ಘಟನೆಗೆ ಸಂಬಂಧಿಸಿದಂತೆ ಟ್ರ್ಯಾಕ್ಟರ್ ಚಾಲಕ ಅದೇ ಗ್ರಾಮದ ಅಜಯ್ ಎಂಬಾತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚೇಳೂರು: ಚಾಲಕನ ಅತಿವೇಗ ಹಾಗೂ ನಿರ್ಲಕ್ಷ್ಯದಿಂದಾಗಿ ಚಲಿಸುತ್ತಿದ್ದ ಟ್ರ್ಯಾಕ್ಟರ್‌ನಿಂದ ಕೆಳಗೆ ಬಿದ್ದು ಕೂಲಿ ಕಾರ್ಮಿಕರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಬೆಳಿಗ್ಗೆ ಇಲ್ಲಿನ ಪೊಲೀಸ್ ವಸತಿಗೃಹದ ಮುಂಭಾಗದ ರಸ್ತೆಯಲ್ಲಿ ಸಂಭವಿಸಿದೆ.

ಚೇಳೂರು ಗ್ರಾಮದ ನಿವಾಸಿ ಮಲ್ಲಿಕಾರ್ಜುನ (36) ಮೃತಪಟ್ಟ ದುರ್ದೈವಿ. ಘಟನೆಗೆ ಸಂಬಂಧಿಸಿದಂತೆ ಟ್ರ್ಯಾಕ್ಟರ್ ಚಾಲಕ ಅದೇ ಗ್ರಾಮದ ಅಜಯ್ ಎಂಬಾತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ:

ಬುಧವಾರ ಬೆಳಿಗ್ಗೆ ಸುಮಾರು 7 ಗಂಟೆ ಸುಮಾರಿಗೆ ಅಜಯ್ ಬಿನ್ ಉಪ್ಪೋಳ ವೆಂಕಟೇಶ್ ಎಂಬುವವರು ಮಲ್ಲಿಕಾರ್ಜುನ ಅವರನ್ನು ಕೆಲಸಕ್ಕೆಂದು ಮನೆಯಿಂದ ಕರೆದೊಯ್ದಿದ್ದರು.

ಗ್ರಾಮದ ನಾಗರಾಜ ಎಂಬುವವರಿಗೆ ಸೇರಿದ ಟ್ರ್ಯಾಕ್ಟರ್‌ನಲ್ಲಿ ತೆರಳುತ್ತಿದ್ದಾಗ, ಬೆಳಿಗ್ಗೆ 9 ಗಂಟೆ ವೇಳೆಗೆ ಪೊಲೀಸ್ ವಸತಿಗೃಹದ ಬಳಿಯ ಮುಖ್ಯರಸ್ತೆಯಲ್ಲಿ ಚಾಲಕ ಅಜಯ್ ಟ್ರ್ಯಾಕ್ಟರ್ ಅನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ್ದಾನೆ ಎನ್ನಲಾಗಿದೆ.

ಈ ವೇಳೆ ಟ್ರ್ಯಾಕ್ಟರ್ ಮೇಲಿದ್ದ ಮಲ್ಲಿಕಾರ್ಜುನ ಅವರು ಸಮತೋಲನ ತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಸಾರ್ವಜನಿಕರ ಸಹಾಯದಿಂದ ಚೇಳೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಅದಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.ಮೃತರ ಪತ್ನಿ ಶಿವಮ್ಮ ನೀಡಿದ ದೂರಿನ ಮೇರೆಗೆ ಚೇಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮೃತ ಮಲ್ಲಿಕಾರ್ಜುನ ಅವರು ಪತ್ನಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.