ಸಾರಾಂಶ
ಕೊಪ್ಪಳ:
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕಾರ್ಮಿಕ ವಿರೋಧಿ ಸಂಹಿತೆ ರದ್ದುಪಡಿಸುವಂತೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕೊಪ್ಪಳ ಹಾಗೂ ಸಂಯುಕ್ತ ಹೋರಾಟ-ಕರ್ನಾಟಕ ಜಿಲ್ಲಾ ಸಮಿತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ರಸ್ತೆ ತಡೆಗೆ ಮುಂದಾದಾಗ ಕಾರ್ಮಿಕ ಮುಖಂಡರನ್ನು ಬಂಧಿಸಿ ಬಿಡುಗಡೆ ಮಾಡಲಾಯಿತು.ನಗರದ ಕಾವ್ಯಾನಂದ (ಈಶ್ವರ) ಪಾರ್ಕ್‌ನಿಂದ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ನೂರಾರು ಸಂಖ್ಯೆಯ ಕಾರ್ಮಿಕರು ಮೆರವಣಿಗೆ ನಡೆಸಿದರು. ಅಶೋಕ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸುತ್ತಿದ್ದ ವೇಳೆ ಕಾರ್ಮಿಕ ಮುಖಂಡರನ್ನು ಬಂಧಿಸಿ ಜಿಲ್ಲಾ ಕ್ರೀಡಾಂಗಣಕ್ಕೆ ಕರೆದೊಯ್ದು ಬಿಡುಗಡೆ ಮಾಡಲಾಯಿತು.
ಬಳಿಕ ಪುನಃ ಸೇರಿದ ಕಾರ್ಮಿಕ ಮುಖಂಡರು ಸೇರಿದ್ದ ನೂರಾರು ಕಾರ್ಮಿಕರ ಸಮ್ಮುಖದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಕೇಂದ್ರೀಯ ಬಸ್ ನಿಲ್ದಾಣದ ವರೆಗೂ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಕಾರ್ಮಿಕ ಮುಖಂಡರು ಮಾತನಾಡಿ, ಸಂಪತ್ತನ್ನು ಸೃಷ್ಟಿಸುವ ಶ್ರಮಜೀವಿಗಳನ್ನು ಶಾಶ್ವತವಾಗಿ ಗುಲಾಮರನ್ನಾಗಿಸುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸಬೇಕು. ರಾಜ್ಯ ಸರ್ಕಾರ ಈ ಸಂಹಿತೆ ತಿರಸ್ಕರಿಸಬೇಕು. ಕನಿಷ್ಠ ವೇತನ ಅಂತಿಮಗೊಳಿಸಬೇಕೆಂದು ಒತ್ತಾಯಿಸಿದರು.
ಉದ್ಯೋಗದ ಹಕ್ಕನ್ನು ಮೂಲಭೂತ ಹಕ್ಕಾಗಿಸಬೇಕು. ಖಾಲಿಯಿರುವ ಹುದ್ದೆಗಳ ಭರ್ತಿ, ಉದ್ಯೋಗ ಸೃಷ್ಟಿ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವಾರ್ಷಿಕ 200 ದಿನ ಕೆಲಸ, ದಿನಕ್ಕೆ ₹ 600 ಕೂಲಿ ನೀಡಬೇಕು. ಎಲ್ಲರಿಗೂ ಉಚಿತ ಶಿಕ್ಷಣದ ಹಕ್ಕು, ಆರೋಗ್ಯದ ಹಕ್ಕು, ನೀರು ಮತ್ತು ನೈರ್ಮಲ್ಯದ ಹಕ್ಕು ಹಾಗೂ ವಸತಿ ಖಾತ್ರಿಪಡಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.ಹೋರಾಟದಲ್ಲಿ ಜೆಸಿಟಿಯು ಹಾಗೂ ಎಸ್‌ಕೆಎಂ ಜಿಲ್ಲಾ ಸಮಿತಿ ಮುಖಂಡ ಖಾಸಿಮ್ ಸರ್ದಾರ್. ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಬಸವರಾಜ್ ಶೀಲವಂತರ, ಜಿ. ನಾಗರಾಜ್, ಶರಣು ಗಡ್ಡಿ, ಎಸ್.ಎ. ಗಫಾರ್, ಕೆ.ಬಿ. ಗೋನಾಳ, ಗಾಳೆಪ್ಪ ಮುಂಗೋಲಿ, ಹನುಮೇಶ ಕಲ್ಮಂಗಿ, ಸುಂಕಪ್ಪ ಗದಗ, ರಾಜು ಮುನಿರಾಬಾದ್, ಡಿ.ಎಚ್. ಪೂಜಾರ, ಅಮರೇಶ ಡಾಣಿ, ಮಖಬೂಲ್ ರಾಯಚೂರು, ಅನ್ನಪೂರ್ಣ ಬೃಹನ್ಮಠ, ಶಿವಲೀಲಾ ಅಗಳಕೇರಾ, ಸಂಜಯ್ ದಾಸ್ ಕೌಜಗೇರಿ, ಬಸವರಾಜ ಕಂಠಿ, ಕರೀಮ್ ಪಾಶಾ ಗಚ್ಚಿನಮನಿ, ಮಲ್ಲಿಕಾರ್ಜುನ ಬೃಂಗಿ, ಕೊಟ್ರಮ್ಮ ಕೇಸಲಾಪುರ, ಮುದುಕಪ್ಪ ಎಂ. ಹೊಸಮನಿ, ಸೈಯ್ಯದ್ ಅಬ್ದುಲ್ ಖಾದರ್ ಪೀರಝಾದೆ, ಜಿ.ಪಿ. ವಿಜಯ ಭಾಸ್ಕರ್ ರೆಡ್ಡಿ, ಬಸವರಾಜ ಹಾಸ್ಟೆಲ್, ಅಂಜಮ್ಮ ಹಾಸ್ಟೆಲ್, ಮಲ್ಲಮ್ಮ ಬಿಸರಹಳ್ಳಿ, ಜಾಫರ್ ಕುರಿ, ಶಾಬುದ್ದೀನ್ ಜವಳಗೇರಾ, ಮಂಗಳೇಶ್ ರಾಥೋಡ್ ಸೇರಿದಂತೆ ಅನೇಕ ಮುಖಂಡರು ಬೃಹತ್ ಪ್ರತಿಭಟನೆ ನಡೆಸಿದರು.ಅಂಚೆ ಕಚೇರಿಯಲ್ಲಿಯೂ ಪ್ರತಿಭಟನೆ
ಕೇಂದ್ರ ಸರ್ಕಾರದ ನೀತಿ ಖಂಡಿಸಿ ಕಾರ್ಮಿಕ ಸಂಘಟನೆ ಕರೆ ನೀಡಿರುವ ಮುಷ್ಕರ ಬೆಂಬಲಿಸಿ ಅಂಚೆ ನೌಕರರು ಪ್ರತಿಭಟನೆ ನಡೆಸಿದರು. ಮುಷ್ಕರದಲ್ಲಿ ಪೋಸ್ಟ್‌ಮನ್, ಎಂಟಿಎಸ್ ಗ್ರೂಪ್ ಗ್ರಾಮೀಣ ಅಂಚೆ ನೌಕರರ ರಾಜ್ಯ ಉಪಾಧ್ಯಕ್ಷ ಬಸವರಾಜ ಗುರಿಕಾರ, ಕೊಪ್ಪಳ ಡಿವಿಜನ್ ಅಂಚೆ ಅಧ್ಯಕ್ಷ ಬುದ್ದಿವಂತಪ್ಪ, ಕಾರ್ಯದರ್ಶಿ ಬಸವರಾಜ ಸಾಲಿಮಠ, ಖಜಾಂಚಿ ನೀಲಕಂಠಪ್ಪ, ಮಹಾಂತೇಶಪ್ಪ ರಾಮಣ್ಣ ವಿದ್ಯಾಧರ ಸೊಪ್ಪಿಮಠ, ಮಲ್ಲಪ್ಪ ಪಾಟೀಲ್ ಸೇರಿದಂತೆ ಇತರರು ಇದ್ದರು.