ಕಾರ್ಮಿಕರ ಕನಿಷ್ಠ ವೇತನ ಜಾರಿ ಕುರಿತಂತೆ, ರಾಜ್ಯ ಸರ್ಕಾರ ೮೪ ಉದ್ಯಮಗಳಿಗೆ ಹೊರಡಿಸಿರುವ ಏಕರೂಪದ ಸಂಹಿತೆ ಸ್ವಾಗತಾರ್ಹ

ಹಗರಿಬೊಮ್ಮನಹಳ್ಳಿ: ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಕಾನೂನು ರಾಜ್ಯ ಸರ್ಕಾರ ಜಾರಿಗೊಳುತ್ತಿರುವುದನ್ನು ಖಂಡಿಸಿ ಹಾಗೂ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಗೊಳಿಸುವುದು ಸೇರಿದಂತೆ ಇತರೇ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಾಲೂಕಿನ ನಾನಾ ಕಾರ್ಮಿಕ ಸಂಘಟನೆಗಳು ಭಾನುವಾರ ಸಿಐಟಿಯು ನೇತೃತ್ವದಲ್ಲಿ ಶಾಸಕರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ಆರ್.ಎಸ್. ಬಸವರಾಜ್ ಮಾತನಾಡಿ, ದೇಶದ ಕಾರ್ಮಿಕರ ಪಾಲಿಗೆ ಮರಣ ಶಾಸನವಾಗಿರುವ ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳು ಕಾರ್ಮಿಕ ವರ್ಗವನ್ನು ಬಲಪಡಿಸುವ ಬದಲಾಗಿ ವೃತ್ತಿ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುತ್ತವೆ ಎಂದು ದೂರಿದರು.

ಕಾರ್ಮಿಕರ ಕನಿಷ್ಠ ವೇತನ ಜಾರಿ ಕುರಿತಂತೆ, ರಾಜ್ಯ ಸರ್ಕಾರ ೮೪ ಉದ್ಯಮಗಳಿಗೆ ಹೊರಡಿಸಿರುವ ಏಕರೂಪದ ಸಂಹಿತೆ ಸ್ವಾಗತಾರ್ಹವಾಗಿದೆ. ಆದರೆ ರಾಜ್ಯ ಸರ್ಕಾರ ಕಾರ್ಮಿಕ ಕಾನೂನು ಉಲ್ಲಂಘನೆ ಮಾಡಿ ಮತ್ತೊಂದು ಸಂಪುಟ ಸಮಿತಿ ರಚಿಸಿರುವುದು ಕಾರ್ಮಿಕ ದ್ರೋಹಿ ಕಾರ್ಯವಾಗಿದೆ. ಕೂಡಲೇ ಸಮಿತಿ ವಜಾಗೊಳಿಸಬೇಕು ಹಾಗೂ ಕನಿಷ್ಠ ವೇತನ ಕುರಿತು ಖಾತ್ರಿಪಡಿಸಬೇಕು ಎಂದು ಆಗ್ರಹಿಸಿದರು.

ಸಿಐಟಿಯು ತಾಲೂಕಾಧ್ಯಕ್ಷ ಎಸ್. ಜಗನ್ನಾಥ್ ಮಾತನಾಡಿ, ರಾಜ್ಯದ ೨ ಕೋಟಿ ಕಾರ್ಮಿಕರು ಕಳೆದ ನಾಲ್ಕು ವರ್ಷಗಳಿಂದ ಕನಿಷ್ಠ ವೇತನದಿಂದ ವಂಚಿತರಾಗಿದ್ದಾರೆ. ಕನಿಷ್ಠ ವೇತನ ಅಧಿಸೂಚನೆಯು ಬೀಡಿ, ಪ್ಲಾಂಟೇಶನ್ ಹಾಗೂ ಗಾರ್ಮೆಂಟ್ ಉದ್ಯಮದ ಲಕ್ಷಾಂತರ ಮಹಿಳೆಯರ ಪಾಲಿಗೆ ಸಹ್ಯವಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಕನಿಷ್ಠ ವೇತನ ಜಾರಿಗೊಳಿಸುವುದು ಸೇರಿದಂತೆ ಬೀಡಿ,ಪ್ಲಾಂಟೇಶನ್, ಗಾರ್ಮೆಂಟ್ಸ ಮತ್ತು ಹಮಾಲಿ ಕಾರ್ಮಿಕರನ್ನು ಕನಿಷ್ಠ ವೇತನ ಅಧಿಸೂಚನೆಯಲ್ಲಿ ಸೇರಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ನೀಡಿರುವ ಆಶ್ವಾಸನೆಯಂತೆ ಬಿಸಿಯೂಟದವರಿಗೆ ₹೭ ಸಾವಿರ, ಆಶಾ ಕಾರ್ಯಕರ್ತೆಯರಿಗೆ ₹೧೦ ಸಾವಿರ ಮತ್ತು ಅಂಗನವಾಡಿ ನೌಕರರಿಗೆ ₹೧೫ ಸಾವಿರ ವೇತನ ನಿಗದಿಪಡಿಸಬೇಕು. ವಿದ್ಯುತ್ ಹಾಗೂ ಸಾರಿಗೆಯಂತಹ ಸಾರ್ವಜನಿಕ ಸಂಸ್ಥೆಗಳು ಮತ್ತು ಕೈಗಾರಿಕೆಗಳ ಖಾಸಗೀಕರಣ ಮಾಡಬಾರದು ಎಂದು ಒತ್ತಾಯಿಸಿದರು.

ಸಿಐಟಿಯು ನೇತೃತ್ವದಲ್ಲಿ ತಾಲೂಕಿನ ನಾನಾ ಕಾರ್ಮಿಕ ಸಂಘಟನೆಗಳಾದ ಬಿಸಿಯೂಟ ನೌಕರರು, ಕಟ್ಟಡ ಕಾರ್ಮಿಕರು, ಪಂಚಾಯಿತಿ ಸ್ವಚ್ಛತಾ ನೌಕರರು ಹಾಗೂ ಮತ್ತಿತರೇ ಸಂಘಟನೆಗಳ ಪದಾಧಿಕಾರಿಗಳು ಮತ್ತು ನೂರಾರು ಕಾರ್ಮಿಕರು ಇಲ್ಲಿನ ಈಶ್ವರ ದೇವಸ್ಥಾನದಿಂದ ಶಾಸಕರ ನಿವಾಸದವರೆಗೂ ಪ್ರತಿಭಟನಾ ರ‍್ಯಾಲಿ ನಡೆಸಿದರು.

ಶಾಸಕರ ಅನುಪಸ್ಥಿತಿಯಲ್ಲಿ ಅವರ ಪತ್ನಿ ವಾಣಿ ನೇಮಿರಾಜ್‌ನಾಯ್ಕಗೆ ಮನವಿ ಸಲ್ಲಿಸಿದರು. ಈ ವೇಳೆ ಅವರ ಆಪ್ತ ಸಹಾಯಕ ಬ್ಯಾಟಿ ನಾಗರಾಜ್ ಉಪಸ್ಥಿತರಿದ್ದರು.

ಕೆ.ಗೌರಮ್ಮ, ಮಲ್ಲಮ್ಮ, ಸುನಂದಾ, ಅನ್ನಾಳಮ್ಮ, ಕರಿಬಸಮ್ಮ, ಬಸಮ್ಮ, ಶೋಭಾ, ಕೆ.ಲಕ್ಷ್ಮಣ, ಅಶೋಕ, ಚರಂತೇಶ್, ನಾಗರಾಜ್, ಕಲ್ಲಪ್ಪ, ಸುರೇಶ್ ಹಾಗೂ ಮಾರುತಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.