ಸಾರಾಂಶ
ಬಾಲಕಿಯರ ಕಾಲೇಜಿನಲ್ಲಿ ಕುವೆಂಪು ಜಯಂತ್ಯುತ್ಸವ । ನಿವೃತ್ತ ಪ್ರಾಂಶುಪಾಲ ಡಾ. ಕೃಷ್ಣ ಅಭಿಮತ
ಕನ್ನಡಪ್ರಭ ವಾರ್ತೆ ಮದ್ದೂರುರಾಷ್ಟ್ರಕವಿ ಕುವೆಂಪು ಕನ್ನಡ ಸಾಹಿತ್ಯಕ್ಕೆ ಚಲನಶೀಲತೆ, ಗತಿಶೀಲತೆ ತಂದುಕೊಟ್ಟ ಕನ್ನಡ ಸಾಹಿತ್ಯದ ತಪಸ್ವಿ ಎಂದು ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ನಿವೃತ್ತ ಪ್ರಾಂಶುಪಾಲ ಡಾ.ಬಿ.ಕೃಷ್ಣ ಶುಕ್ರವಾರ ಬಣ್ಣಿಸಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರಕವಿ ಕುವೆಂಪು ಜಯಂತ್ಯುತ್ಸವದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯಕ್ಕೆ ಬಹು ಆಯಾಮಗಳ ಮೂಲಕ ಸೃಜನಶೀಲತೆ ತುಂಬಿದ ಕುವೆಂಪು, ಸಾಹಿತ್ಯವನ್ನು ಕವಿತೆ, ಕವನ, ನಾಟಕ ಮತ್ತು ಕಾದಂಬರಿಯಿಂದ ನೋಡದೆ ಜನಭಾಷೆಯನ್ನಾಗಿ ನಿರೂಪಿಸಿದ ಕೀರ್ತಿ ಕುವೆಂಪು ಅವರಿಗೆ ಸಲ್ಲುತ್ತದೆ ಎಂದರು.ಕನ್ನಡ ನಾಡು, ನುಡಿಗಳ ಬಗ್ಗೆ ಅತೀವ ಕಾಳಜಿ ಹೊಂದಿದ್ದ ಕುವೆಂಪು, ಅನೇಕ ಗಮನಾರ್ಹ ರಚನೆಗಳನ್ನು ನಾಡಿಗೆ ಸಮರ್ಪಿಸಿದ್ದಾರೆ. ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಕೃತಿ,ಬದುಕಿನಲ್ಲಿ ಹೊಸ ಚಿಂತನೆಯ ಸಾಧ್ಯತೆಗಳನ್ನು ಸಮೃದ್ಧವಾಗಿ ನೀಡಿದ ಕುವೆಂಪು ಎಂದೆಂದೂ ಮೌಢ್ಯದ ಪರಮ ವಿರೋಧಿಯಾಗಿದ್ದರು ಎಂದು ತಿಳಿಸಿದರು.
ಜಾತಿ, ಧರ್ಮ, ಗುಡಿ, ಗೋಪುರಗಳನ್ನು ದೂರ ಇಟ್ಟು ತನ್ನದೇ ಆದ ವೈಶಿಷ್ಟತೆ ಹೊಂದಿದ್ದ ಕುವೆಂಪು ಅವರ ಜೀವನ ಚಿತ್ರಣವನ್ನು ಇಂದಿನ ಯುವ ಪೀಳಿಗೆ ಅಧ್ಯಯನ ನಡೆಸಿದರೆ ಪ್ರಾಪಂಚಿಕ ಮತ್ತು ಸಮಾಜದ ಕಲುಷಿತ ಲಕ್ಷಣಗಳನ್ನು ತೊರೆದು ವಿಶ್ವಮಾನವರಾಗಿ ಕಾಣಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮವನ್ನು ಶಿಂಷ ಸಹಕಾರ ಬ್ಯಾಂಕಿನ ಮಾಜಿ ಅಧ್ಯಕ್ಷ ಎಂ.ಅಪ್ಪಾಜಯ್ಯ ಉದ್ಘಾಟಿಸಿದರು. ಕಾಲೇಜಿನ ಕನ್ನಡ ಉಪನ್ಯಾಸಕಿ ಎಂ.ಕೆ.ಕೆಂಪಮ್ಮ ಶ್ರೀ ಕುವೆಂಪು ಒಂದು ನೆನಪು ಕುರಿತು ಪ್ರಧಾನ ಭಾಷಣ ಮಾಡಿದರು. ಪ್ರಾಂಶುಪಾಲೆ ಎ.ಸಿ.ಗೀತಾ ಅಧ್ಯಕ್ಷತೆ ವಹಿಸಿದ್ದರು.
ಕುವೆಂಪು ಕುರಿತ ವಿಶ್ವಮಾನವ ಸಂದೇಶ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಕೆ.ಆರ್.ಸಂಜನಾ, ದ್ವಿತೀಯ - ಎನ್.ಯು. ದೀಪಿಕಾ, ತೃತೀಯ ಸಿಂಚನ ಅವರಿಗೆ ನಾಡಪ್ರಭು ಕೆಂಪೇಗೌಡರ ಒಕ್ಕಲಿಗರ ಸಂಘದ ಅಧ್ಯಕ್ಷ ದೇಶಹಳ್ಳಿ ಶಿವಪ್ಪ ಬಹುಮಾನ ನೀಡಿ ಗೌರವಿಸಿದರು.ಕಾರ್ಯಕ್ರಮದಲ್ಲಿ ನಿವೃತ್ತ ಕಾರ್ಯಪಾಲಕ ಅಭಿಯಂತರ ವಿ.ವಿ.ಶಂಕರೇಗೌಡ, ಬಿ.ವಿ.ಶಂಕರೇಗೌಡ, ಸಂಘದ ವಿ.ಟಿ.ರವಿಕುಮಾರ್, ಎಚ್.ಸಿ.ಕುಮಾರ್, ತಿಪ್ಪುರು ರಾಜೇಶ್, ದೇವಕುಮಾರ್, ಮಾರಸಿಂಗನಹಳ್ಳಿ ರಾಮಚಂದ್ರ, ಎಚ್.ಕೆ.ವರಲಕ್ಷ್ಮಿ, ಶಿವರಾಮಯ್ಯ, ಉಪನ್ಯಾಸಕ ನಾಗರಾಜು ಮತ್ತಿತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))