ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ.ಎಸ್.ಪಾಟೀಲ(ಪಡೇಕನೂರ) ಶುಕ್ರವಾರ ಮಡಿಕೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆಸ್ಪತ್ರೆಯ ಕಾರ್ಯವೈಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರಲ್ಲದೇ ನಂತರ ಪಡೆಕನೂರ ಕೆರೆಗೆ ನೀರು ಬಿಡುವ ಕಾಲುವೆ ಕೂಡಿಸಲಾದ ಗೇಟ್‌ನ್ನು ಪರಿಶೀಲನೆ ನಡೆಸಿದರು.ಮಡಿಕೇಶ್ವರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಅವರು ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಸತೀಶ ತಿವಾರಿ ಅವರಿಂದ ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡ ಅವರು, ಸುತ್ತಲಿನ ಗ್ರಾಮಗಳಿಂದ ಮಡಿಕೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರ ಒಳ್ಳೆಯ ಸೇವೆ ನೀಡಬೇಕು. ಈ ನಿಟ್ಟಿನಲ್ಲಿ ವೈದ್ಯರು ಸಿಬ್ಬಂದಿ ಕಾರ್ಯನಿರ್ವಹಿಸಬೇಕು. ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಮೊದಲು ಆದ್ಯತೆ ನೀಡಿ. ರೋಗಿಗಳಿಗೆ ಒಳ್ಳೆಯ ಸೇವೆ ಒದಗಿಸುವ ಕಡೆಗೆ ಎಲ್ಲರೂ ಮುಂದಾಗುವಂತೆ ನೋಡಿಕೊಳ್ಳಿ. ಯಾವುದೇ ಮೂನ್ಸೂಚನೆ ನೀಡದೇ ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳಿಗೆ ವಿಜಿಟ್ ಮಾಡಲು ಡಿಎಚ್‌ಒ ಅವರಿಗೆ ಸೂಚಿಸಿದ್ದೇನೆ. ಏನೇ ಲೋಪ ಕಂಡುಬಂದರೂ ನಿರ್ಧಾಕ್ಷ್ಯೀಣ್ಯ ಕ್ರಮಕೈಗೊಳ್ಳಲು ಸೂಚಿಸಿದ್ದೇನೆ. ನಾನು ಕೂಡಾ ಯಾವ ಸಮಯದಲ್ಲಿ ಯಾವ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುತ್ತೇನೆ, ಗೊತ್ತಿಲ್ಲ ಅಷ್ಟೊರಳಗೆ ಎಲ್ಲ ಆರೋಗ್ಯ ಕೇಂದ್ರಗಳು ಸುಧಾರಿಸುವಂತಹ ಕೆಲಸ ಮಾಡಲು ಅಧಿಕಾರಿ ಡಾ.ಸತೀಶ ತಿವಾರಿ ಅವರಿಗೆ ಸೂಚಿಸಿದರು.ನಂತರ ಪಡೇಕನೂರ ಗ್ರಾಮದ ಕೆರೆಗೆ ಕಾಲುವೆಯಿಂದ ನೀರು ಸಂಪರ್ಕ ಕಲ್ಪಿಸುವ ಕಾಲುವೆಗೆ ಅಳವಡಿಸಲಾದ ಗೇಟ್ ಕಾಮಗಾರಿಯನ್ನು ವೀಕ್ಷಣೆ ಮಾಡಿದ ಲೋಕಾಯುಕ್ತ ನ್ಯಾಯಮೂರ್ತಿ ಪಾಟೀಲರು ಕೆಬಿಜೆಎನ್‌ಎಲ್ ಮುಖ್ಯ ಇಂಜನಿಯರ್ ಶ್ರೀನಿವಾಸ ಅವರಿಂದ ಮಾಹಿತಿ ಪಡೆದರಲ್ಲದೇ ಪಡೇಕನೂರಿಂದ ಡವಳಗಿ ಒಳಗೊಂಡು ಕೆಲವು ಗ್ರಾಮಗಳಿಗೆ ರಸ್ತೆ ನಿರ್ಮಿಸುವ ಕುರಿತು ಸೂಚಿಸಿದರಲ್ಲದೇ ನಂತರ ಪಡೇಕನೂರ ಗ್ರಾಮದ ಕಲುಷಿತ ನೀರು ಕೆರೆಗೆ ಸೆಕರಣೆಗೊಳ್ಳದ ಹಾಗೆ ಪಡೇಕನೂರ ಗ್ರಾಮದ ಚರಂಡಿ ನೀರು ಕೆರೆಗೆ ಹೊಗದಂತೆ ತಡೆಯಲು ಬೂದು ನೀರು ನಿರ್ವಹಣಾ ಘಟಕದ ವಿಸ್ತೃತ ಯೋಜನಾ ವರದಿಯ ಮಾಹಿತಿ ಪಡೆದು ಬೂದು ನೀರು ನೇರವಾಗಿ ಕೆರೆಗ ಸೇರದಂತೆ ಕಾಮಗಾರಿ ಕೈಗೊಳ್ಳಲು ಸೂಚಿಸಿದರು.ಡ್ರೇನ್ ನಿರ್ಮಿಸಿ ಕಲುಷಿತವೆಲ್ಲವೂ ಇಲ್ಲಿಯೇ ಉಳಿಯಬೇಕು. ನೀರು ಮಾತ್ರ ಹೋಗಬೇಕು ಮತ್ತು ಗ್ರಾಮದಲ್ಲಿ ನೀರಿನ ತೊಟ್ಟೆ ನಿರ್ಮಿಸಿ ದನಕರುಗಳಿಗೆ ಅನುಕೂಲವಾಗುವಂತೆ ಮಾಡಿ. ಧೋಬಿ ಘಾಟ ನಿರ್ಮಿಸಿ ಬಟ್ಟಿ ಬರೆ ತೊಳೆಯಲು ಅನುಕೂಲ ಮಾಡಿಕೊಡಿ. ಗ್ರಾಮದ ಸ್ವಚ್ಛತೆ ಮತ್ತು ನೈರ್ಮಲ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ. ವೈಯಕ್ತಿಕ ಮತ್ತು ಸಮೂದಯ ಶೌಚಾಲಯ ಬಳಸಲು ಜನರಿಗೆ ತಿಳಿ ಹೇಳಿ ಬಯಲು ಮಲವಿಸರ್ಜನೆ ಮಾಡುವುದನ್ನು ತಡಯಬೇಕು ಎಂದು ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ವಿಜಯಕುಮಾರ ಅಜೂರ ಅವರಿಗೆ ತಾಪಂ ಇಒ ವೆಂಕಟೇಶ ವಂದಾಲ ಅವರಿಗೆ ಮತ್ತು ಪಿಡಿಒ ಸಾವಿತ್ರಿ ಬಿರಾದಾರ ಅವರಿಗೆ ಸೂಚಿಸಿದರು.
ಸಣ್ಣ ನೀರಾವರಿ ಇಲಾಖಾ ಅಧಿಕಾರಿಗಳಿಗೆ ಕೆರೆಯ ನಿರ್ವಹಣೆ ಮತ್ತು ನೀರು ಸರಬರಾಜು ಮಾಡಲು ಆದ್ಯತೆ ಮೇರೆಗೆ ಕೆಲಸ ನಿರ್ವಹಿಸಲು ಸೂಚಿಸಿದರು. ಪಡೇಕನೂರ ಗ್ರಾಮದಲ್ಲಿ ಪಿ.ಆರ್.ಇ.ಡಿ ಇಲಾಖೆಯಡಿ ನಿರ್ಮಾಣವಾದ ಅಂಗನವಾಡಿ ಕಟ್ಟಡವನ್ನು ವೀಕ್ಷಿಸಿ ಪರಿಶೀಲಸಿ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೇ ಚಿಕ್ಕ ಮಕ್ಕಳಿಗೆ ಚಿತ್ರಗಳ ಮೂಲಕವೇ ಶಿಕ್ಷಣದ ಹೆಜ್ಜೆ ಪ್ರಾರಂಭಿಸಲು ಮುಂದಾಗಿರುವ ಕುರಿತು ಶ್ಲಾಘಿಸಿದರು. ಈ ಸಂದರ್ಭದಲ್ಲಿ ವಿಜಯಪುರ ಲೋಕಾಯುಕ್ತ ಅಧಿಕ್ಷಕ ಟಿ.ಮಲ್ಲೇಶ್, ಡಿವಾಯ್‌ಎಸ್‌ಪಿ ಸುರೇಶ ರೆಡ್ಡಿ, ಕೆಬಿಜೆಎನ್‌ಎಲ್ ಸಹಾಯಕ ಇಂಜನಿಯರ್ ವಿಶ್ವನಾಥ ಬಿರಾದಾರ, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ವಿಜಯಕುಮಾರ ಅಜೂರ, ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ಸಿ.ಬಿ.ದೇವರಮನಿ, ಪಿ.ಆರ್.ಡಿ.ಎ ಇಲಾಖೆಯ ಡಬ್ಲ್ಯೂ.ಇ. ನಬಿಲಾಲ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ ವಂದಾಲ, ತಾ.ಪಂ ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಬಿ.ಎಂ.ಸಾಗರ, ಪಿಡಿಒ ಸಾವಿತ್ರಿ ಬಿರಾದಾರ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.ನನ್ನೂರಿನ ಜನ ಸ್ವಚ್ಛತೆಗೆ ಆದ್ಯತೆ ನೀಡಿ:
ನನ್ನ ಹುಟ್ಟೂರಿನ ಪಡೇಕನೂರ ಗ್ರಾಮದ ಜನರು ಸ್ವಚ್ಛತೆ ಆದ್ಯತೆ ನೀಡಲು ಮುಂದಾಗಬೇಕು. ಕೆರೆಯ ಕಡೆಗೆ ಹರಿದು ಹೋಗುವ ನೀರನ್ನು ಕಲುಷಿತಗೊಳಿಸುವಂತಹ ಕಾರ್ಯ ಮಾಡಬಾರದು ಎಂದು ಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ.ಎಸ್.ಪಾಟೀಲ(ಪಡೇಕನೂರ) ಹೇಳಿದರು.ಕಲುಷಿತ ನೀರು ಕೆರೆ ಮತ್ತು ಬಾವಿಯಲ್ಲಿ ಸೇರಿದರೆ ಡೆಂಘೀ ಇನ್ನಿತರ ರೋಗಗಳು ಬರುತ್ತವೆ. ಆ ಸಮಯದಲ್ಲಿ ನರಳಾಡುವುದು ಬೇಡ. ಸ್ವಚ್ಛತೆಗೆ ಮಹತ್ವ ನೀಡಿ ಕೆರೆಯಲ್ಲಿ ಈಜಾಡಲು ಹೋಗಲು ಮಕ್ಕಳು ಹೋಗದಂತೆ ತಿಳಿವಳಿಕೆ ನೀಡಿ ಮನೆ ಮನೆಗೆ ಶೌಚಾಲಯಗಳಿವೆ. ಆದರೂ ಹೊರಗಡೆ ಬಹಿರ್ದೆಸೆಗೆ ಹೋಗುವುದ ಅಭ್ಯಾಸವಾಗಿದೆ. ಅದನ್ನು ತಪ್ಪಿಸಿ ಎಲ್ಲರೂ ಶೌಚಾಲಯಗಳನ್ನು ಉಪಯೋಗಿಸಬೇಕು. ಇದರಿಂದ ಗ್ರಾಮದಲ್ಲಿ ಯಾರಿಗೂ ರೋಗ ರುಜುಗಳು ಬರುವುದಿಲ್ಲ. ಅರ್ಧದಷ್ಟು ಜನರು ದುಡಿದ ಹಣದಲ್ಲಿ ಅರ್ಧದಷ್ಟು ಆಸ್ಪತ್ರೆಗೆ ಇಡುತ್ತಾರೆ. ಅದನ್ನು ತಪ್ಪಿಸಿ ಮೊದಲು ಮನೆಯ ಮುಂದೆ ಸ್ವಚ್ಛತೆ ಕಾಪಾಡಿ ನಂತರ ಊರನ್ನು ಸ್ವಚ್ಛವಾಗಿ ಇಡುವುದರ ಕಡೆಗೆ ಗಮನಕೊಡಿ. ಇದರಿಂದ ಸುಂದರ ಗ್ರಾಮವಾಗಲು ಸಾಧ್ಯವಾಗಲಿದೆ ಎಂದು ತಿಳಿಸಿದರು.