ಕೆ.ವಿ.ಶಂಕರಗೌಡರು ರಾಜಕೀಯ ಸಂತ, ಮಾನವತಾವಾದಿ: ಕೆಟಿಎಸ್ ಬಣ್ಣನೆ

| Published : Oct 17 2024, 12:02 AM IST

ಸಾರಾಂಶ

ಕೆ.ವಿ.ಶಂಕರಗೌಡರು ಜಿಲ್ಲೆಗೆ ಮತ್ತು ನಾಡಿಗೆ ಮಾಡಿರುವ ಕೆಲಸ ಅಗಾಧವಾಗಿದೆ. ಗಾಂಧಿಯವರ ಒಡನಾಡಿಯಾಗಿ ಅವರ ಎಲ್ಲಾ ಆಲೋಚನೆಗಳನ್ನು ಅತ್ಯಂತ ಬದ್ಧತೆಯಿಂದ ಅನುಸರಿಸುತ್ತಿದ್ದರು. ಪ್ಯಾರೇಲಾಲ್ ಬರೆದಿರುವ ಗಾಂಧಿಯವರ 1700 ಪುಟಗಳ ಕೃತಿಯನ್ನು ಎರಡು ಸಂಪುಟಗಳಲ್ಲಿ ಗಾಂಧೀಜಿಯ ಅಂತಿಮ ಹಂತ ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದ ಮಾಡಿಕೊಟ್ಟ ಕೀರ್ತಿ ಕೆವಿಎಸ್‌ಗೆ ಸಲ್ಲುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಿತ್ಯ ಸಚಿವ ಕೆ.ವಿಶಂಕರಗೌಡರ ವ್ಯಕ್ತಿತ್ವ, ನಾಯಕತ್ವ, ದೂರದರ್ಶಿತ್ವ ಮಾದರಿಯಾಗುವಂತದ್ದು. ಅವರೊಬ್ಬ ಜಿಲ್ಲೆಯ ರಾಜಕೀಯ ಸಂತ, ಮಾನವತಾವಾದಿಯಾಗಿ ಉಳಿದಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಬಣ್ಣಿಸಿದರು.

ನಗರದ ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಮಂಡ್ಯ ಕೆ.ವಿ.ಶಂಕರಗೌಡ ಅಧ್ಯಯನ ಪೀಠ, ಕರ್ನಾಟಕ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕೆ.ವಿ.ಶಂಕರಗೌಡ 109 ಒಂದು ನೆನಪು ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮತ್ತೆ ಮತ್ತೆ ಶಂಕರಗೌಡ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

ಕೆ.ವಿ.ಶಂಕರಗೌಡರು ಜಿಲ್ಲೆಗೆ ಮತ್ತು ನಾಡಿಗೆ ಮಾಡಿರುವ ಕೆಲಸ ಅಗಾಧವಾಗಿದೆ. ಗಾಂಧಿಯವರ ಒಡನಾಡಿಯಾಗಿ ಅವರ ಎಲ್ಲಾ ಆಲೋಚನೆಗಳನ್ನು ಅತ್ಯಂತ ಬದ್ಧತೆಯಿಂದ ಅನುಸರಿಸುತ್ತಿದ್ದರು. ಪ್ಯಾರೇಲಾಲ್ ಬರೆದಿರುವ ಗಾಂಧಿಯವರ 1700 ಪುಟಗಳ ಕೃತಿಯನ್ನು ಎರಡು ಸಂಪುಟಗಳಲ್ಲಿ ಗಾಂಧೀಜಿಯ ಅಂತಿಮ ಹಂತ ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದ ಮಾಡಿಕೊಟ್ಟ ಕೀರ್ತಿ ಕೆವಿಎಸ್‌ಗೆ ಸಲ್ಲುತ್ತದೆ. ಈ ಕೃತಿ ಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯ ಕಾಣಿಕೆಯಾಗಿದೆ ಎಂದರು.

ಮುಂದೆ ತನ್ನ ಪ್ರತಿಸ್ಪರ್ಧಿಯಾಗಿ ಎಲ್ಲಿ ನಿಲ್ಲುತ್ತಾನೋ ಎಂಬ ಆತಂಕದಿಂದ ಕೆಲ ರಾಜಕಾರಣಿಗಳು ತನ್ನೊಟ್ಟಿಗೆ, ತನ್ನ ಸುತ್ತ ಇರುವವರನ್ನು ಯಾವ ಕಾರಣಕ್ಕೂ ಬೆಳೆಯಲು ಬಿಡುವುದಿಲ್ಲ. ಆದರೆ, ಶಂಕರಗೌಡರು ಆ ರೀತಿ ಯೋಚನೆಯನ್ನು ಯಾವತ್ತೂ ಮಾಡಲಿಲ್ಲ ಎಂದರು.

ಜಿಲ್ಲೆಯಲ್ಲಿ ನಾಯಕತ್ವ ಗುಣ ಬೆಳೆಸಿದ ಕೀರ್ತಿ ಶಂಕರಗೌಡರಿಗೆ ಸಲ್ಲುತ್ತದೆ. ಎಚ್.ಡಿ.ಚೌಡಯ್ಯ, ಎಚ್.ಟಿ.ಕೃಷ್ಣಪ್ಪ, ಬಂಡಿಸಿದ್ದೇಗೌಡ, ಆತ್ಮಾನಂದ, ಸಿಂಗಾರಿಗೌಡ ಮುಂತಾದವರ ನಾಯಕತ್ವದ ಪರಂಪರೆ ಹುಟ್ಟುಹಾಕಿದರು. ಅವರನ್ನು ಬಿಟ್ಟರೆ ಎಸ್.ಡಿ.ಜಯರಾಂ ಈ ಕೆಲಸ ಮಾಡಿದರು ಎಂದರು.

ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ವ್ಯವಸಾಯ ಸೇವಾ ಸಹಕಾರ ಸಂಘ ಹಾಗೂ ಅದರ ಶಾಖೆಗಳನ್ನು ಜಿಲ್ಲಾದ್ಯಂತ ಸ್ಥಾಪಿಸಿ ಆರ್ಥಿಕ ಅಡಿಪಾಯ ಹಾಕಿದವರು ಕೆವಿಎಸ್. ಪೌರಾಣಿಕ ನಾಟಕಗಳ ಪ್ರದರ್ಶನದ ಮೂಲಕ ಹಣ ಸಂಗ್ರಹಿಸಿ ದೇವಾಲಯ ಮತ್ತು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಒಂದು ಹೊಸ ಪರಂಪರೆಗೆ ನಾಂದಿ ಹಾಡಿದರು. ಅವರ ಹೆಸರಿನಲ್ಲಿ ಕೆ.ವಿ.ಶಂಕರಗೌಡ ಅಧ್ಯಯನ ಪೀಠ ಉತ್ತಮ ಕೆಲಸ ಮಾಡುತ್ತಿದೆ ಎಂದು ಪ್ರಶಂಸಿಸಿದರು.

ಶಂಕರಗೌಡರ ಗುಣ ಜೆಪಿ ಅವರ ಮೇಲೆ ಅಗಾಧ ಪ್ರಭಾವ ಬೀರಿದೆ. ನಾಲ್ವಡಿ ಅವರ ನಂತರ ಕೆ.ವಿ.ಎಸ್ ಹತ್ತು ಹಲವು ದಿಕ್ಕಿನಲ್ಲಿ ಜಿಲ್ಲೆಯನ್ನು ಸಮರ್ಪಕವಾಗಿ ಕಟ್ಟುವ ಕೆಲಸ ಮಾಡಿರುವುದು ಶ್ರೇಷ್ಠ ಕಾರ್ಯವಾಗಿದೆ. ಈ ಬಗ್ಗೆ ಮುಂದಿನ ಪೀಳಿಗೆಗೆ ತಲಪಿಸುವ ಕೆಲಸ ಮಾಡಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಎಂ.ಶ್ರೀನಿವಾಸ್ ಮಾತನಾಡಿ, ಶಾಲಾ ಕಾಲೇಜು ದಿನಗಳಲ್ಲಿ ಎಪಿಎಂಸಿ ಆವರಣದಲ್ಲಿ ಕೆ.ವಿ.ಶಂಕರಗೌಡರನ್ನು ನೋಡುತ್ತಾ ಬೆಳೆದ ನಾನು ರಾಜಕೀಯ ರಂಗಕ್ಕೆ ಬರಲು ಮತ್ತು ಶಿಕ್ಷಣ ಸಂಸ್ಥೆ ಕಟ್ಟಲು ಕೆ.ವಿ.ಶಂಕರಗೌಡ ಸ್ಫೂರ್ತಿಯಾಗಿದ್ದಾರೆ ಎಂದರು.

ಮತ್ತೆ ಮತ್ತೆ ಶಂಕರಗೌಡ ಕೃತಿ ಸಂಪಾದಕಿ ಎಂ.ಯು. ಶ್ವೇತಾ ಮಾತನಾಡಿ, ಕೆ.ವಿ.ಶಂಕರಗೌಡರ ಪಕ್ಕದ ಊರಿನವಳಾದ ನನಗೆ ಅವರೊಬ್ಬ ರಾಜಕಾರಣಿ, ಪಿಇಎಸ್ ಸಂಸ್ಥೆ ಕಟ್ಟಿದವರು ಎಂಬುದನ್ನು ಬಿಟ್ಟರೆ ಬೇರೇನೂ ಗೊತ್ತಿರಲಿಲ್ಲ. ಕೆ.ವಿ. ಶಂಕರಗೌಡರು ಘನವಾದ ಧೀಮಂತ ವ್ಯಕ್ತಿತ್ವದವರು. ಅವರ ಬಗ್ಗೆ ತಿಳಿದುಕೊಳ್ಳುವುದಷ್ಟೇ ಅಲ್ಲ ಅವರ ಕುರಿತಾಗಿ ಲೇಖನ ಬರೆಯುವುದು, ಲೇಖನಗಳನ್ನು ಸಂಗ್ರಹಿಸಿ ಪುಸ್ತಕ ಮಾಡುವ ಕೆಲಸ ತುಂಬಾ ಹರ್ಷ, ಹೊಸ ಅನುಭವ ತಂದಿದೆ ಎಂದರು.

ಕೆ.ವಿ.ಶಂಕರಗೌಡರ ಒಡನಾಟ ಇದ್ದವರು ಮತ್ತು ಅವರ ಬಗ್ಗೆ ತಿಳಿದುಕೊಂಡ 55 ಲೇಖಕರ ಲೇಖನಗಳು ಈ ಪುಸ್ತಕದ 200 ಪುಟಗಳಲ್ಲಿದೆ. ಎಲ್ಲೂ ಕೂಡ ವಿಷಯ ಪುನರಾವರ್ತನೆ ಆಗಿಲ್ಲ. ಲೇಖಕರ ಹೊಸ ಹೊಸ ಅನುಭವ ದಾಖಲಾಗಿದೆ. ಪುಸ್ತಕವನ್ನು ಕೊಂಡು ಓದಿ ಇಂದಿನ ಮತ್ತು ಮುಂದಿನ ತಲೆಮಾರಿಗೆ ತಿಳಿಸಿ ಅವರ ತತ್ವ ಆದರ್ಶವನ್ನು ಸಾಧ್ಯವಾದಷ್ಟು ಉಳಿಸಿ ಬೆಳೆಸುವ ಪ್ರಯತ್ನ ಮಾಡಬೇಕೆಂದು ಮನವಿ ಮಾಡಿದರು.

ಸಮಾರಂಭದಲ್ಲಿ ಬೆಂಗಳೂರು ಕೇಂದ್ರ ವಲಯ ಐಜಿ ಬಿ.ಆರ್.ರವಿಕಾಂತೇಗೌಡ, ಕೃತಿಯ ಪ್ರಧಾನ ಸಂಪಾದಕ ಡಾ.ರಾಗೌ, ಪುಸ್ತಕ ಪ್ರಕಟಣೆಗೆ ನೆರವಾದ ಮೈಸೂರು ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ, ಕೃತಿಯ ಸಂಪಾದಕ ಡಾ.ಶ್ರೀನಿವಾಸಯ್ಯ ಎನ್.ವೈ, ಕರ್ನಾಟಕ ಸಂಘದ ಅಧ್ಯಕ್ಷ ಬಿ.ಜಯಪ್ರಕಾಶಗೌಡ, ಪದಾಧಿಕಾರಿಗಳಾದ ಲೋಕೇಶ್ ಚಂದಗಾಲು, ಹನಕೆರೆ ನಾಗಪ್ಪ ಉಪಸ್ಥಿತರಿದ್ದರು.