ಸಾರಾಂಶ
ಮೂಲಭೂತ ಬ್ಯಾಂಕಿಂಗ್ ವ್ಯವಹಾರಕ್ಕೆ ಅನುಕೂಲವೊದಗಿಸಿಕೊಡಲು ಉಳಿತಾಯ ಖಾತೆಯೇ ಮೂಲಾಧಾರ. ಈ ಅವಧಿಯಲ್ಲಿ ಈ ಅಭಿಯಾನಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.
ಧಾರವಾಡ:
ರಾಷ್ಟ್ರವು ಜಾಗತಿಕವಾಗಿ ತೆರೆದುಕೊಂಡು ಅಭಿವೃದ್ಧಿ ಪಥದತ್ತ ತೀವ್ರ ಮುನ್ನಡೆಯುತ್ತಿರುವ ಹಂತದಲ್ಲಿ, ಬ್ಯಾಂಕಿಂಗ್ ರಂಗದ ಸಮಗ್ರ ಸೇವೆಗಳು ಜನಸಾಮಾನ್ಯರನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತಲುಪಬೇಕಾಗಿದೆ ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಚಂದ್ರಶೇಖರ ಪಾಟೀಲ ಹೇಳಿದರು.ಸೋಮವಾರ ಬ್ಯಾಂಕಿನ ಉಳಿತಾಯ ಖಾತೆ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ಬ್ಯಾಂಕ್ ಈ ಹಿಂದಿನ ಮಲಪ್ರಭಾ, ಬಿಜಾಪುರ, ವರದಾ ಮತ್ತು ನೇತ್ರಾವತಿ ಗ್ರಾಮೀಣ ಬ್ಯಾಂಕ್‌ಗಳ ಸಂಗಮವಾಗಿದ್ದು, ಬರುವ ಸೆ. 5ಕ್ಕೆ ಬ್ಯಾಂಕ್ 20ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಈ ಸಂದರ್ಭವನ್ನು ಹೆಚ್ಚು ಸ್ಮರಣೀಯವಾಗಿಸಲು ಬ್ಯಾಂಕ್ ವರ್ಷದುದ್ದಕ್ಕೂ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಅವಧಿಯಲ್ಲಿ ಹೆಚ್ಚೆಚ್ಚು ಜನರನ್ನು ತಲುಪುವ ಉದ್ದೇಶದಿಂದ ಮತ್ತು ಜನ ಸಾಮಾನ್ಯರನ್ನು ಸಾಮಾಜಿಕ ಸುರಕ್ಷಾ ಯೋಜನೆಗಳಡಿಯಲ್ಲಿ ತರಲು ಜು. 15ರಿಂದ ಪ್ರಾರಂಭವಾಗಿ ಸೆ. 5ರ ವರೆಗೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅವಧಿಯಲ್ಲಿ ಬ್ಯಾಂಕ್ ಉಳಿತಾಯ ಖಾತೆ, ಪ್ರಧಾನ ಮಂತ್ರಿ ಜೀವನ ಬಿಮಾ ಯೋಜನೆ ಮತ್ತು ಪ್ರಧಾನಮಂತ್ರಿ ಸುರಕ್ಷಾ ಯೋಜನೆಗಳಲ್ಲಿ ಕ್ರಮವಾಗಿ 2 ಲಕ್ಷ ಹೊಸ ಖಾತೆ ಹೊಂದಲು ಉದ್ದೇಶಿಸಿದೆ ಎಂದರು.
ಬ್ಯಾಂಕಿನ ಮುಖ್ಯ ಪ್ರಬಂಧಕ ಉಲ್ಲಾಸ ಗುನಗಾ ಮಾತನಾಡಿ, ಮೂಲಭೂತ ಬ್ಯಾಂಕಿಂಗ್ ವ್ಯವಹಾರಕ್ಕೆ ಅನುಕೂಲವೊದಗಿಸಿಕೊಡಲು ಉಳಿತಾಯ ಖಾತೆಯೇ ಮೂಲಾಧಾರ. ಈ ಅವಧಿಯಲ್ಲಿ ಈ ಅಭಿಯಾನಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಬ್ಯಾಂಕಿನ 9 ಜಿಲ್ಲೆಗಳ ವ್ಯಾಪ್ತಿಯಲ್ಲಿ ಎಲ್ಲ 629 ಶಾಖೆಗಳೂ ಈ ಅಭಿಯಾನದಲ್ಲಿ ಪಾಲಗೊಳ್ಳಲಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.