ವೈಚಾರಿಕತೆ, ವೈಜ್ಞಾನಿಕತೆ ಎತ್ತಿ ಹಿಡಿದಿದ್ದ ಕುವೆಂಪು

| Published : Apr 12 2025, 12:51 AM IST

ಸಾರಾಂಶ

ಶಿವಮೊಗ್ಗ: ವೈಚಾರಿಕತೆ ಮತ್ತು ವೈಜ್ಞಾನಿಕತೆ ಎಂಬುವುದನ್ನು ನಾವು ಬಹಳ ವಿಶೇಷ ಅರ್ಥದಲ್ಲಿ ನೋಡಿದಾಗ ಮಾತ್ರ ಕುವೆಂಪು ಆವರ ಆಶಯ ಅರ್ಥವಾಗುತ್ತದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಹೇಳಿದರು.

ಶಿವಮೊಗ್ಗ: ವೈಚಾರಿಕತೆ ಮತ್ತು ವೈಜ್ಞಾನಿಕತೆ ಎಂಬುವುದನ್ನು ನಾವು ಬಹಳ ವಿಶೇಷ ಅರ್ಥದಲ್ಲಿ ನೋಡಿದಾಗ ಮಾತ್ರ ಕುವೆಂಪು ಆವರ ಆಶಯ ಅರ್ಥವಾಗುತ್ತದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಹೇಳಿದರು.

ಇಲ್ಲಿನ ಸಹ್ಯಾದ್ರಿ ಕಲಾ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು ಸಹ್ಯಾದ್ರಿ ಕಲಾ ಕಾಲೇಜು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕುವೆಂಪು ಓದು: ಕಮ್ಮಟ ಕುರಿತ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ವೈಚಾರಿಕತೆ ಮತ್ತು ವೈಜ್ಞಾನಿಕತೆ ಸತತ ಎಚ್ಚರದಲ್ಲಿರಬೇಕು. ವೈಚಾರಿಕತೆ ಮತ್ತು ವೈಜ್ಞಾನಿಕತೆ ಎತ್ತಿ ಹಿಡಿದ ಕುವೆಂಪುರವರು ಈ ಎರಡು ಪದಗಳು ಕೇವಲ ಪದಗಳಲ್ಲ ಆಯಾ ಸಂದರ್ಭಕ್ಕೆ ತಕ್ಕಂತೆ ವಿಮರ್ಶಿಸುವ ಪ್ರಯೋಗಕ್ಕೆ ಒಳಪಡುವ ವಿಚಾರ ಆಹ್ವಾನಿಸುವ ಆಧಾರಗಳನ್ನು ಹುಡುಕುವ ಪದಗಳಾಗಿವೆ ಎಂದಿದ್ದಾರೆ ಎಂದು ತಿಳಿಸಿದರು.

ಉದಾಹರಣೆಗೆ ಟಿಪ್ಪು ಒಬ್ಬ ಕ್ರೂರಿ ನಿಜ, ಆದರೆ ಆತ ಒಳ್ಳೆಯದನ್ನು ಕೂಡ ಮಾಡಿದ್ದಾನೆ. ಯಾವುದೇ ಒಂದು ವಿಚಾರವನ್ನು ಧಾರ್ಮಿಕತೆಯ ತಳಹದಿಯಲ್ಲಿ ನೋಡುವುದು ಅಪಾಯವಾಗುತ್ತದೆ. ಆದರೆ, ಇತ್ತೀಚೆಗೆ ನಮಗೆ ಬೇಕಾದ್ದನ್ನು ಮಾತ್ರ ಇಟ್ಟುಕೊಳ್ಳುವ ಮತ್ತು ಅದನ್ನು ವಿಂಜೃಭಿಸುವ ಶಕ್ತಿಗಳು ಹುಟ್ಟಿಗೊಂಡಿವೆ. ಆಗಾಗಿ ಒಳ್ಳೆಯದು ಮತ್ತು ಕೆಟ್ಟದ್ದು ಎರಡನ್ನು ಅರ್ಥಮಾಡಿಕೊಳ್ಳುವುದು, ವೈಚಾರಿಕತೆಯನ್ನು ಅರ್ಥಮಾಡಿಕೊಳ್ಳುವುದರ ಮೂಲಕ ವಿಜ್ಞಾನವನ್ನು ಪ್ರಯೋಗಕ್ಕೆ ಒಡ್ಡುವ ಮೂಲಕ ನಾವು ಕುವೆಂಪು ಅವರನ್ನು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ, ವಕೀಲ ಕೆ.ಪಿ.ಶ್ರೀಪಾಲ್ ಮಾತನಾಡಿ, ಕುವೆಂಪು ಶತಮಾನಗಳ ದಾರ್ಶನಿಕ. ಅವರ ಚಿಂತನೆಗಳು ಬಹುಶಃ ಈಗ ಇದ್ದಿದ್ದರೆ ಗೌರಿಯಂತೆ ಕೊಲೆ ಆಗುತ್ತಿದ್ದಾರೋ ಏನೋ, ನೂರು ದೇವರುಗಳನ್ನು ನೂಕು ಆಚೆ ಎಂದವರು ಅವರು, ಅವರ ಚಿಂತನೆಗಳು ಈಗಿನ ಹೊಸ ರೀತಿಯ ಸೈದ್ಧಾಂತಿಕ ನಿಲುವುಗಳು ಅವರನ್ನು ಒಪ್ಪುತ್ತಿರಲಿಲ್ಲ. ಅಷ್ಟೇ ಏಕೆ ಕುವೆಂಪುರವರ ದಾರ್ಶನಿಕ, ವೈಚಾರಿಕ ಮತ್ತು ವೈಜ್ಞಾನಿಕ ಚಿಂತನೆಗಳನ್ನು ಅವರ ಕುಟುಂಬದವರೇ ಅನುಸರಿಸದೇ ಇರುವುದು ವಿಷಾದನೀಯ ಎಂದರು.ಕುವೆಂಪು, ಬುದ್ಧ, ಗಾಂಧಿ, ಬಸವಣ್ಣನವರ ಓದು ಈಗ ಇಲ್ಲವಾಗಿದೆ. ವಿಷಾದದ ಛಾಯೆಗಳು ಆವರಿಸತೊಡಗಿವೆ. ವೈಚಾರಿಕತೆಗಳ ಬದಲು ಪಾದ ಪೂಜೆಗಳೇ ಧ್ಯಾನಿಸತೊಡಗಿವೆ. ಮನುಷ್ಯನ ಚಿಂತನೆಗಳು ಬೇರೆ ಬೇರೆ ಅರ್ಥಪಡೆಯತೊಡಗಿವೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕುವೆಂಪು ಅವರನ್ನು ಓದುವುದು ಅಷ್ಟೇ ಅಲ್ಲ ಅವರ ಆದರ್ಶಗಳನ್ನು ಕೂಡ ಪಾಲಿಸಬೇಕು ಎಂದು ಹೇಳಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯ ಪ್ರೊ.ಬಿ.ಎಲ್.ರಾಜು, ಕನ್ನಡದ ಪ್ರಜ್ಞೆಯನ್ನು ಹೊಸದಾಗಿ ವಿಸ್ತರಿಸಿದವರು ಕುವೆಂಪು ಅವರು, ಕನ್ನಡದ ಬದುಕಿಗೆ ವೈಚಾರಿಕತೆ ಮತ್ತು ವೈಜ್ಞಾನಿಕತೆ ಅಗತ್ಯ ಎಂದು ಸಾರಿದವರು. ಆದರೆ, ಕುವೆಂಪು ಸೇರಿದಂತೆ ಎಲ್ಲಾ ದಾರ್ಶನಿಕರನ್ನು ಮರಿಯುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಕುವೆಂಪು ಓದು ಕಮ್ಮಟವನ್ನು ಇಲ್ಲಿ ಏರ್ಪಡಿಸಲಾಗಿದೆ. ಇದರ ಪ್ರಯೋಜನವನ್ನು ಮಕ್ಕಳು ಪಡೆಯಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಸೈಯ್ಯದ್ ಸನಾವುಲ್ಲಾ ವಹಿಸಿದ್ದರು. ಕಮ್ಮಟದ ನಿರ್ದೇಶಕ ಪ್ರೊ.ಮೇಟಿ ಮಲ್ಲಿಕಾರ್ಜುನ ಸೇರಿದಂತೆ ಹಲವರಿದ್ದರು.