ಕೂಲಿಕಾರರ ಮಗಳು ಪಿಯುಸಿಯಲ್ಲಿ ಜಿಲ್ಲೆಗೆ ಮೂರನೇ ಟಾಪರ್ ಆಗಿ ಸಾಧನೆ ಮಾಡಿದ್ದಾಳೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೂಲಿಕಾರರ ಮಗಳು ಪಿಯುಸಿಯಲ್ಲಿ ಜಿಲ್ಲೆಗೆ ಮೂರನೇ ಟಾಪರ್ ಆಗಿ ಸಾಧನೆ ಮಾಡಿದ್ದಾಳೆ.

ಕಲಾ ವಿಭಾಗದಲ್ಲಿ ಕೊಡಗು ಜಿಲ್ಲೆಯ ಐಕೊಳ ಗ್ರಾಮದ ಮುಸ್ತಫಾ ಸುಬೇದ ದಂಪತಿ ಮಗಳು ಕೆ.ಎಂ. ಜುಹೆರಾ ಟಾಪರ್ ಆಗಿದ್ದಾಳೆ. ಇಂದಿಗೂ ದಂಪತಿ ಕೂಲಿ ಮಾಡಿ ಬದುಕು ನಡೆಸುತ್ತಿದ್ದಾರೆ.

ಜುಹಾರಾ ಮೂರ್ನಾಡು ಪಿಯು ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಕಲಾ ವಿಭಾಗದಲ್ಲಿ 570 ಅಂಕ ಪಡೆದು ಸಾಧನೆ ಮಾಡಿದ್ದಾಳೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಜುಹೆರಾ ಮಳೆಗಾಲದಲ್ಲಿ ಹೊಳೆ ತುಂಬಿದಾಗಲೆಲ್ಲಾ ನಮ್ಮ ಮನೆಯ ರಸ್ತೆ ಬ್ಲಾಕ್ ಆಗುತ್ತಿತ್ತು.

ಇಂದಿಗೂ ಮಳೆಗಾಲದಲ್ಲಿ ನಮ್ಮ ಮನೆ ರಸ್ತೆ ಬ್ಲಾಕ್ ಆಗುತ್ತದೆ. ಒಂದುವರೆ ಕಿಲೋ ಮೀಟರ್ ನಡೆದು ಮುಖ್ಯ ರಸ್ತೆ ತಲುಪಬೇಕಾಗಿತ್ತು. ಅಲ್ಲಿಂದ ಹತ್ತು ಕಿಲೋ ಮೀಟರ್ ಮೂರ್ನಾಡಿಗೆ ಬಸ್ಸಿನಲ್ಲಿ ಹೋಗಬೇಕಾಗಿತ್ತು.

ಹೊಳೆ ತುಂಬಿ ರಸ್ತೆ ಬ್ಲಾಕ್ ಆದಾಗ ತೋಟದೊಳಗೆ ನಡೆದು ಹೋಗುತ್ತಿದ್ದೆ. ಕೆಲವು ಬಾರಿ 10 ದಿನಗಳು ರಸ್ತೆ ಬಂದ್ ಆಗುತಿತ್ತು. ಆಗ ಮೂರ್ನಾಡಿನಲ್ಲಿ ಕಾಲೇಜಿಗೆ ಹೋಗಿ ಉಳಿದುಕೊಳ್ಳುತ್ತಿದೆವು. ಅಪ್ಪ ಅಮ್ಮನ ಜೊತೆಗೆ ಶಾಲೆಗೆ ಹೋಗಿ ಉಳಿದುಕೊಳ್ಳುತ್ತಿದ್ದೆವು ಎಂದು ಹೇಳಿದ್ದಾರೆ.

ನಿತ್ಯ ರಾತ್ರಿ 12 ಗಂಟೆವರೆಗೆ ಓದುತ್ತಿದ್ದೆ. ಮುಂಜಾನೆ ಮೂರುವರೆಗೆ ಎದ್ದು ಓದುತ್ತಿದ್ದೆ. ಹೀಗಾಗಿ ಇಷ್ಟು ಅಂಕಗಳು ಬರಲು ಅನುಕೂಲವಾಯಿತು. ಕಾಲೇಜಿನಲ್ಲಿ ಉಪನ್ಯಾಸಕರು, ಸ್ನೇಹಿತರು ಎಲ್ಲರೂ ನನ್ನ ಓದಿಗೆ ಸಹಕಾರ ಮಾಡುತ್ತಿದ್ದರು. ಮುಂದೆ ಬಿಎಡ್ ಮಾಡಿ ಶಿಕ್ಷಕಿ ಆಗಬೇಕು ಎಂದುಕೊಂಡಿದ್ದೇನೆ ಎಂದು ಸುದ್ದಿಗಾರರೊಂದಿಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.