ಗಂಗೊಳ್ಳಿಯ ಸಮುದ್ರದಲ್ಲಿ ಬೋಟ್‌ಗೆ ಮರದ ದಿಮ್ಮಿ ಡಿಕ್ಕಿ: ಇಬ್ಬರು ಮೀನುಗಾರರ ರಕ್ಷಣೆ

| Published : Jan 09 2025, 12:48 AM IST / Updated: Jan 09 2025, 11:58 AM IST

ಸಾರಾಂಶ

ಗಂಗೊಳ್ಳಿಯ ಸಮುದ್ರದಲ್ಲಿ ಮರದ ದಿಮ್ಮಿ ಡಿಕ್ಕಿ ಹೊಡೆದ ಪರಿಣಾಮ ಮಲ್ಪೆಯ ಬೋಟೊಂದಕ್ಕೆ ಅಪಾರ ಹಾನಿಯಾಗಿದೆ. ಲಕ್ಷಾಂತರ ರು. ನಷ್ಟ ಉಂಟಾಗಿದೆ.

 ಕುಂದಾಪುರ : ಇಲ್ಲಿನ ಗಂಗೊಳ್ಳಿಯ ಸಮುದ್ರದಲ್ಲಿ ಮರದ ದಿಮ್ಮಿ ಡಿಕ್ಕಿ ಹೊಡೆದ ಪರಿಣಾಮ ಮಲ್ಪೆಯ ಬೋಟೊಂದಕ್ಕೆ ಅಪಾರ ಹಾನಿಯಾಗಿದ್ದು, ಲಕ್ಷಾಂತರ ರು. ನಷ್ಟ ಉಂಟಾಗಿದೆ. 

ಈ ವೇಳೆ ಬೋಟಿನಲ್ಲಿದ್ದ ಇಬ್ಬರು ಮೀನುಗಾರರನ್ನು ರಕ್ಷಿಸಲಾಗಿದೆ.ಮಲ್ಪೆ ಕಾನಂಗಿಯ ಸುಜಾತ ಎಂಬವರ ಪರ್ಸಿನ್ ಬೋಟನ್ನು ತಾಂಡೇಲರಾದ ರವಿ ಸಾಲ್ಯಾನ್ ಹಾಗೂ ಹರೀಶ್ ಮಲ್ಪೆ ಬಂದರಿನಿಂದ ಗಂಗೊಳ್ಳಿ ಬಂದರಿಗೆ ಚಲಾಯಿಸಿಕೊಂಡು ಹೋಗಿದ್ದು, ಗಂಗೊಳ್ಳಿ ಅಳಿವೆಯಿಂದ ಸುಮಾರು 2 ನಾಟಿಕಲ್ ಮೈಲ್ ಹಿಂದೆ ಸಂಜೆ 7.30ರ ಸುಮಾರಿಗೆ ಮರದ ದಿಮ್ಮಿ ಬೋಟಿಗೆ ಡಿಕ್ಕಿ ಹೊಡೆಯಿತು. 

ಪರಿಣಾಮ ಬೋಟಿನ ಮುಂಬದಿಯ ತಳಭಾಗಕ್ಕೆ ಹಾನಿಯಾಗಿ, ನೀರು ಒಳಗೆ ಬರಲು ಪ್ರಾರಂಭವಾಯಿತು. ನಂತರ ನೀರಿನ ಒಳಹರಿವು ಜಾಸ್ತಿ ಯಾಗಿ ಬೋಟ್ ಮುಳುಗುವ ಹಂತಕ್ಕೆ ಬಂತು. ಕೂಡಲೇ ತಾಂಡೇಲರು ಗಂಗೊಳ್ಳಿಯ ಪುಂಡಲೀಕ ಅವರನ್ನು ಸಂಪರ್ಕಿಸಿದ್ದು, ಅವರು ಜಲರಾಣಿ ಎಂಬ ಬೋಟಿನಲ್ಲಿ ಸಹಾಯಕ್ಕೆ ಬಂದರು. ಅವರು ಹಾನಿಯಾದ ಬೋಟಿನಲ್ಲಿದ್ದ ರವಿ ಸಾಲ್ಯಾನ್ ಮತ್ತು ಹರೀಶ್ ಅವರನ್ನು ರಕ್ಷಿಸಿದ್ದಾರೆ. ಹಾನಿಯಾದ ಬೋಟನ್ನು ಜಲರಾಣಿ ಬೋಟಿಗೆ ಕಟ್ಟಿ ಗಂಗೊಳ್ಳಿ ಕಚೇರಿವರೆಗೆ ಎಳೆದು ತರಲಾಯಿತು. ಬೋಟ್ ಸಂಪೂರ್ಣ ಹಾನಿಗೊಂಡಿದ್ದು, ಸುಮಾರು 65 ಲಕ್ಷ ರು. ನಷ್ಟ ಉಂಟಾಗಿದೆ.