ಸಾರಾಂಶ
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ತಾಲೂಕಿನ ನಗರಳ್ಳಿ ಗ್ರಾಮದ ಸುಗ್ಗಿಬನದಲ್ಲಿ ಕೂತಿನಾಡು ಸುಗ್ಗಿ ಉತ್ಸವ ಗ್ರಾಮಸ್ಥರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು.ಕೂತಿನಾಡಿಗೆ ಸೇರಿದ 18 ಗ್ರಾಮಗಳ ನಿವಾಸಿಗಳು ನಗರಳ್ಳಿ ಸುಗ್ಗಿಕಟ್ಟೆಯಲ್ಲಿ ಸೇರಿ ಗ್ರಾಮ ದೇವತೆ ಸಬ್ಬಮ್ಮ ದೇವಿಗೆ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಗ್ರಾಮದೇವತೆ ಸಬ್ಬಮ್ಮ ದೇವಿಗೆ 15ದಿನಗಳ ಕಾಲ ವಿಶೇಷ ಪೂಜೆಗಳನ್ನು ಸಲ್ಲಿಸಿ, ಗ್ರಾಮ ಸುಭಿಕ್ಷೆಗೆ ಬೇಡಿಕೆ ಹಾಗೂ ಮಳೆ, ಬೆಳೆ ಸಮೃದ್ಧಿಗಾಗಿ ಪ್ರಾರ್ಥನೆ ಮಾಡಿದರು.
ಸುಗ್ಗಿ ಉತ್ಸವದ ಕೊನೆ ದಿನವಾದ ಸೋಮವಾರ ಸುಗ್ಗಿ ದೇವರ ಬನದಲ್ಲಿ ಅಳವಡಿಸಲಾಗಿರುವ ಬೃಹತ್ ಕಲ್ಲಿನ ಕಂಬದಲ್ಲಿ 4 ಮಂದಿ ದೇವರ ಒಡೆಕಾರರನ್ನು ಬೆತ್ತದ ಉಯ್ಯಾಲೆಯಲ್ಲಿ ಸಬ್ಬತ್ತೆ ಎನ್ನುತಾ ತೂಗುವ ಮೂಲಕ ಸುಗ್ಗಿ ಉತ್ಸವಕ್ಕೆ ತೆರೆ ಬಿದ್ದಿತು.ಸಾಂಪ್ರಾದಾಯಿಕ ಬಿಳಿ ಕುಪ್ಪಸ ದಟ್ಟಿಯನ್ನು ಧರಿಸಿದ್ದ ಗ್ರಾಮದ ಹಿರಿಯರು, ಬಿಲ್ಲೆ ರಂಗದಲ್ಲಿ ಬಿಲ್ಲನ್ನು ಪ್ರದರ್ಶನ ಮಾಡುತ್ತ ಮಲೆನಾಡು ಸುಗ್ಗಿ ಇತಿಹಾಸವನ್ನು ನೆರೆದಿದ್ದವರಿಗೆ ಮನವರಿಕೆ ಮಾಡಿದರು. ಸುಗ್ಗಿ ಕುಣಿತ, ಸುಗ್ಗಿಹಾಡುವುದು, ಬಿಲ್ಲು ತೂಗುವುದು, ಸೇರಿದಂತೆ ವಿವಿಧ ಜಾನಪದ ನೃತ್ಯಗಳು ನಡೆದವು.
ನವ ದಂಪತಿಗಳು ಮದುವೆ ಕಾಣಿಕೆಯನ್ನು ಸಲ್ಲಿಸಿದರು. ಹರಕೆ ತೀರಿಸುವುದು ಮತ್ತು ಹರಕೆ ಮಾಡಿಕೊಳ್ಳುವ ಕಾರ್ಯಗಳು ಸಹ ನಡೆದವು. ಕೂತಿ ನಾಡು ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಮುಖ್ಯಸ್ಥರು ಗ್ರಾಮದೇವತೆಗೆ ಪಟ್ಟ ಒಪ್ಪಿಸಿ, ಸಾಮೂಹಿಕ ಪೂಜೆ ನೆರವೇರಿಸಿ, ಗ್ರಾಮಗಳ ಸಮೃದ್ಧಿಗೆ ಪ್ರಾರ್ಥನೆ ಮಾಡಿದರು. ಸುಗ್ಗಿಕಟ್ಟೆಯ ಮುಖ್ಯ ರಂಗದಲ್ಲಿ ಈಡುಗಾಯಿ ಒಡೆಯಲಾಯಿತು. ಅನೇಕ ಭಕ್ತಾದಿಗಳು ಪೂಜೆಯೊಂದಿಗೆ ಅಂದಿನ ಅನ್ನದಾನಕ್ಕೆ ಹಣ ನೀಡಿದರು. ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.ಶ್ರವಣ್ ನಗರಳ್ಳಿ, ಸವಿನ್ ನಗರಳ್ಳಿ, ರಚನ್ ಹಳ್ಳಿಯೂರು, ಯೋಗೇಶ್ ಜಕ್ಕನಳ್ಳಿ, ಶಶಿಕುಮಾರ್ ಹೆಮನಗದ್ದೆ, ದೇವರ ಒಡೆಕಾರರಾಗಿ ಕಾರ್ಯ ನಿರ್ವಹಿಸಿದರು. ರಮೇಶ್, ಪ್ರಸನ್ನ, ರಾಜು, ಕುಶಾಲ್, ಲೋಹಿತ್, ಮಂಜುನಾಥ್, ನಾಗರಾಜ್ ದೇವರ ಸೇವೆಯಲ್ಲಿ ಭಾಗಿಯಾದರು.
ಕೂತಿನಾಡು ಶ್ರೀ ಸಬ್ಬಮ್ಮ ದೇವರ ಸಮಿತಿ ಅಧ್ಯಕ್ಷರಾದ ಕೆ.ಬಿ. ಜಗದೀಶ್, ಉಪಾಧ್ಯಕ್ಷರಾದ ಸಿ. ಎಸ್.ಬೋಪ್ಪಯ್ಯ, ಕಾರ್ಯದರ್ಶಿ ಕೆ. ಯು. ಜಗದೀಶ್, ಖಜಾಂಚಿ ಎನ್.ಬಿ.ಸುರೇಶ್, ಬಿ.ಪಿ. ಪ್ರದೀಪ್ ಕುಮಾರ್, ಜಿ. ಆರ್.ಸುರೇಶ್, ರಜಿತ್, ಅಶ್ವತ್. ಕೆ.ಎಂ, ಕೌಶಿಕ್, ಪ್ರಸನ್ನ ಸುಗ್ಗಿಯ ಉಸ್ತುವಾರಿ ವಹಿಸಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))