ಸಾರಾಂಶ
ಗ್ರಾಮೀಣ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ ಅಪ್ಪಟ ಹಳ್ಳಿಗಾಡಿನ ಹಿಂದುಳಿದ ಸಮಾಜದ ಪ್ರತಿಭೆ ಸಿವಿಲ್ ಕೋರ್ಟ್ ನ್ಯಾಯಾಧೀಶೆ ಆಗಿ ಆಯ್ಕೆ ಆಗುವ ಮೂಲಕ ಇಚ್ಛಾಶಕ್ತಿ ಇದ್ದರೆ ಹಳ್ಳಿಯ ಮಕ್ಕಳು ಉನ್ನತ ಹುದ್ದೆಗೇರಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ.
ಆರ್. ನರಸಿಂಹಮೂರ್ತಿ
ಕನ್ನಡಪ್ರಭ ವಾರ್ತೆ ಅಮೀನಗಡಗ್ರಾಮೀಣ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ ಅಪ್ಪಟ ಹಳ್ಳಿಗಾಡಿನ ಹಿಂದುಳಿದ ಸಮಾಜದ ಪ್ರತಿಭೆ ಸಿವಿಲ್ ಕೋರ್ಟ್ ನ್ಯಾಯಾಧೀಶೆ ಆಗಿ ಆಯ್ಕೆ ಆಗುವ ಮೂಲಕ ಇಚ್ಛಾಶಕ್ತಿ ಇದ್ದರೆ ಹಳ್ಳಿಯ ಮಕ್ಕಳು ಉನ್ನತ ಹುದ್ದೆಗೇರಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ.
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಗಂಗೂರ ಗ್ರಾಮದ ಭಾಗ್ಯಶ್ರೀ ದುರುಗಪ್ಪ ಮಾದರ ಇಂತಹದ್ದೊಂಡು ಸಾಧನೆ ಮಾಡಿದ ಗ್ರಾಮೀಣ ಪ್ರತಿಭೆ. ಸಮೀಪದ ಗಂಗೂರ ಗ್ರಾಮದ ಅತ್ಯಂತ ಹಿಂದುಳಿದ ಸಮಾಜದ ದುರುಗಪ್ಪ ಹಾಗೂ ಯಮನವ್ವ ಮಾದರ ದಂಪತಿಗೆ ನಾಲ್ವರು ಪುತ್ರರು, ಮೂವರು ಪುತ್ರಿಯರು ಸೇರಿ 7 ಜನ ಮಕ್ಕಳು. ಬಡತನದ ನಡುವೆಯೂ ಕೃಷಿ, ಜೊತೆಗೆ ಕೂಲಿ ಕೆಲಸ ಮಾಡಿ ಸಂಸಾರ ಬಂಡಿ ಸಾಗಿಸಿದರು. ಎಷ್ಟೇ ಕಷ್ಟ ಬಂದರೂ ನನ್ನ ಮಕ್ಕಳು ನನ್ನಂತೆ ಅವಿದ್ಯಾವಂತರಾಗಬಾರದು ಎಂಬ ಛಲದಿಂದ ದುರುಗಪ್ಪ ಮಕ್ಕಳಿಗೆ ಶಿಕ್ಷಣಕ್ಕೆ ಉತ್ತೇಜನ ನೀಡಿದರು.ಸರ್ಕಾರಿ ಶಾಲೆಯಲ್ಲಿ ಶಿಕ್ಷಣ:
ದೊಡ್ಡ ಸಂಸಾರದಲ್ಲಿ 5ನೇಯವರಾದ ಭಾಗ್ಯಶ್ರೀಗೆ ಓದಿನಲ್ಲಿ ಬಲು ಆಸಕ್ತಿ. 1 ರಿಂದ 7ನೇ ತರಗತಿಯವರೆಗೆ ಗಂಗೂರಿನ ಸರ್ಕಾರಿ ಶಾಲೆ ಪ್ರಾಥಮಿಕ ಶಿಕ್ಷಣ ಮುಗಿಸಿದರೆ, ಚಿತ್ತರಗಿ ಸರ್ಕಾರಿ ಪ್ರೌಢಶಾಲೆ ಪ್ರೌಢಶಿಕ್ಷಣ, ಅಮೀನಗಡದ ಸಂಗಮೇಶ್ವರದಲ್ಲಿ ಪದವಿಪೂರ್ವ ಕಾಲೇಜಿನಲ್ಲಿ ಪಿಯು ಶಿಕ್ಷಣ ಮುಗಿಸಿ ಬಾಗಲಕೋಟೆಯ ಬಿವಿವಿ ಸಂಘದ ನಂದಿಕೋಲಮಠ ಕಾನೂನು ಕಾಲೇಜಿನಲ್ಲಿ 2018ರಲ್ಲಿ ಎಲ್‌ಎಲ್‌ಬಿ ಪದವಿ ಮುಗಿಸಿದರು. ಬಳಿಕ ಎರಡು ವರ್ಷ ಹುನಗುಂದ ನ್ಯಾಯಾಲಯದಲ್ಲಿ ವಕೀಲ ವೃತ್ತಿ ಕೈಗೊಂಡ ಭಾಗ್ಯಶ್ರೀ 2021 ರಿಂದ 22ರವರೆಗೆ ಹೈಕೋರ್ಟ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ರಿಸರ್ಚ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸಿದರು. ಉದ್ಯೋಗದ ಜತೆಯಲ್ಲೇ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಸಿ ನಡೆಸಿ 2022ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನ್ಯಾಯಾಧೀಶೆ ಹುದ್ದೆಗೆ ಆಯ್ಕೆಯಾದರು.ಸಂವಿಧಾನ, ಮಹಾಭಾರತದ ಪ್ರೇರಣೆ:
ಸಂವಿಧಾನ ನನಗೆ ಕರ್ತವ್ಯ, ಸಂವಿಧಾನ ದೇಶದ ಕಾನೂನುಗಳ ಅರಿವು ಮೂಡಿಸಿದರೆ, ಮಹಾಭಾರತ ಬದುಕಿನ ಸಾರ್ಥಕತೆ, ಜೀವನ ಮೌಲ್ಯಗಳನ್ನು ತಿಳಿಸಿಕೊಟ್ಟಿತು. ನನ್ನ ಅಣ್ಣ ಮಹಾಂತೇಶ ಮಾದರ ಸರ್ಕಾರಿ ಸೇವೆಯಲ್ಲಿ ಇದ್ದುದ್ದರಿಂದ ನನ್ನ ಓದಿಗೆ ಯಾವುದೇ ಅಡಚಣೆ ಎದುರಾಗಲಿಲ್ಲ. ಅಣ್ಣ ನನ್ನ ಕುಟುಂಬದವರು ಉನ್ನತ ಹುದ್ದೆಗೆ ಹೋಗಬೇಕು ಎಂದು ಮಹಾಭಾರತದ ಯುದೀಷ್ಠರನಂತೆ ಮಾರ್ಗದರ್ಶನ, ಸಹಕಾರ ನೀಡಿದ್ದರ ಪರಿಣಾಮ ನಾನಿಂದು ಈ ಸಾಧನೆ ಮಾಡಲು ಸಾಧ್ಯವಾಯಿತು. ನನ್ನ ಅಣ್ಣ ನನ್ನ ಸಾಧನೆಗೆ ಸ್ಫೂರ್ತಿ, ಸಹೋದರಿಯ ಮೇಲೆ ಅವರು ತೋರಿದ ಅಕ್ಕರೆ, ಪ್ರೀತಿ, ವಾತ್ಸಲ್ಯ ಈ ಜನ್ಮದಲ್ಲಿ ಮರೆಯಲು ಸಾಧ್ಯವಿಲ್ಲ. ಇಂದಿನ ನನ್ನ ಸಾಧನೆಯ ಬಹುಪಾಲು ಶ್ರೇಯ ಅಣ್ಣನಿಗೆ ಸೇರಿದ್ದು ಎಂದು ಭಾವುಕರಾದರು.----
ಮನೆಯಲ್ಲಿ ಕೃಷಿ, ಹೈನುಗಾರಿಕೆ ಇದ್ದುದ್ದರಿಂಧ ನನಗೆ ಪ್ರಾಣಿ ಪಕ್ಷಿಗಳ ಮೇಲೆ ಹೆಚ್ಚು ಪ್ರೀತಿಯಿದ್ದು, ಪಶು ವೈದ್ಯೆಯಾಗಬೇಕೆಂಬ ಬಯಕೆ ಇತ್ತು. ಆದರೆ ನಮ್ಮ ತಂದೆಯವರಿಗೆ ನಾನು ವಕೀಲೆ ಆಗಬೇಕೆಂಬ ಆಸೆ ಇದ್ದುದ್ದರಿಂದ ಕಾನೂನು ಕ್ಷೇತ್ರ ಆಯ್ಕೆ ಮಾಡಿಕೊಂಡೆ. ನನಗೆ ಕಾನೂನು ಕ್ಷೇತ್ರದಲ್ಲಿ ಹುನಗುಂದದ ವಕೀಲರಾದ ಎಂ.ಎಚ್.ಮಳ್ಳಿಯವರು ನೀನು ನ್ಯಾಯಾಧೀಶೆಯಾಗಲು ಪ್ರಯತ್ನಿಸು ಎಂದು ಸ್ಫೂರ್ತಿ ತುಂಬಿದರು. ಅದರ ಪರಿಣಾಮವೇ ನಾನು ಇಂದು ಈ ಸ್ಥಾನಕ್ಕೇರಿದ್ದೇನೆ- ಭಾಗ್ಯಶ್ರೀ ಮಾದರ, ನ್ಯಾಯಾಧೀಶೆ.