ಜ.೯ರಿಂದ ಕೆವಿಎಸ್ ನೆನಪಿನ ನಾಟಕೋತ್ಸವ: ಪ್ರೊ.ಜೆ.ಪಿ.

| Published : Jan 09 2025, 12:49 AM IST

ಸಾರಾಂಶ

ನಾಟಕೋತ್ಸವದ ಉದ್ಘಾಟನೆಯನ್ನು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಶಾಸಕ ಪಿ.ರವಿಕುಮಾರ್ ವಹಿಸುವರು. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಪ್ರಾಸ್ತಾವಿಕ ಮಾತನಾಡುವರು.

ಕನ್ನಡಪ್ರಭ ವಾರ್ತೆ ಮಂಡ್ಯ

ಕರ್ನಾಟಕ ನಾಟಕ ಅಕಾಡೆಮಿ ಮತ್ತು ಕರ್ನಾಟಕ ಸಂಘದ ವತಿಯಿಂದ ಜ.೯ರಿಂದ ೧೧ರವರೆಗೆ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಕೆ.ವಿ.ಶಂಕರಗೌಡ ನೆನಪಿನ ನಾಟಕೋತ್ಸವವನ್ನು ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಹೇಳಿದರು.

ಅಂದು ಮಧ್ಯಾಹ್ನ ೩ ಗಂಟೆಗೆ ನಡೆಯಲಿರುವ ನಾಟಕೋತ್ಸವದ ಉದ್ಘಾಟನೆಯನ್ನು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಶಾಸಕ ಪಿ.ರವಿಕುಮಾರ್ ವಹಿಸುವರು. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಪ್ರಾಸ್ತಾವಿಕ ಮಾತನಾಡುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಪಾಲ್ಗೊಳ್ಳುವರು. ಅಂದು ಸಂಜೆ ೬ ಗಂಟೆಗೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿರವರ ಕಾದಂಬರಿ ಆಧಾರಿತ ಜುಗಾರಿ ಕ್ರಾಸ್ ನಾಟಕ ಪ್ರದರ್ಶನಗೊಳ್ಳಲಿದೆ. ಬೆಂಗಳೂರಿನ ಸಮುದಾಯ ಪ್ರಸ್ತುತಪಡಿಸುವ ನಾಟಕವನ್ನು ನಟರಾಜ್ ಹೊನ್ನವಳ್ಳಿ ನಿರ್ದೇಶಿಸಿದ್ದಾರೆ ಎಂದರು.

ಜ.೧೦ರಂದು ಸಂಜೆ ೫ ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಜನತಾ ಶಿಕ್ಷಣ ಟ್ರಸ್ಟ್‌ನ ಡಾ.ರಾಮಲಿಂಗಯ್ಯ, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್‌ನ ಮುಖ್ಯ ಆಯುಕ್ತ ಜಿ.ಪಿ.ಭಕ್ತವತ್ಸಲ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಡಾ.ಜಾಹೀದಾ, ರಂಗ ಸಂಘಟಕ ಕುವೆಂಪು ಪ್ರಕಾಶ್ ಉಪಸ್ಥಿತರಿರುವರು ಎಂದು ನುಡಿದರು.

ಅಂದು ಸಂಜೆ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರ ಉರಿಯ ಉಯ್ಯಾಲೆ ನಾಟಕ ಪ್ರದರ್ಶನಗೊಳ್ಳಲಿದೆ. ಮೈಸೂರಿನ ಶಶಿಥಿಯೇಟರ್ ಪ್ರಸ್ತುತಪಡಿಸುವ ನಾಟಕವನ್ನು ಬಿ.ಎನ್.ಶಶಶಿಕಲಾ ನಿರ್ದೇಶಿದ್ದಾರೆ.

ಜ.೧೧ರಂದು ಮಧ್ಯಾಹ್ನ ೩ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಪೊಲೀಸ್ ಮಹಾನಿರೀಕ್ಷಕ ಬಿ.ಆರ್.ರವಿಕಾಂತೇಗೌಡ ಸಮಾರೋಪ ನುಡಿಗಳನ್ನಾಡುವರು. ಅಧ್ಯಕ್ಷತೆಯನ್ನು ವಿಧಾನಪರಿಷತ್ತಿನ ಶಾಸಕ ದಿನೇಶ್ ಗೂಳಿಗೌಡ ವಹಿಸುವರು. ಮುಖ್ಯ ಅತಿಥಿಗಳಾಗಿ ಕನ್ನ್ಖಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ.ಧರಣಿದೇವಿ ಮಾಲಗಿತ್ತಿ ಪಾಲ್ಗೊಳ್ಳುವರು. ಕಾಳೇನಹಳ್ಳಿಯ ಹಿರಿಯ ಕಲಾವಿದ ಟಿ.ಕೆಂಚೇಗೌಡ ಅವರಿಗೆ ಗೌರವ ಸಮರ್ಪಿಸಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ.ನಂದೀಶ್, ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಉಪಸ್ಥಿತರಿರುವರು. ಸಂಜೆ ೪ ಗಂಟೆಗೆಡ ಮಾಂಡವ್ಯ ಕಲಾಟ್ರಸ್ಟ್ ಪ್ರಸ್ತುತಪಡಿಸುವ ಗದಾಯುದ್ಧ ನಾಟಕ ಪ್ರದರ್ಶನಗೊಳ್ಳಲಿದೆ. ಕಾರಸವಾಡಿ ಸುರೇಶ್ ನಿರ್ದೇಶನದಲ್ಲಿ ನಾಟಕ ಮೂಡಿಬರಲಿದೆ ಎಂದರು.

ನಾಟಕ ಅಕಾಡೆಮಿ ಸದಸ್ಯ ಎ.ಎನ್.ಚಂದ್ರಶೇಖರ್, ಕರ್ನಾಟಕ ಸಂಘದ ಕಾರ್ಯದರ್ಶಿ ಸೋಮಶೇಖರ್ ಇದ್ದರು.