ಸಾರಾಂಶ
ಸಾಲದ ಕಂತುಗಳನ್ನು ಸರಿಯಾಗಿ ಕಟ್ಟದೇ ಇದ್ದ ಕಾರಣದಿಂದ ಕೋಟಕ್ ಮಹಿಂದ್ರಾ ಫೈನಾನ್ಸ್ ಕಂಪನಿಯವರು ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಿದ್ದರು.
ಗುಡಿಬಂಡೆ: ತಾಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿ ಗಿರೀಶ್ (26) ಎಂಬ ಕೂಲಿ ಕಾರ್ಮಿಕ ಮೈಕ್ರೋ ಫೈನಾನ್ಸ್ ಹಾಗೂ ಕೈ ಸಾಲಭಾದೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ವ್ಯಕ್ತಿ ಸ್ಪಂದನ, ಚೈತನ್ಯ ಫೈನಾನ್ಸ್ ಸೇರಿದಂತೆ ಕೆಲವು ಕಡೆ ಸಾಲ ಮಾಡಿಕೊಂಡಿದ್ದರು. ಸಾಲಬಾದೆಯಿಂದ ಆತ ಫೆ.2 ರ ರಾತ್ರಿ ಸುಮಾರು 2 ಗಂಟೆ ಸಮಯದಲ್ಲಿ ನೇಣಿಗೆ ಶರಣಾಗಿದ್ದಾರೆ.
ಈ ಕುರಿತು ಮೃತನ ಪತ್ನಿ ದೂರು ನೀಡಿದ್ದು, ದೂರಿನಲ್ಲಿ ತಿಳಿಸಿರುವಂತೆ ತನ್ನ ಪತಿ ಕೂಲಿ ಕೆಲಸ ಮಾಡಿಕೊಂಡು ಕುಟುಂಬ ನಡೆಸುತ್ತಿದ್ದ. ಕಳೆದ ಒಂದೂವರೆ ವರ್ಷದ ಹಿಂದೆ ಚಿಂತಾಮಣಿಯ ಕೋಟಕ್ ಮಹಿಂದ್ರ ಫೈನಾನ್ಸ್ ನಲ್ಲಿ ಟ್ರ್ಯಾಕ್ಟರ್ ಖರೀದಿ ಮಾಡಿ, ಬಳಿಕ ನಾಲ್ಕು ಕಂತುಗಳನ್ನು ಸಹ ಕಟ್ಟಿದ್ದನು. ಬಳಿಕ ಸಾಲದ ಕಂತುಗಳನ್ನು ಸರಿಯಾಗಿ ಕಟ್ಟದೇ ಇದ್ದ ಕಾರಣದಿಂದ ಕೋಟಕ್ ಮಹಿಂದ್ರಾ ಫೈನಾನ್ಸ್ ಕಂಪನಿಯವರು ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಿದ್ದರು. ಬಳಿಕ ನಾಲ್ಕು ಲಕ್ಷ ಕೈಸಾಲ ಕೂಡ ಮಾಡಿದ್ದ. ನಂತರ ಬಾಗೇಪಲ್ಲಿಯ ಸ್ಪಂದನ ಫೈನಾನ್ಸ್ ನಲ್ಲಿ 60 ಸಾವಿರ ಹಾಗೂ ಚೈತನ್ಯ ಫೈನಾನ್ಸ್ ನಲ್ಲಿ 60 ಸಾವಿರ ಸಾಲ ಮಾಡಿದ್ದ. ಪೇರೆಸಂದ್ರದ ಎನ್.ಪಿ.ಎನ್ ಮೋಟಾರ್ಸ್ ನಲ್ಲಿ 7 ಸಾವಿರ ಡೌನ್ ಪೇಮೆಂಟ್ ಕಟ್ಟಿ ಉಳಿದ ಮೊತ್ತವನ್ನು ಸಾಲವಾಗಿ ಪಡೆದು ದ್ವಿಚಕ್ರ ವಾಹನ ಖರೀದಿ ಮಾಡಿದ್ದ. ಧರ್ಮಸ್ಥಳ ಸಂಘದಲ್ಲಿ 35 ಸಾವಿರ ಸಾಲ ಪಡೆದುಕೊಂಡಿದ್ದ. ಇನ್ನೂ ಆಗಾಗ ನನ್ನ ಗಂಡ ಕೈಸಾಲ ಮಾಡಿಕೊಂಡ ವಿಚಾರವನ್ನು ನನ್ನ ಬಳಿ ಹೇಳಿಕೊಂಡು ನೋವು ಪಡುತ್ತಿದ್ದರು. ಫೆ.2 ರ ರಾತ್ರಿ 2 ಗಂಟೆ ಸಮಯದಲ್ಲಿ ಮನೆಯ ಮೇಲ್ಛಾವಣಿಯ ಕಬ್ಬಿಣದ ಪೈಪಿಗೆ ಲುಂಗಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.