ಅಂತಾರಾಷ್ಟ್ರೀಯ ಕಾರ್ಮಿಕ ದಿನ ಎನ್ನುವ ಬದಲು ಶ್ರಮಯೋಗಿ ದಿನ ಎಂದು ಕರೆಯುವುದು ಹೆಚ್ಚು ಸೂಕ್ತ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್. ದರಗದ ಹೇಳಿದರು.

ಕೊಪ್ಪಳ: ಅಂತಾರಾಷ್ಟ್ರೀಯ ಕಾರ್ಮಿಕ ದಿನ ಎನ್ನುವ ಬದಲು ಶ್ರಮಯೋಗಿ ದಿನ ಎಂದು ಕರೆಯುವುದು ಹೆಚ್ಚು ಸೂಕ್ತ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್. ದರಗದ ಹೇಳಿದರು.

ತಾಲೂಕಿನ ಹೂವಿನಾಳ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಅಂಗವಾಗಿ ಇತ್ತೀಚೆಗೆ ಜರುಗಿದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಂತಾರಾಷ್ಟ್ರೀಯ ಕಾರ್ಮಿಕ ದಿನ ಎನ್ನುವ ಬದಲು ಶ್ರಮಯೋಗಿ ದಿನ ಎಂದು ಕರೆಯುವುದು ಹೆಚ್ಚು ಸೂಕ್ತ. ಬಸವಣ್ಣನವರು ಕಾಯಕವೇ ಕೈಲಾಸ ಎಂದು ನುಡಿದು ಕಾಯಕದ ಮಹತ್ವವನ್ನು ಸಾರಿದ್ದಾರೆ. ಅದೇ ರೀತಿ `ನೀನು ಅಧ್ಯಕ್ಷನಾಗಿರು, ಚಮ್ಮಾರನಾಗಿರು, ಕಮ್ಮಾನಾಗಿರು, ಏನೇ ಆಗಿದ್ದರೂ ಮೊದಲು ಶ್ರಮಯೋಗಿ ಆಗಿ ಕೆಲಸಗಾರನಾಗು, ಕಾರ್ಮಿಕನಾಗಿರು ಎಂದು ಡಾ. ಬಿ.ಆರ್. ಅಂಬೇಡ್ಕರ್ ಹೇಳಿದ್ದಾರೆ. ಶ್ರಮಿಕವರ್ಗ ದೇಶದ ಅಭಿವೃದ್ಧಿ, ಉನ್ನತಿಗೆ ಮುನ್ನುಡಿಯಾಗಿದ್ದಾರೆ ಎಂದರು.‎

ಕಲ್ಯಾಣ ಕರ್ನಾಟಕ ಜಿಲ್ಲೆಗಳ ನೋಂದಾಯಿತ ಕಾರ್ಮಿಕ ಸಂಘಗಳ ಒಕ್ಕೂಟ ಅಧ್ಯಕ್ಷ ರಮೇಶ ಘೋರ್ಪಡೆ ಮಾತನಾಡಿ, ಕಾರ್ಮಿಕ ಇಲಾಖೆಯಿಂದ ನಮ್ಮ ಕಾರ್ಮಿಕರಿಗೆ ಒಳ್ಳೆಯ ‎ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದರಿಂದ ನಮ್ಮ ಕಾರ್ಮಿಕರು ಉತ್ತಮ ಜೀವನ ಕಟ್ಟಿಕೊಳ್ಳಲು ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಲು ಸಾಧ್ಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಮಿಕ ನಿರೀಕ್ಷಕರಾದ ಮಂಜುಳಾ ವಿಶ್ವನಾಥ ಮಾತನಾಡಿ, ಪಾಶ್ಚಿಮಾತ್ಯ ದೇಶಗಳಲ್ಲಿ ಕಾರ್ಮಿಕರ ದಂಗೆಗಳು 1883ರಲ್ಲಿ ಪ್ರಾರಂಭವಾದವು. ಚಿಕಾಗೋದಲ್ಲಿ ಕಾರ್ಮಿಕ ಸಂಘಟನೆಗಳು ಕೆಲಸದ ಅವಧಿ ನಿರ್ಧರಿಸುವ ಸಲುವಾಗಿ ಮತ್ತು ಅನೇಕ ಶೋಷಣೆಗಳ ವಿರುದ್ಧ ಹೋರಾಟ ಪ್ರಾರಂಭಿಸಿದವು. ಎಂದರು.

ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ, ಕಾರ್ಮಿಕ ಇಲಾಖೆಯ ಕ್ಷೇತ್ರ ನಿರ್ವಾಹಕ ಹೇಮಂತ್ ಸಿಂಗ್, ಬಹದ್ದೂರ ಬಂಡಿ ಕಾರ್ಮಿಕ ಸಂಘದ ಅಧ್ಯಕ್ಷ ಮಹಿಬೂಬ ಮಣ್ಣೂರ, ಹೂವಿನಾಳ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಇಂದ್ರಾನಾಯಕ ಸೇರಿದಂತೆ ವಿವಿಧ ಸಂಘಟನೆಯ ಪದಾಧಿಕಾರಿಗಳು, ಕಾರ್ಮಿಕರಿದ್ದರು.