ಗದಗ ನಗರದ ಮಹಾತ್ಮಾ ಗಾಂಧಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯದ ಕೌಶಲ್ಯ ವಿಕಾಸ ಭವನದಲ್ಲಿ ಅ.2ರಿಂದ 4ರವರೆಗೆ ಅಖಿಲ ಕರ್ನಾಟಕ ಮೂತ್ರಕೋಶ ಶಸ್ತ್ರಚಿಕಿತ್ಸಕರ ಸಂಘದ 31ನೇ ವಾರ್ಷಿಕ ಸಮ್ಮೇಳನ ಕುವಾಕಾನ್- 2026 ಹಮ್ಮಿಕೊಳ್ಳಲಾಗಿದೆ ಎಂದು ಕೆಯುಎ ಅಧ್ಯಕ್ಷ ಡಾ. ಎಚ್.ಎನ್.ನವೀನ ಹೇಳಿದ್ದಾರೆ.
- ರಾಜ್ಯ ಮೂತ್ರಕೋಶ ಶಸ್ತ್ರಚಿಕಿತ್ಸಕರ 31ನೇ ವಾರ್ಷಿಕ ಸಮ್ಮೇಳನ
- - -ದಾವಣಗೆರೆ: ಗದಗ ನಗರದ ಮಹಾತ್ಮಾ ಗಾಂಧಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯದ ಕೌಶಲ್ಯ ವಿಕಾಸ ಭವನದಲ್ಲಿ ಅ.2ರಿಂದ 4ರವರೆಗೆ ಅಖಿಲ ಕರ್ನಾಟಕ ಮೂತ್ರಕೋಶ ಶಸ್ತ್ರಚಿಕಿತ್ಸಕರ ಸಂಘದ 31ನೇ ವಾರ್ಷಿಕ ಸಮ್ಮೇಳನ ಕುವಾಕಾನ್- 2026 ಹಮ್ಮಿಕೊಳ್ಳಲಾಗಿದೆ ಎಂದು ಕೆಯುಎ ಅಧ್ಯಕ್ಷ ಡಾ. ಎಚ್.ಎನ್.ನವೀನ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸೇರಿದಂತೆ ಅನ್ಯ ರಾಜ್ಯಗಳು, ಅಂತಾರಾಷ್ಟ್ರೀಯ ಮಟ್ಟದ ಪ್ರಸಿದ್ಧ ಮೂತ್ರಕೋಶ ಶಸ್ತ್ರಚಿಕಿತ್ಸಾ ತಜ್ಞರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಚಾರ ವಿನಿಮಯ, ಆಧುನಿಕ ತಂತ್ರಜ್ಞಾನ ಬಳಕೆ, ರೋಬೋಟಿಕ್ ಶಸ್ತ್ರಚಿಕಿತ್ಸೆ, ಪ್ರಬಂಧ ಮಂಡನೆ, ವಿವಿಧ ಚರ್ಚಾಗೋಷ್ಠಿಗಳು ನಡೆಯಲಿವೆ ಎಂದರು.ಸಮ್ಮೇಳನದ ರಾಯಭಾರಿಯಾಗಿ ಖ್ಯಾತ ಕ್ರಿಕೆಟ್ ಪಟು, ಗದಗಿನ ಸುನಿಲ್ ಜೋಶಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಲಿಂಗ್ ಹೆರಿಟೇಜ್, ಅನ್‌ಲಕಿಂಗ್ ಯುರಾಲಜಿ ಎನ್ನುವ ಸಮ್ಮೇಳನದ ಧೇಯವಾಕ್ಯದಡಿ ಸಮ್ಮೇಳನ ನಡೆಯುತ್ತಿದೆ. ಅ.2ರಂದು ಪೂರ್ವಭಾವಿಯಾಗಿ ಮೂತ್ರಪಿಂಡ ಕಸಿ ಮತ್ತು ಡಯಾಲಿಸಿಸ್ ಸಂಬಂಧಿತ ಶಸ್ತ್ರಚಿಕಿತ್ಸಾ ಕಾರ್ಯಾಗಾರ ಹಾಗೂ ಅಂಗದಾನ ಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಅ.3ರಂದು ಸಮ್ಮೇಳನ ಉದ್ಘಾಟನೆಯಲ್ಲಿ ಗದಗ ಶಾಸಕ, ಮಾಜಿ ಸಚಿವ ಎಚ್.ಕೆ.ಪಾಟೀಲ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಎಂಜಿಅರ್ ಡಿಪಿಆರ್‌ಯು ಉಪ ಕುಲಪತಿ ಪ್ರೊ. ಡಾ.ಸುರೇಶ ವಿ.ನಾಡಗೌಡರ ವಿಶೇಷ ಆಹ್ವಾನಿತರಾಗಿ ಬರಲಿದ್ದಾರೆ. ಕರ್ನಾಟಕ ಯುರಾಲಜಿ ಅಸೋಸಿಯೇಷನ್ ಅಧ್ಯಕ್ಷ, ದಾವಣಗೆರೆ ಮೂಲದ ಮೂತ್ರಕೋಶ ಶಸ್ತ್ರಚಿಕಿತ್ಸಾ ತಜ್ಞ ಡಾ. ಎಚ್.ಎನ್. ನವೀನ್ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿ ವೈದ್ಯಕೀಯ ಅಭ್ಯಾಸದ ಆಧ್ಯಾತ್ಮಿಕ ಆಯಾಮ, ಕೌಶಲ್ಯದಿಂದ ಸೇವೆಗೆ ವಿಷಯವಾಗಿ ಹಾಗೂ ಮಾಜಿ ಡೆಪ್ಯುಟಿ ಚೀಫ್ ಆಫ್ ಆರ್ಮಿ ಲೆಫ್ಟಿನೆಂಟ್ ಜನರಲ್ ರಮೇಶ್ ಹಲಗಲಿ ದೇಶದ ಗೌರವ ಮತ್ತು ಕರ್ತವ್ಯ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುವರು. ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ವಿಚಾರಗಳಲ್ಲದೇ ಜಾನಪದ ಸೊಗಡಿನ ತೊಗಲು ಗೊಂಬೆಯಾಟ, ಡೊಳ್ಳಿನ ಪದ, ಗಂಗಾವತಿ ಪ್ರಾಣೇಶ್ ಮತ್ತು ತಂಡದ ಹಾಸ್ಯಸಂಜೆ ಕಾರ್ಯಕ್ರಮವಿದೆ. ಸಮ್ಮೇಳನವನ್ನು ಗದಗಿನ ಟ್ರಾನ್ಸ್‌ಪ್ಲಾಂಟ್ ಅಂಡ್ ಯುರೋಜೆನಿಟಲ್ ಸೊಸೈಟಿ ಸಂಸ್ಥೆಯು ಕೆಯುಎ ಸಹಭಾಗಿತ್ವದಲ್ಲಿ ನಡೆಸಲಾಗುತ್ತಿದೆ ಎಂದು ಡಾ. ಎಚ್.ಎನ್. ನವೀನ ಮಾಹಿತಿ ನೀಡಿದರು.
- - --29ಕೆಡಿವಿಜಿ11:
ಡಾ. ಎಚ್.ಎನ್. ನವೀನ.