ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರಾಷ್ಟ್ರಕವಿ ಕುವೆಂಪುರವರು ವಿಚಾರದಂತೆ ಪ್ರತಿಯೊಂದು ಮಗುವೂ ಹುಟ್ಟುತ್ತಲೇ ವಿಶ್ವಮಾನವವಾಗಿರುತ್ತದೆ. ಬೆಳೆಯುತ್ತ ನಾವು ಅದನ್ನು ಅಲ್ಪಮಾನವನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ವಿಶ್ವಮಾನವನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು ಎಂದಿದ್ದು, ಕುವೆಂಪು ಸಾಹಿತ್ಯ ವಿಶ್ವಮಾನವ ಸಂದೇಶದ ಪ್ರತೀಕವಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಹೇಳಿದರು.ನವನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಭವನದಲ್ಲಿ ನಡೆದ ರಸಋಷಿ ಕವಿ ಕುವೆಂಪು ಅವರ ಜನ್ಮ ದಿನದ ಅಂಗವಾಗಿ ವಿಶ್ವಮಾನವ ದಿನಚಾರಣೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದ ಅವರು, ಹುಟ್ಟುವಾಗ ವಿಶ್ವಮಾನವನಾಗಿಯೇ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾಂಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನು ಬುದ್ಧನನ್ನಾಗಿ, ಅಂದರೆ ವಿಶ್ವಮಾನವನನ್ನಾಗಿ, ಪರಿವರ್ತಿಸುವುದೇ ನಮ್ಮ ವಿದ್ಯೆ, ಸಂಸ್ಕೃತಿ, ನಾಗರಿಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಲೋಕ ಉಳಿದು, ಬಾಳಿ ಬದುಕಬೇಕಾದರೇ ಪ್ರಪಂಚದ ಮಕ್ಕಳೆಲ್ಲ ಅನಿಕೇತನರಾಗಬೇಕು ಎಂಬ ಕುವೆಂಪು ಅವರ ಸಂದೇಶಗಳನ್ನು ಯುವ ಸಮೂಹ ದವರಿಗೆ ಮನವರಿಕೆ ಮಾಡಬೇಕಾಗಿದೆ ಎಂದು ತಿಳಿಸಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ ಕನ್ನಡ ಉಪನ್ಯಾಸಕ ಸಂಗಮೇಶ ಬ್ಯಾಳಿ ಅವರು ಕುವೆಂಪುರವರ ಸಾಹಿತ್ಯಿಕ ಕೊಡುಗೆಗಳ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ ಕುವೆಂಪು ಅವರ ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿಯಾಗಿದೆ. ಅವರ ಈ ಪಂಚಮಂತ್ರ ನಮ್ಮೆಲ್ಲರ ದೃಷ್ಟಿಯಾಗಬೇಕಾಗಿದೆ. ಅಂದರೆ, ನಮಗೆ ಇನ್ನು ಬೇಕಾದುದು ಆ ಮತ ಈ ಮತ ಅಲ್ಲ; ಮನುಜಮತ. ಆ ಪಥ ಈ ಪಥ ಅಲ್ಲ; ವಿಶ್ವಪಥ, ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ; ಸರ್ವರ ಸರ್ವಸ್ತರದ ಉದಯ ಅದುವೇ ಸರ್ವೋದಯ, ಎಂಬ ಕುವೆಂಪುರವರ ವಿಚಾರಗಳನ್ನು ನಮ್ಮ ನದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರು ತಿಳಿಸಿದಂತೆ ಮತ ತೊಲಗಿಸಿ, ಅಧ್ಯಾತ್ಮವು ವೈಜ್ಞಾನಿಕ ತತ್ತ್ವವಾಗಿ ಮಾನ್ಯತೆ ಪಡೆಯಬೇಕು ಮತ್ತು ಮತ ಮನುಜಮತವಾಗಬೇಕು. ಪಥ ವಿಶ್ವಪಥವಾಗಬೇಕು, ಮನುಷ್ಯ ವಿಶ್ವಮಾನವನಾಗಬೇಕು ಎಂಬ ಕುವೆಂಪುರವರ ವಿಚಾರಗಳನ್ನು ಪ್ರತಿಯೊಬ್ಬರ ಅರಿತುಕೊಂಡು ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಸಿ.ಎಸ್.ನಾಗನೂರು, ಶಂಕರ ಹೂಲಿ, ವಿಜಯಶ್ರೀ ಮುರನಾಳ, ಬಾದಾಮಿ ತಾಲೂಕು ಅಧ್ಯಕ್ಷ ಬಿ.ಎಫ್.ಹೊರಕೇರಿ, ಬೀಳಗಿ ತಾಲೂಕು ಅಧ್ಯಕ್ಷ ಗುರುರಾಜ ಲೂತಿ, ಹುನಗುಂದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ, ಕವಿ ಯೋಗೇಶ ಲಮಾಣಿ, ದಾಕ್ಷಾಯಣಿ ಮಂಡಿ, ಈಶ್ವರಯ್ಯ ವಜ್ರಮಟ್ಟಿ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.