ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಸಋಷಿ ಕುವೆಂಪು ಜನ್ಮದಿನಾಚರಣೆ ಅಂಗವಾಗಿ ವಿಶೇಷ ಉಪನ್ಯಾಸ ನಡೆಯಿತು.

ಉಡುಪಿ: ಕುವೆಂಪು ನಿಸರ್ಗದಲ್ಲಿ ದೇವರನ್ನು ಸ್ವರ್ಗವನ್ನು ಕಂಡವರು. ಲೌಕಿಕ ಬದುಕಿನ ಅನುಭವದೊಳಗೆ ಅಧ್ಯಾತ್ಮವನ್ನು ಕಂಡವರು. ಜಾತೀಯತೆ, ಧಾರ್ಮಿಕ ಅಂಧಶ್ರದ್ದೆ, ಜಾಗತಿಕ ಮಹಾ ಯುದ್ದದ ಕಾಲಘಟ್ಟದಲ್ಲಿ ಬದುಕಿದ ರಸಋಷಿ, ಪ್ರಸ್ತುತ ಕಾಲಕ್ಕೆ ಅನ್ವಯಿಸುವ ವಿಶ್ವಮಾನವ ಸಂದೇಶವನ್ನು ಜಾಗತಿಕವಾಗಿ ಬಿತ್ತರಿಸಿದವರು. ಜಗತ್ತು ಒಂದೇ ಎನ್ನವುದು ಆರ್ಥಿಕತೆಯ, ಅನ್ನದ ಪರಿಭಾಷೆಯಾದರೆ, ಕುವೆಂಪುರವರು ಕಟ್ಟಿದ ವಿಶ್ವಮಾನವ ಪರಿಕಲ್ಪನೆ ಭಾವನಾತ್ಮಕವಾಗಿದ್ದು, ಸರ್ವ ಕಾಲಕ್ಕೂ ಪ್ರಸ್ತುತ. ಕುವೆಂಪು ಸಾಹಿತ್ಯವನ್ನು ಓದಿದರೆ ಸಾಲದು ಅದು ನಮ್ಮ ಭಾವ ಮತ್ತು ಬದುಕಿನಲ್ಲಿ ಸ್ಥಿರವಾಗಿ ನಿಲ್ಲಬೇಕು ಎಂದು ಆಳ್ವಾಸ್‌ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್‌ ಕೈರೋಡಿ ಅಭಿಪ್ರಾಯಪಟ್ಟರು.

ಇವರು ಇಲ್ಲಿನ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕನ್ನಡ ವಿಭಾಗದ ಆಶ್ರಯಲ್ಲಿ ಹಾಗೂ ಐಕ್ಯೂಎಸಿ ಘಟಕದ ಸಹಯೋಗದಲ್ಲಿ ರಸಋಷಿ ಕುವೆಂಪು ಜನ್ಮದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಕನ್ನಡ ವಿಭಾಗದ ವಿದ್ಯಾರ್ಥಿಗಳಾದ ಸುಶ್ಮಿತಾ ಶೆಟ್ಟಿ, ಕೃಷ್ಣ ಜಿ.ಜಿ., ಪ್ರವೀಣ ಅವರು ಕುವೆಂಪು ಅವರ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಕೆಸೆಟ್‌ ಪರೀಕ್ಷೆಯಲ್ಲಿ ಅರ್ಹತೆ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವಕರ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ರತ್ನಮಾಲಾ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿವಾನಿ ಮತ್ತು ಬಳಗ ಪ್ರಾರ್ಥಿಸಿದರು. ಸುಶ್ಮಿತಾ ಶೆಟ್ಟಿ ವಂದಿಸಿದರು. ಭಾರತಿ ಕಾರ್ಯಕ್ರಮ ನಿರೂಪಿಸಿದರು. ಶೈಕ್ಷಣಿಕ ಸಲಹೆಗಾರ ಡಾ. ಶ್ರೀಧರ್‌ ಭಟ್‌, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಸಂದೇಶ್‌ ಎಂ.ವಿ., ದತ್ತ ಕುಮಾರ್‌, ಉಪನ್ಯಾಸಕರಾದ ಅರ್ಚನಾ, ಭವ್ಯ , ಶಾಲಿನಿ, ರಾಜೇಂದ್ರ, ಡಾ. ಮಹೇಶ್‌ ಕುಮಾರ್‌ ಉಪಸ್ಥಿತರಿದ್ದರು.