ಕುವೆಂಪು ವಿಚಾರಧಾರಗಳು ಇಂದಿಗೂ ಪ್ರಸ್ತುತ

| Published : Dec 31 2023, 01:30 AM IST

ಕುವೆಂಪು ವಿಚಾರಧಾರಗಳು ಇಂದಿಗೂ ಪ್ರಸ್ತುತ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವ ಮಾನವ ದಿನಾಚರಣೆ ಹಿನ್ನೆಲೆಯಲ್ಲಿ ಕಂಪ್ಲಿಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಗಣ್ಯರು ಕುವೆಂಪು ಅವರ ವ್ಯಕ್ತಿತ್ವ ಸ್ಮರಿಸಿದರು.

ಕಂಪ್ಲಿ: ಪಟ್ಟಣದ ಗಂಗಾ ಸಂಕೀರ್ಣದಲ್ಲಿ ಸಾಹಿತ್ಯ ಸಿರಿ ಪ್ರತಿಷ್ಠಾನದಿಂದ ವಿಶ್ವ ಮಾನವ ದಿನಾಚರಣೆ ನಿಮಿತ್ತ ‘ಕುವೆಂಪು ವಿಚಾರಧಾರೆ ಪ್ರಸ್ತುತತೆ’ ಕುರಿತು ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು.

ತಾಪಂ ನರೇಗಾ ಸಹಾಯಕ ನಿರ್ದೇಶಕ ಕೆ.ಎಸ್. ಮಲ್ಲನಗೌಡ ವಿಶೇಷ ಉಪನ್ಯಾಸ ನೀಡಿ, ಕುವೆಂಪು ವಿಚಾರಧಾರೆಗಳು ಇಂದಿನ ಯುವಜನತೆಗೆ ಹೆಚ್ಚು ಪ್ರಸ್ತುತವಾಗಿದೆ. ಕುವೆಂಪು ಸಾಹಿತ್ಯ ಕೇವಲ ಅಧ್ಯಯನಕ್ಕೆ ಸೀಮಿತಗೊಳಿಸದೆ ಅದನ್ನು ಆಡಳಿತ ಮತ್ತು ನಿತ್ಯ ಜೀವನದ ಪ್ರತಿ ಸ್ತರದಲ್ಲಿಯೂ ಬಳಕೆಗೊಳ್ಳಬೇಕಿದೆ ಎಂದರು. ಶಿಕ್ಷಣದ ಉದ್ದೇಶ ಮಹಾಮಾನವತಾವದಿಯನ್ನಾಗಿ ರೂಪಿಸಬೇಕೆಂಬುದು ಕುವೆಂಪು ಆಶಯವಾಗಿದೆ. ಕೇವಲ ಸ್ಮರಣೆಯಲ್ಲಿಟ್ಟುಕೊಂಡು ಹೆಚ್ಚು ಅಂಕಗಳನ್ನುಗಳಿಸುವುದರ ಮೇಲೆ ಇಂದಿನ ಶಿಕ್ಷಣದ ಶ್ರೇಷ್ಠತೆ ಅಡಗಿದೆ. ಆದರೆ, ಕುವೆಂಪು ಪ್ರಕಾರ ಶಿಕ್ಷಣದ ಜತೆ ಜ್ಞಾನವೃದ್ಧಿಯಾಗಬೇಕು, ಶಿಕ್ಷಣ ಮನುಷ್ಯತ್ವವನ್ನು ರೂಪಿಸಬೇಕು ಎಂಬುದಾಗಿದೆ. ಕೇವಲ ಕಂಠಪಾಠವೇ ಶಿಕ್ಷಣವಾಗಬಾರದು. ಈ ದಿಸೆಯಲ್ಲಿ ಸಮಸ್ತ ಮಾನವ ಕುಲವನ್ನು ಉದ್ಧರಿಸುವಲ್ಲಿ ಕುವೆಂಪು ಅವರ ವಿಶ್ವ ಮಾನವ ಸಂದೇಶ ಅನುಷ್ಠಾನಗೊಳಿಸುವ ಅಗತ್ಯವಿದೆ. ಕುವೆಂಪು ಸಾಹಿತ್ಯದಲ್ಲಿ ಜಗದ ಹಿತ ಅಡಗಿದೆ. ಮಾನವೀಯತೆ, ವೈಚಾರಿಕತೆ, ವೈಜ್ಞಾನಿಕತೆ ಮತ್ತು ಸತ್ಯ ಪಥದ ಬೆಳಕಿದೆ. ಕುವೆಂಪು ತತ್ವ ಆದರ್ಶಗಳು ಎಲ್ಲ ಹಂತದ ಪಠ್ಯಗಳ ಮೂಲಕ ಬೋಧಿಸಬೇಕಿದೆ ಎಂದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ಡಾ. ಅನ್ನಪೂರ್ಣಾ ಗುಡದೂರು ಮಾತನಾಡಿ, ಕುವೆಂಪು ದೈತ್ಯ ಪ್ರತಿಭೆಯಾಗಿದ್ದು, ಅವರ ಬದುಕು ಮತ್ತು ಬರಹ ಒಂದೇ ಆಗಿದ್ದವು. ಕುವೆಂಪು ಸಾಹಿತ್ಯ ಇಂದಿನ ಯುವಪೀಳಿಗೆಯ ಬರಹಗಾರರಿಗೆ ಆದರ್ಶವಾಗಿದೆ. ಸೆಮ್ ಆಧಾರಿತ ಶಿಕ್ಷಣದಿಂದ ಕೌಶಲವಂಚಿತವಾಗುತ್ತಿದೆ ಎಂದರು. ಶಿಕ್ಷಕ ಜೀರು ಮಲ್ಲಿಕಾರ್ಜುನ ಕುವೆಂಪು ರಚಿಸಿದ ಕವಿತೆ ಹಾಡಿದರು.

ಸಾಹಿತ್ಯ ಸಿರಿ ಪ್ರತಿಷ್ಠಾನದ ಅಧ್ಯಕ್ಷ ಜಿ. ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್, ಪದಾಧಿಕಾರಿಗಳಾದ ಬಂಗಿ ದೊಡ್ಡ ಮಂಜುನಾಥ, ಎಸ್.ಡಿ. ಬಸವರಾಜ, ಎಸ್. ಶಾಮಸುಂದರರಾವ್, ಚಂದ್ರಯ್ಯಸೊಪ್ಪಿಮಠ, ಕೆ. ಚಂದ್ರಶೇಖರ, ಬಡಿಗೇರ ಜಿಲಾನ್‌ಸಾಬ್, ಕವಿತಾಳ ಬಸವರಾಜ, ಡಾ. ಸುನೀಲ್, ಬಂಗಿ ಸರೋಜಾ, ಅಂಬಿಗರ ಮಂಜುನಾಥ, ಕರೇಕಲ್ ಶಂಕ್ರಪ್ಪ, ಸಜ್ಜೇದ ವೀರಭದ್ರಪ್ಪ, ಎಚ್. ನಾಗರಾಜ, ಕೆ. ಯಂಕಾರೆಡ್ಡಿ, ಎಲಿಗಾರ ವೆಂಕಟರೆಡ್ಡಿ, ಮಾ. ಶ್ರೀನಿವಾಸ, ಗೌಳೇರು ಶೇಖರಪ್ಪ ಇತರರಿದ್ದರು.