ಸಾರಾಂಶ
ತುಮಕೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯುಜೆ) 39ನೇ ರಾಜ್ಯ ಸಮ್ಮೇಳನವನ್ನು ಸಂಭ್ರಮ, ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಮಿತಿಗಳನ್ನು ರಚಿಸಿಕೊಂಡು ಸಮಾರೋಪಾದಿಯಲ್ಲಿ ಸಿದ್ಧತೆ ನಡೆಸುವಂತೆ ಕೆಯುಡಬ್ಲ್ಯುಜೆ ರಾಜ್ಯಾಧ್ಯಕ್ಷ ಶಿವಾನಂದ್ ತಗಡೂರು ಸೂಚಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಸಮ್ಮೇಳನದ ಪೂರ್ವಸಿದ್ಧತಾ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.ತುಮಕೂರು ಜಿಲ್ಲೆ ದಾಸೋಹ, ಶಿಕ್ಷಣ, ಸಾಹಿತ್ಯ, ಕಲೆಗೆ ಹೆಸರಾದ ಜಿಲ್ಲೆ. ನಾಡಿನ ಅನೇಕ ಹೆಸರಾಂತ ಪತ್ರಕರ್ತರು ಜಿಲ್ಲೆಯವರಾಗಿರುವುದು ಹೆಮ್ಮೆ ಪಡುವ ಸಂಗತಿ. ತುಮಕೂರಿನಲ್ಲಿ ನಡೆದ ಎರಡು ರಾಷ್ಟ್ರೀಯ ಸಮ್ಮೇಳನಗಳು ಅತ್ಯಂತ ಯಶಸ್ವಿಯಾಗಿ ನೆರವೇರಿವೆ. ರಾಜ್ಯ ಸಮ್ಮೇಳನ ಮಾತ್ರ ಈವರೆಗೆ ಆಗಿಲ್ಲ ಎಂಬ ಮಾತನ್ನು ಜಿಲ್ಲಾಧ್ಯಕ್ಷರು ರಾಜ್ಯಮಟ್ಟದ ಸಭೆಗಳಲ್ಲಿ ಪದೇ ಪದೇ ಪ್ರಸ್ತಾಪಿಸುತ್ತಿದ್ದರು. ಜಿಲ್ಲೆಯವರ ಕೋರಿಕೆಯಂತೆ ೩೯ನೇ ಸಮ್ಮೇಳನದ ಆತಿಥ್ಯ ವಹಿಸುವ ಅವಕಾಶವನ್ನು ತುಮಕೂರು ಜಿಲ್ಲೆಗೆ ಕಲ್ಪಿಸಲಾಗಿದೆ. ಡಿಸೆಂಬರ್ ಒಳಗೆ ಇಲ್ಲವೇ ಜನವರಿಯೊಳಗೆ ಎರಡು ದಿನ ಸಮ್ಮೇಳನ ನಡೆಸಲು ಅಗತ್ಯ ಸಿದ್ಧತೆಗೆ ಇಂದಿನಿಂದಲೇ ಚಾಲನೆ ಕೊಟ್ಟು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಇಬ್ಬರು ಪ್ರಭಾವಿ ಸಚಿವರು, ಕೇಂದ್ರ ಸಚಿವರು, ಶಾಸಕರುಗಳು ಇದ್ದು, ಎಲ್ಲಾ ಜನಪ್ರತಿನಿಧಿಗಳು, ಜಿಲ್ಲಾಡಳಿತ, ಸಂಘ- ಸಂಸ್ಥೆಗಳವರು, ಮಠಾಧೀಶರು, ಹೀಗೆ ಎಲ್ಲರ ಸಹಕಾರ ಪಡೆದು ಕಾರ್ಯನಿರತ ಕ್ರಿಯಾಶೀಲ ಪತ್ರಕರ್ತರನ್ನೊಳಗೊಂಡಂತೆ ಸ್ವಾಗತ ಸಮಿತಿ, ಆಹಾರ, ಸಾರಿಗೆ, ವಸತಿ. ಅತಿಥಿ ಸತ್ಕಾರ ಹೀಗೆ ಅಗತ್ಯವಾದ ಉಪಸಮಿತಿಗಳನ್ನು ರಚಿಸಿ ಅವರಿಗೆ ಜವಾಬ್ದಾರಿ ವಹಿಸಬೇಕು ಎಂದು ಹೇಳಿದರು.ಸಮ್ಮೇಳನ ಸ್ಮರಣ ಸಂಚಿಕೆ ಹಾಗೂ ಹಿರಿಯ ಪತ್ರಕರ್ತರು, ಸಾಧಕರನ್ನು ಪರಿಚಯಿಸುವ ಸಂಚಿಕೆಯನ್ನು ಹೊರತರಬೇಕಿದೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಇರುವುದು, ಬರುವುದು ಸಹಜ. ಜಿಲ್ಲೆಗೆ ಕೀರ್ತಿ ಬರುವಂತೆ ಸಮ್ಮೇಳನ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು. ಸಂಘದವರು ಸಹ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ವ್ಯವಸ್ಥಿತವಾಗಿ ಆಯೋಜನೆ ಮಾಡಬೇಕು ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಕೇಶ್ ಮಾತನಾಡಿ, ದಾವಣಗೆರೆಯಲ್ಲಿ ಕಳೆದ ವರ್ಷ ಜರುಗಿದ ಸಮ್ಮೇಳನ ಅಲ್ಲಿನ ಜನಪ್ರತಿನಿಧಿಗಳು, ಪತ್ರಕರ್ತರ ಸಂಘದ ನೇತೃತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು. ಈ ದಾಖಲೆ ಮುರಿಯುವಂತೆ ತುಮಕೂರು ಸಮ್ಮೇಳನ ಜರುಗಬೇಕು. ಪ್ರತಿನಿಧಿಶುಲ್ಕ ನಿಗದಿಮಾಡಿ, ವಸತಿ ಆಹಾರ, ಸಾರಿಗೆ ವ್ಯವಸ್ಥೆಯಲ್ಲಿ ಕುಂದುಂಟಾಗದಂತೆ ನೋಡಿಕೊಂಡರೆ ಸಮ್ಮೇಳನ ಯಶಸ್ವಿಯಾದಂತೆ ಎಂದು ಹೇಳಿದರು.ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮ್ಮೇಳನ ಕುರಿತಾಗಿ ಮೊದಲ ಚರ್ಚೆಯನ್ನು ಕಾರ್ಯಕಾರಿ ಮಂಡಳಿಯಲ್ಲಿ ಇಂದು ಮಾಡಲಾಗಿದೆ. ಮುಂದಿನ ಸಭೆಯನ್ನು ಕಾರ್ಯಕಾರಿ ಮಂಡಳಿ ಜೊತೆಗೆ ಜಿಲ್ಲೆಯ ಸಂಪಾದಕರು, ಪತ್ರಕರ್ತರು ಜಿಲ್ಲಾಡಳಿತವನ್ನು ಭಾಗಿಯಾಗಿಸಿಕೊಂಡು ನಡೆಸಿ ಸಮ್ಮೇಳನದ ರೂಪುರೇಷೆ ತಯಾರಿಸುವ ಜೊತೆಗೆ ವಿವಿಧ ಸಮಿತಿಗಳಿಗೆ ಅರ್ಹ ಕ್ರಿಯಾಶೀಲ ಪತ್ರಕರ್ತರನ್ನು ನಿಯೋಜಿಸಲಾಗುವುದು ಎಂದರು.
ತುಮಕೂರು ಸಂಘ ಮೊದಲಿನಿಂದಲೂ ರಾಷ್ಟ್ರೀಯ ಸಮ್ಮೇಳನವಿರಲಿ, ಕಾರ್ಯಾಗಾರಗಳಿರಲಿ ಯಾವುದೇ ಕಾರ್ಯಕ್ರಮ ಮಾಡಿದರೂ ವ್ಯವಸ್ಥಿತವಾಗಿ ಮಾಡುತ್ತಾ ಬಂದಿದೆ. ರಾಜ್ಯ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿಕೊಡುತ್ತೇವೆ ಎಂದು ಭರವಸೆ ನೀಡಿದರು.ರಾಜ್ಯಾಧ್ಯಕ್ಷರು, ಪ್ರಧಾನಕಾರ್ಯದರ್ಶಿ ನೀಡಿದ ಸಲಹೆಗಳು ಉತ್ತಮವಾಗಿದ್ದು, ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅವರಾದಿಯಾಗಿ ಸಚಿವರಾದ ಕೆ.ಎನ್.ರಾಜಣ್ಣ, ವಿ.ಸೋಮಣ್ಣ ಸೇರಿ ಜನಪ್ರತಿನಿಧಿಗಳು, ದಾನಿಗಳ ಸಹಕಾರ ಸಮ್ಮೇಳನಕ್ಕೆ ಸಿಗಲಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಮಂಡಳಿ ಸದಸ್ಯರಾದ ಟಿ.ಎನ್.ಮಧುಕರ್, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಡಿ.ಎಂ.ಸತೀಶ್ ಅವರು ಮಾತನಾಡಿದರು.ರಾಜ್ಯ ಸಮಿತಿ ಸದಸ್ಯ ಸಿದ್ಧಲಿಂಗಸ್ವಾಮಿ, ಉಪಾಧ್ಯಕ್ಷರಾದ ಎಲ್.ಚಿಕ್ಕೀರಪ್ಪ, ಶ್ಯಾ.ನ.ಪ್ರಸನ್ನಮೂರ್ತಿ, ನಿರ್ದೇಶಕರುಗಳಾದ ಕುಚ್ಚಂಗಿ ಪ್ರಸನ್ನ, ಎಚ್.ಎಸ್.ಪರಮೇಶ್, ಎಸ್.ಹರೀಶ್ ಆಚಾರ್ಯ, ಟಿ.ಎಸ್.ಕೃಷ್ಣಮೂರ್ತಿ, ಜಯನುಡಿ ಜಯಣ್ಣ, ಸುರೇಶ್‌ವತ್ಸ, ಮಲ್ಲಿಕಾರ್ಜುನಸ್ವಾಮಿ, ಪ್ರಸನ್ನ ದೊಡ್ಡಗುಣಿ ಸಿರಾ ಶಂಕರ್, ಕಾಗ್ಗೆರೆ ಸುರೇಶ್, ರೇಣುಕಾಪ್ರಸಾದ್, ಎಂ.ಬಿ.ನಂದೀಶ್, ಮಂಜುನಾಥ್ ಹಾಲ್ಕುರಿಕೆ, ಅದಲಗೆರೆ ನಾಗೇಂದ್ರ ಇತರರು ಪಾಲ್ಗೊಂಡು ಸಮ್ಮೇಳನಕ್ಕೆ ಪೂರಕ ಸಲಹೆ ಸೂಚನೆಗಳನ್ನು ನೀಡಿದರು.
ಜಿಲ್ಲಾ ಸಂಘದಿಂದ ಸನ್ಮಾನಸಭೆಯಲ್ಲಿ ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ರಾಷ್ಟ್ರೀಯ ಮಂಡಳಿ ಸದಸ್ಯ ಟಿ.ಎನ್.ಮಧುಕರ್, ರಾಜ್ಯ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ನೇಮಕಗೊಂಡ ಸಂಘದ ರಾಜ್ಯಾಧ್ಯಕ್ಷ ಶಿವಾನಂದ್ ತಗಡೂರು ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ ನೇಮಕಗೊಂಡಿರುವ ಪತ್ರಕರ್ತ ಉಗಮ ಶ್ರೀನಿವಾಸ್ ಅವರುಗಳನ್ನು ಕೆಯುಡಬ್ಲ್ಯುಜೆ ಜಿಲ್ಲಾ ಘಟಕದ ಪರವಾಗಿ ಸನ್ಮಾನಿಸಲಾಯಿತು.