಾಡಿಕೊಳ್ಳುವುದು ನಮ್ಮ ಸಂಪ್ರದಾಯದ ಭಾಗವಾಗಿದೆ. ಈ ಆಚರಣೆಯು ಜನರಲ್ಲಿ ಪ್ರೀತಿ, ವಿಶ್ವಾಸ ಹಾಗೂ ಸೌಹಾರ್ದವನ್ನು ಬೆಳೆಸುತ್ತದೆ. ಹಬ್ಬದ ಸಂದರ್ಭದಲ್ಲಿ ಎಲ್ಲರೂ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಒಗ್ಗಟ್ಟಿನಿಂದ ಬದುಕಬೇಕು ಎಂದು ಕೇಸೂರು ಚಂದ್ರಶೇಖರ ದೇವರು ಹಿರೇಮಠ ಹೇಳಿದರು.