ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಕುಷ್ಟಗಿ ಸಜ್ಜು

| Published : Oct 24 2025, 01:00 AM IST

ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಕುಷ್ಟಗಿ ಸಜ್ಜು
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವಿನ ಪ್ರಬಲ ಸ್ಪರ್ಧೆಯ ನಡುವೆಯೇ ಆರ್‌.ಎಸ್‌.ಎಸ್‌ ನ ಶತಮಾನೋತ್ಸವ ಪಥಸಂಚಲನ ರಾಜಕೀಯ ವಲಯದಲ್ಲೂ ಗಮನ ಸೆಳೆದಿದೆ

ಕುಷ್ಟಗಿ: ತಾಲೂಕಿನಲ್ಲಿ ಅ. 25ರಂದು ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌.ಎಸ್‌.ಎಸ್‌) ಶತಮಾನೋತ್ಸವ ಹಾಗೂ ವಿಜಯದಶಮಿ ಪ್ರಯುಕ್ತ ಭವ್ಯ ಪಥಸಂಚಲನದ ತಯಾರಿ ಜೋರಾಗಿ ನಡೆಯುತ್ತಿವೆ.

ಸಂಘದ 100 ವರ್ಷದ ಐತಿಹಾಸಿಕ ಪ್ರಯಾಣದ ಸಂಭ್ರಮದಲ್ಲಿ ತಾಲೂಕಿನಾದ್ಯಂತ ಶಾಖೆಗಳ ಕಾರ್ಯಕರ್ತರು ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ತರಬೇತಿ ಶಿಬಿರಗಳಲ್ಲಿ ಭಾಗವಹಿಸುತ್ತಿದ್ದು, ಶಿಸ್ತು, ಏಕತೆ ಮತ್ತು ರಾಷ್ಟ್ರಭಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ಸೇರಿದಂತೆ ಅನೇಕ ಬಿಜೆಪಿ ನಾಯಕರು ಆರ್ ಎಸ್ ಎಸ್ ಗಣವೇಶದಲ್ಲಿ ಆನ್‌ಲೈನ್‌ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಸಂಘದ ಶತಮಾನೋತ್ಸವ ಮತ್ತು ವಿಜಯದಶಮಿ ಪಥಸಂಚಲನ ಯಶಸ್ವಿಗೊಳಿಸಲು ವ್ಯಾಟ್ಸ್‌ಆ್ಯಪ್‌ ಗುಂಪು, ಫೇಸ್‌ಬುಕ್‌, ಇನ್ಸ್ಟಾಗ್ರಾಮ್‌ ಹಾಗೂ ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಆಹ್ವಾನ ಪತ್ರಿಕೆ, ಪೋಸ್ಟರ್‌ ಹಾಗೂ ದೇಶಭಕ್ತಿ ಸಂದೇಶಗಳು ಹರಿದಾಡುತ್ತಿವೆ.

ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವಿನ ಪ್ರಬಲ ಸ್ಪರ್ಧೆಯ ನಡುವೆಯೇ ಆರ್‌.ಎಸ್‌.ಎಸ್‌ ನ ಶತಮಾನೋತ್ಸವ ಪಥಸಂಚಲನ ರಾಜಕೀಯ ವಲಯದಲ್ಲೂ ಗಮನ ಸೆಳೆದಿದೆ.

ಅ. 25ರಂದು ನಡೆಯುವ ಈ ಪಥಸಂಚಲನದಲ್ಲಿ ಸಾವಿರಾರು ಸ್ವಯಂಸೇವಕರು, ವಿದ್ಯಾರ್ಥಿಗಳು, ಮಹಿಳಾ ಕಾರ್ಯಕರ್ತೆಯರು ಹಾಗೂ ವಿವಿಧ ಸಮಾಜ ಘಟಕಗಳ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ತಾಲೂಕಿನ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ಸಾಗಲಿದ್ದು, ಸ್ಥಳೀಯರು ದೀಪಾಲಂಕಾರ, ಹೂವಿನ ಅಲಂಕಾರ ಹಾಗೂ ಸ್ವಾಗತ ಕಮಾನು ಮೂಲಕ ಭಾಗವಹಿಸಲು ಸಜ್ಜಾಗಿದ್ದಾರೆ.

ಕಾರ್ಯಕ್ರಮದ ಭದ್ರತೆಗಾಗಿ ಸ್ಥಳೀಯ ಆಡಳಿತ ಹಾಗೂ ವಿವಿಧ ಇಲಾಖೆ ಪೂರ್ವಭಾವಿ ಸಭೆ ನಡೆಸಿದ್ದಾರೆ. ಸಾರಿಗೆ ವ್ಯವಸ್ಥೆ, ನೀರಿನ ವ್ಯವಸ್ಥೆ ಹಾಗೂ ವೈದ್ಯಕೀಯ ಸೌಲಭ್ಯ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.

ಅ. 25ರಂದು ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌.ಎಸ್‌.ಎಸ್‌) ಪಥಸಂಚಲನ ಕಾರ್ಯಕ್ರಮಕ್ಕೆ ಸರ್ಕಾರದ ನಿಗದಿತ ಮಾರ್ಗಸೂಚಿಗಳ ಪ್ರಕಾರ ಅಧಿಕೃತ ಅನುಮತಿ ನೀಡಲಾಗಿದೆ ಎಂದು ಕುಷ್ಟಗಿ ತಹಸೀಲ್ದಾರ್‌ ಅಶೋಕ್ ಶಿಗ್ಗಾವಿ ತಿಳಿಸಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌.ಎಸ್‌.ಎಸ್‌) ಪೊಲೀಸ್ ಇಲಾಖೆಯಿಂದ ಅಧಿಕೃತ ಅನುಮತಿ ಪಡೆಯಲಾಗಿದೆ.ಸಂಘದ ಶತಮಾನೋತ್ಸವದ ಅಂಗವಾಗಿ ನಡೆಯಲಿರುವ ಈ ಪಥಸಂಚಲನದಲ್ಲಿ ಸುಮಾರು 1000 ಮಂದಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಪಥಸಂಚಲನ ಶಾಂತಿಯುತ ಹಾಗೂ ಸಾರ್ವಜನಿಕ ಶಿಸ್ತಿನೊಂದಿಗೆ ನಡೆಯಲು ಪೊಲೀಸ್ ಇಲಾಖೆ ಭದ್ರತಾ ವ್ಯವಸ್ಥೆ ಮಾಡಿದೆ. ಭಾಗವಹಿಸುವ ಕಾರ್ಯಕರ್ತರಿಗೆ ಊಟ ಮತ್ತು ಪಾನೀಯಗಳ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ ಎಂದು ಆರ್‌.ಎಸ್‌.ಎಸ್‌. ಕುಷ್ಟಗಿ ತಾಲೂಕು ಕಾರ್ಯವಾಹ ಬಸನಗೌಡ ಎನ್‌. ಪಾಟೀಲ್ ತಿಳಿಸಿದ್ದಾರೆ.