ಬಿಜೆಪಿ ನೀತಿಯ ವಿರುದ್ಧ ಕಾರ್ಮಿಕ ಹೋರಾಟ ತೀವ್ರವಾಗಬೇಕು: ಸುರೇಶ್ ಕಲ್ಲಾಗರ

| Published : May 02 2024, 12:16 AM IST

ಬಿಜೆಪಿ ನೀತಿಯ ವಿರುದ್ಧ ಕಾರ್ಮಿಕ ಹೋರಾಟ ತೀವ್ರವಾಗಬೇಕು: ಸುರೇಶ್ ಕಲ್ಲಾಗರ
Share this Article
  • FB
  • TW
  • Linkdin
  • Email

ಸಾರಾಂಶ

ಮೇ ದಿನಾಚರಣೆಯಂಗವಾಗಿ ಉಡುಪಿ ಹಳೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಅಜ್ಜರಕಾಡು ಹುತಾತ್ಮ ಚೌಕದ ವರೆಗೆ ಮೆರವಣಿಗೆ ಹಾಗೂ ಬಹಿರಂಗ ಸಭೆ ನಡೆಯಿತು. ಸಭೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಕೇಂದ್ರ ಸರ್ಕಾರವನ್ನು ಟೀಕಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ದೇಶದಲ್ಲಿ ಕಾರ್ಪೋರೇಟ್- ಕೋಮುವಾದಗಳ ಮೈತ್ರಿಯಿಂದ ಕಾರ್ಮಿಕರನ್ನು ಬಂಡವಾಳಗಾರರ ಗುಲಾಮರನ್ನಾಗಿ ಮಾಡಲಾಗುತ್ತಿದೆ. ಮಾತ್ರವಲ್ಲ ಜಾತಿ, ಮತ, ಧರ್ಮ ಆಧಾರದಲ್ಲಿ ಕಾರ್ಮಿಕರನ್ನು ಎತ್ತಿಕಟ್ಟಿ ಕೋಮುವಾದದ ಅಡಿಯಾಳಾಗಿ ಮಾಡಲಾಗುತ್ತಿದೆ. ಬಿಜೆಪಿಯ ಈ ಅಪಾಯಕಾರಿ ನೀತಿಯ ವಿರುದ್ಧ ರೈತರು, ಕಾರ್ಮಿಕರು, ಕೂಲಿಕಾರರು, ನೌಕರರು ಒಂದಾಗಿ ಹೋರಾಟವನ್ನು ತೀವ್ರಗೊಳಿಸಬೇಕು ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು.

ಅವರು ಮೇ ದಿನಾಚರಣೆಯಂಗವಾಗಿ ಉಡುಪಿ ಹಳೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಅಜ್ಜರಕಾಡು ಹುತಾತ್ಮ ಚೌಕದ ವರೆಗೆ ನಡೆದ ಮೆರವಣಿಗೆ, ನಂತರ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ಕೊರೋನಾದ ಸಂಕಷ್ಟದ ದಿನಗಳಲ್ಲಿ ಕೇಂದ್ರ ಸರ್ಕಾರದ ಮಂತ್ರಿಮಂಡಲದಲ್ಲಿ 44 ಕಾರ್ಮಿಕ ಕಾನೂನುಗಳನ್ನು ರದ್ದು ಮಾಡಿ 4 ಸಂಹಿತೆ ತಂದು ಸೌಲಭ್ಯಗಳನ್ನು ಕಸಿದುಕೊಳ್ಳಲಾಗಿದೆ. ಕನಿಷ್ಠ ವೇತನ 31000 ರು. ನೀಡುವಂತೆ ಕಾರ್ಮಿಕ ವರ್ಗ ಹೋರಾಟ ನಡೆಸುತ್ತಿದ್ದಾರೆ. ಆದರೆ ಮೋದಿಯವರು ತಳಮಟ್ಟದ ಕನಿಷ್ಠ ವೇತನ 178 ರು.ಗಳಿಗೆ ಕಾನೂನುಬದ್ಧಗೊಳಿಸಿರುವುದು ಕಾರ್ಮಿಕ ವರ್ಗದ ಬಗ್ಗೆ ಬಿಜೆಪಿ ಅನುಸರಿಸುತ್ತಿರುವ ಕಾರ್ಮಿಕ ವಿರೋಧಿ ಜನವಿರೋಧಿ ನೀತಿಗೆ ಸಾಕ್ಷಿಯಾಗಿದೆ ಎಂದರು.

ಪ್ರಗತಿಪರ ಚಿಂತಕ ಪ್ರೊ. ಫಣಿರಾಜ್, ಮೇ ದಿನಾಚರಣೆಗೆ ಸೌಹಾರ್ದ ಮಾತುಗಳನ್ನಾಡಿ, ಕಾರ್ಮಿಕರು ತಮ್ಮ ಹಕ್ಕುಗಳ ರಕ್ಷಣೆಗಾಗಿ ರಾಜಕೀಯ ಮಾಡಬೇಕಾಗಿದೆ. ದೇಶದ ಸಂಪತ್ತು ಸೃಷ್ಟಿ ಮಾಡುವವರಿಗೆ ದೇಶದ ಸಂಪತ್ತು ಸಿಗಬೇಕಾಗಿದೆ. ಅಂತಹ ಅರಿವು ಪಡೆದಾಗ ಕಾರ್ಮಿಕರು ಮೇ ದಿನದ ಮಹತ್ವ ಮೂಡಲು ಸಾಧ್ಯ ಎಂದು ಹೇಳಿದರು.

ಮೇ ದಿನಾಚರಣೆ ಸಭೆಯ ಅಧ್ಯಕ್ಷತೆಯನ್ನು ಸಿಐಟಿಯು ಮುಖಂಡರಾದ ಶೇಖರ ಬಂಗೇರ ವಹಿಸಿದ್ದರು. ಸಭೆಯಲ್ಲಿ ವಿಮಾ ನೌಕರರ ಸಂಘದ ಉಡುಪಿ ವಿಭಾಗ ಕಾರ್ಯದರ್ಶಿ ಪ್ರಭಾಕರ್ ಕುಂದರ್, ಎಐಬಿಇಎ ಉಡುಪಿ ಕಾರ್ಯದರ್ಶಿ ನಾಗೇಶ್ ನಾಯಕ್, ಎಐಟಿಯುಸಿ ಮುಖಂಡ ಶಿವನಂದ, ಇಂಟಕ್ ಜಿಲ್ಲಾ ಅಧ್ಯಕ್ಷ ಕಿರಣ್ ಹೆಗ್ಡೆ ಉಪಸ್ಥಿತರಿದ್ದರು.

ಸಿಐಟಿಯು ಉಡುಪಿ ವಲಯ ಸಂಚಾಲಕ ಕವಿರಾಜ್ ಎಸ್. ಕಾಂಚನ್ ಸ್ವಾಗತಿಸಿದರು. ಕಾರ್ಯಕ್ರಮ ನಿರೂಪಿಸಿದರು. ಕಟ್ಟಡ ಸಂಘದ ಜಿಲ್ಲಾ ಕಾರ್ಯದರ್ಶಿ ಶಶಿಧರ ಗೊಲ್ಲ ವಂದಿಸಿದರು.