ಕುವೆಂಪು ವಿವಿ ಸ್ನಾತಕೋತ್ತರ ಪದವಿಗೂ ಅತಿಥಿ ಉಪನ್ಯಾಸಕರಿಲ್ಲ!

| Published : Dec 30 2023, 01:15 AM IST

ಕುವೆಂಪು ವಿವಿ ಸ್ನಾತಕೋತ್ತರ ಪದವಿಗೂ ಅತಿಥಿ ಉಪನ್ಯಾಸಕರಿಲ್ಲ!
Share this Article
  • FB
  • TW
  • Linkdin
  • Email

ಸಾರಾಂಶ

ಶಂಕರಘಟ್ಟದಲ್ಲಿರುವ ಕುವೆಂಪು ವಿವಿಯಲ್ಲೇ ಅತಿಥಿ ಉಪನ್ಯಾಸಕರ ಕೊರತೆ ಎದ್ದುಕಾಣುತ್ತಿದೆ. ಕಾಲೇಜು ತರಗತಿಗಳು ಪ್ರಾರಂಭವಾಗಿ ತಿಂಗಳು ಕಳೆದರೂ ಇನ್ನೂ ಅತಿಥಿ ಉಪನ್ಯಾಸಕರ ನೇಮಕಾತಿಗೆ ಕುವೆಂಪು ವಿವಿ ಇನ್ನೂ ಅನುಮತಿ ನೀಡದಿರುವ ಕಾರಣ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.

ಗಣೇಶ್‌ ತಮ್ಮಡಿಹಳ್ಳಿ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಂಕರಘಟ್ಟದಲ್ಲಿರುವ ಕುವೆಂಪು ವಿವಿಯಲ್ಲೇ ಅತಿಥಿ ಉಪನ್ಯಾಸಕರ ಕೊರತೆ ಎದ್ದುಕಾಣುತ್ತಿದೆ. ಕಾಲೇಜು ತರಗತಿಗಳು ಪ್ರಾರಂಭವಾಗಿ ತಿಂಗಳು ಕಳೆದರೂ ಇನ್ನೂ ಅತಿಥಿ ಉಪನ್ಯಾಸಕರ ನೇಮಕಾತಿಗೆ ಕುವೆಂಪು ವಿವಿ ಇನ್ನೂ ಅನುಮತಿ ನೀಡದಿರುವ ಕಾರಣ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.

ಇತ್ತ ವಿಭಾಗಕ್ಕೆ ಬೇಕಾದ ಕಾಯಂ ಅಧ್ಯಾಪಕರು ಇಲ್ಲ. ಹೀಗಾಗಿ ವಿ.ವಿ.ಯ 34 ವಿಭಾಗಗಳು ಅತಿಥಿ ಉಪನ್ಯಾಸಕರನ್ನೇ ನೆಚ್ಚಿಕೊಂಡಿವೆ. ಈಗ ಅವರ ನೇಮಕಾತಿ ಆಗದ ಕಾರಣ ಪಾಠ, ಪ್ರವಚನ ನಡೆಯದೇ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ವಿದ್ಯಾರ್ಥಿಗಳು ಸೆಮಿಸ್ಟರ್‌ ಪದ್ದತಿಯಿಂದಾಗಿ 1 ಸೆಮಿಸ್ಟರ್‌ಗೆ 4 ತಿಂಗಳು ಮಾತ್ರ ಪಾಠ ಪ್ರವಚನ ನಡೆಯುತ್ತದೆ. ಈಗಾಗಲೇ ಶೇ.25ರಷ್ಟು ಪಾಠ ಬೋಧನೆ ನಡೆಯಬೇಕಿತ್ತು. ಆದರೆ, ಅತಿಥಿ ಉಪನ್ಯಾಸಕರಿಗೆ ಒಂದು ತಿಂಗಳು ವೇತನ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ನೇಮಕ ಪ್ರಕ್ರಿಯೆ ಆಮೆಗತಿಯಲ್ಲಿ ನಡೆಸಿ, ಹಣ ಉಳಿಸುವ ಪ್ರಯತ್ನ ಮಾಡಿದೆ ಎಂದು ವಿಶ್ವವಿದ್ಯಾಲಯದ ಮೂಲಗಳಿಂದ ತಿಳಿದುಬಂದಿದೆ.

ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ ತರಗತಿ ನಡೆಸಲು ಅನುವು ಮಾಡಿಕೊಡಬೇಕಾದ ವಿಶ್ವವಿದ್ಯಾಲಯವೇ ಪಾಠ ಪ್ರವಚನವನ್ನು ಗಾಳಿಗೆ ತೂರಿ ಹಣ ಉಳಿಸುವ ಪ್ರಯತ್ನ ನಡೆಸಿರುವುದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ವಿಶ್ವವಿದ್ಯಾಲಯ ವ್ಯಾಪ್ತಿಯ ಘಟಕ ಕಾಲೇಜುಗಳಾದ ಶಿವಮೊಗ್ಗ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜು , ಸಹ್ಯಾದ್ರಿ ವಿಜ್ಞಾನ ಕಾಲೇಜು ಹಾಗೂ ಶಂಕರಘಟ್ಟದ ಎಸ್‌ಎಂಆರ್‌ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡು ಪಾಠ ಪ್ರವಚನ ನಡೆಸಲಾಗುತ್ತಿದೆ. ಈ ಮೂರೂ ಕಾಲೇಜುಗಳ ತರಗತಿ ನಡೆಸಲು ಅತಿಥಿ ಉಪನ್ಯಾಸಕರನ್ನೇ ನೆಚ್ಚಿಕೊಂಡಿವೆ.

ವಿದ್ಯಾರ್ಥಿಗಳ ನಿತ್ಯ ಗೋಳು:

ಕೆಲವು ವಿಭಾಗಗಳಲ್ಲಿ ವಿಭಾಗ ಮುಖ್ಯಸ್ಥರು ಮಾತ್ರ ಇದ್ದರೆ, ಮತ್ತೆ ಕೆಲವು ವಿಭಾಗಗಳಲ್ಲಿ ಒಂದೆರಡು ಕಾಯಂ ಅಧ್ಯಾಪಕರಿದ್ದಾರೆ. ಹೀಗಾಗಿ, ಅತಿಥಿ ಉಪನ್ಯಾಸಕರು ಇಲ್ಲದೇಹೋದಲ್ಲಿ ತರಗತಿಗಳೇ ನಡೆಯವುದಿಲ್ಲ. ಈ ವರ್ಷ ಶೈಕ್ಷಣಿಕ ವರ್ಷದ ತರಗತಿ ಆರಂಭವಾಗಿ ತಿಂಗಳು ಕಳೆದರೂ ಇದೂವರೆಗೆ ಅತಿಥಿ ಉಪನ್ಯಾಸಕರ ನೇಮಕವೇ ಆಗಿಲ್ಲ. ವಿದ್ಯಾರ್ಥಿಗಳು ಪ್ರತಿದಿನ ಕಾಲೇಜಿಗೆ ಬರುತ್ತಿದ್ದಾರೆ. ಆದರೆ, ತರಗತಿ ನಡೆಸಲು ಉಪನ್ಯಾಸಕರೇ ಇಲ್ಲ. ಇದರ ಬಗ್ಗೆ ಪ್ರಾಂಶುಪಾಲರನ್ನು ಕೇಳಿದರೆ ವಿಶ್ವವಿದ್ಯಾಲಯ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವವರೆಗೆ ನಾವೇನು ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಕೈ ಚೆಲ್ಲುತ್ತಿದ್ದಾರೆ ಎಂಬುದು ವಿದ್ಯಾರ್ಥಿಗಳ ದೂರು.

34 ವಿಭಾಗಗಳಿಗೆ ಬೇಕಿರೋದು 200 ಅತಿಥಿ ಉಪನ್ಯಾಸಕರು:

ಇನ್ನು ಕಾರ್ಯಭಾರಕ್ಕೆ ತಕ್ಕಂತೆ ಅತಿಥಿ ಉಪನ್ಯಾಸಕರನ್ನು ಕೊಡಿ ಎಂದರೆ ಅದರಲ್ಲೂ ಚೌಕಾಸಿ ಮಾಡಲಾಗುತ್ತಿದೆ. ಕುವೆಂಪು ವಿವಿ ಆವರಣದಲ್ಲಿರುವ ಸ್ಮಾತಕೋತ್ತರ ಪದವಿಯ 34 ವಿಭಾಗಗಳಿಗೆ 180ರಿಂದ 200 ಅತಿಥಿ ಉಪನ್ಯಾಸಕರ ಅಗತ್ಯವಿದೆ. ಆದರೆ, ಕುಲಸಚಿವರು 150 ಅತಿಥಿ ಉಪನ್ಯಾಸಕರನ್ನು ಮಾತ್ರ ಕೊಡುತ್ತೇವೆ ಎನ್ನುತ್ತಿದ್ದಾರೆ. ಉಳಿದ 50 ಅತಿಥಿ ಉಪನ್ಯಾಸಕರ ಕಾರ್ಯಭಾರವನ್ನು ಯಾರು ನಿಭಾಯಿಸುತ್ತಾರೆ ಎಂಬುದು ಹಲವು ಅಧ್ಯಾಪಕರ ಪ್ರಶ್ನೆಯಾಗಿದೆ.

ಕಾಲೇಜು ಪ್ರಾರಂಭವಾಗಿ ಎರಡು ತಿಂಗಳು ಕಳೆದರೂ ಇನ್ನೂ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳದ ಕುವೆಂಪು ವಿವಿ ಕ್ರಮ ಖಂಡಿಸಿ ಮೊನ್ನೆಯಷ್ಟೇ ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಆಗಲಾದರೂ ವಿವಿ ಎಚ್ಚೆತ್ತುಕೊಂಡು ಸ್ನಾತಕೋತ್ತರ ಪದವಿ ತರಗತಿಗಳನ್ನು ಆರಂಭಕ್ಕೆ ಇನ್ನೂ ಎರಡು ತಿಂಗಳಿರುವಾಗ ನೇಮಕ ಪ್ರಕ್ರಿಯೆ ಕೈಗೊಳ್ಳಬಹುದಿತ್ತು. ಆದರೆ, ಡಿಸೆಂಬರ್‌ 1ರಿಂದ ತರಗತಿಗಳು ಆರಂಭವಾಗಿದ್ದರೂ ಇನ್ನೂ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡಿಲ್ಲ.

ಅತಂತ್ರಕ್ಕೆ ಯಾರು ಹೊಣೆ?:

ಈಗ ನೇಮಕಾತಿ ಪ್ರಕ್ರಿಯೆ ನಡೆದರೂ ಪ್ರಕ್ರಿಯೆ ಪೂರ್ಣಗೊಂಡು ಅತಿಥಿ ಉಪನ್ಯಾಸಕರು ತರಗತಿಗೆ ಬರುವುದಕ್ಕೆ ಇನ್ನೂ 15 ದಿನವಾದರೂ ಬೇಕಾಗುತ್ತದೆ. ಅಲ್ಲಿಗೆ ಒಂದೂವರೆಗೆ ತಿಂಗಳು ವಿದ್ಯಾರ್ಥಿಗಳಿಗೆ ಪಾಠ ಪ್ರವಚನದಲ್ಲಿ ಹಿನ್ನಡೆಯಾಗುವುದು. ಉಳಿದ ಎರಡುವರೆ ತಿಂಗಳಲ್ಲಿ ಸಿಲಬಸ್‌ ಪೂರ್ಣಗೊಳ್ಳುವುದು ಕಷ್ಟ ಎಂದು ಹೇಳಲಾಗುತ್ತಿದೆ. ಹೀಗಾದರೆ, ವಿದ್ಯಾರ್ಥಿಗಳ ಭವಿಷ್ಯದ ಕಥೆ ಏನೂ, ಇದಕ್ಕೆ ಯಾರು ಹೊಣೆ ಎಂಬುದು ಹಲವರ ಪ್ರಶ್ನೆಯಾಗಿದೆ.

ಸದ್ಯ ಕುವೆಂಪು ವಿಶ್ವವಿದ್ಯಾಲಯಕ್ಕೆ ಕುಲಪತಿಗಳ ನೇಮಕವೂ ಆಗಿಲ್ಲ, ಹಂಗಾಮಿ ಇರುವವರು ಮತ್ತು ಹಂಗಾಮಿ ರಿಜಿಸ್ಟರ್ ಈವರೆಗೆ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸರ್ಕಾರ ಈ ಕೂಡಲೇ ಮಧ್ಯೆ ಪ್ರವೇಶಿಸಿ, ಅತಿಥಿ ಉಪನ್ಯಾಸಕರ ನೇಮಕ ಮಾಡಲು ಕುವೆಂಪು ವಿ.ವಿ.ಗೆ ನಿರ್ದೇಶಿಸಬೇಕು. ವಿದ್ಯಾರ್ಥಿಗಳು ಕುವೆಂಪು ವಿ.ವಿ. ಮೇಲಿನ ನಂಬಿಕೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕು ಎಂಬ ಕೂಗು ಜೋರಾಗಿದೆ.

- - - ಕೋಟ್ಸ್‌

ಕುವೆಂಪು ವಿ.ವಿ.ಯ ಎಲ್ಲ ವಿಭಾಗಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಎಷ್ಟಿದೆ, ಎಷ್ಟು ಅತಿಥಿ ಉಪನ್ಯಾಸಕರು ಬೇಕಾಗಬಹುದು, ಅತಿಥಿ ಉಪನ್ಯಾಸಕರ ವೇತನಕ್ಕೆ ಎಷ್ಟು ಅನುದಾನ ಲಭ್ಯವಿದೆ ಎಂಬುದನ್ನು ಪರಿಗಣಿಸಿ, ಶೀಘ್ರದಲ್ಲೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುವುದು

- ಸ್ನೇಹಲ್‌ ಲೋಖಂಡೆ, ಕುಲಸಚಿವ, ಕುವೆಂಪು ವಿಶ್ವವಿದ್ಯಾಲಯ

- - - ಕುವೆಂಪು ವಿ.ವಿ.ಯ ಎಲ್ಲ ವಿಭಾಗದಲ್ಲೂ ಕಾಯಂ ಅಧ್ಯಾಪಕರ ಕೊರತೆಯಿಂದಾಗಿ ಅತಿಥಿ ಉಪನ್ಯಾಸಕರ ಅವಶ್ಯಕತೆ ಹೆಚ್ಚಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ, ಕಾರ್ಯಭಾರಕ್ಕೆ ತಕ್ಕಂತೆ ಸುಮಾರು 200 ಅತಿಥಿ ಉಪನ್ಯಾಸಕರ ಬೇಡಿಕೆ ಇದೆ. ಆದರೆ, 150 ಅತಿಥಿ ಉಪನ್ಯಾಸಕರು ಮಾತ್ರ ಕೊಡುತ್ತೇವೆ ಎನ್ನುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತದೆ. ಕಾರ್ಯಭಾರಕ್ಕೆ ತಕ್ಕಂತೆ ಅತಿಥಿ ಉಪನ್ಯಾಸಕರನ್ನು ಕೊಡಬೇಕು ಎಂಬ ಬೇಡಿಕೆ ಇಡಲಾಗಿದೆ

- ಪ್ರೊ. ಎಸ್‌.ವೆಂಕಟೇಶ್‌, ಪ್ರಭಾರ ಕುಲಪತಿ, ಕುವೆಂಪು ವಿವಿ

- - - -29ಎಸ್‌ಎಂಜಿಕೆಪಿ01: ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯ ಕಟ್ಟಡ.