ಧಾರ್ಮಿಕ ಮಹತ್ವ ಹೊಂದಿರುವ ಈ ಕ್ಷೇತ್ರದ ಅಭಿವೃದ್ಧಿಗೆ ಕೋಟ್ಯಂತರ ರುಪಾಯಿ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಲಾಗುತ್ತದಾದರೂ, ಕ್ಷೇತ್ರದಲ್ಲಿ ಅದರ ಕುರುಹು ಮಾತ್ರ ಕಾಣಿಸುತ್ತಿಲ್ಲ.

ಅಂತರಗಂಗೆ ಬೆಟ್ಟಕ್ಕೆ ನೇರ ಬಸ್ ಸೌಲಭ್ಯವೇ ಇಲ್ಲ । ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ವಿರುದ್ಧ ಜನರ ಆಕ್ರೋಶ

ಸ್ಕಂದಕುಮಾರ್ ಬಿ.ಎಸ್

ಕನ್ನಡಪ್ರಭ ವಾರ್ತೆ ಕೋಲಾರ

ಕೋಲಾರ ಜಿಲ್ಲೆಯ ಹೆಮ್ಮೆ, ಜಿಲ್ಲಾ ಕೇಂದ್ರದಿಂದ ಅತಿ ಸಮೀಪದಲ್ಲಿರುವ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ಕ್ಷೇತ್ರ ಅಂತರಗಂಗೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಎದುರಾಗಿದೆ.

ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ಈ ಪುಣ್ಯಕ್ಷೇತ್ರಕ್ಕೆ ಪ್ರತಿದಿನ ನೂರಾರು ಭಕ್ತರು, ಪ್ರವಾಸಿಗರು ಮತ್ತು ಚಾರಣಪ್ರಿಯರು ಆಗಮಿಸುತ್ತಾರೆ. ಆದರೆ ಇಲ್ಲಿಗೆ ಬರುವ ಭಕ್ತಾಧಿಗಳಿಗೆ ಕನಿಷ್ಠ ಸೌಲಭ್ಯಗಳನ್ನೂ ಕಲ್ಪಿಸುವಲ್ಲಿ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

ಧಾರ್ಮಿಕ ಮಹತ್ವ ಹೊಂದಿರುವ ಈ ಕ್ಷೇತ್ರದ ಅಭಿವೃದ್ಧಿಗೆ ಕೋಟ್ಯಂತರ ರುಪಾಯಿ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಲಾಗುತ್ತದಾದರೂ, ಕ್ಷೇತ್ರದಲ್ಲಿ ಅದರ ಕುರುಹು ಮಾತ್ರ ಕಾಣಿಸುತ್ತಿಲ್ಲ. ಇದರಿಂದಾಗಿ ಅಂತರಗಂಗೆಯ ದರ್ಶನಕ್ಕೆ ಬರುವ ಭಕ್ತರು ಮತ್ತು ಯಾತ್ರಾರ್ಥಿಗಳು ಪರಿತಪಿಸುವಂತಾಗಿದೆ.

ಬಸ್ ಸೌಲಭ್ಯವೇ ಇಲ್ಲ:

ಕೋಲಾರ ನಗರದಿಂದ ಕೇವಲ ೩ ರಿಂದ ೪ ಕಿಲೋಮೀಟರ್ ದೂರದಲ್ಲಿರುವ ಅಂತರಗಂಗೆ ಬೆಟ್ಟಕ್ಕೆ ನೇರ ಬಸ್ ಸೌಲಭ್ಯವೇ ಇಲ್ಲ. ಕೋಲಾರದಿಂದ ಶತಶೃಂಗ ಪರ್ವತದ ತಪ್ಪಲಿನವರೆಗೆ ಹೋಗಲು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಭಕ್ತರು ಖಾಸಗಿ ಆಟೋ, ಜೀಪ್‌ಗಳಿಗೆ ಹೆಚ್ಚಿನ ಹಣ ಕೊಟ್ಟು ಹೋಗಬೇಕಾದ ಅನಿವಾರ್ಯತೆ ಇದೆ. ವೃದ್ಧರು, ಮಹಿಳೆಯರು ಮತ್ತು ಮಕ್ಕಳೊಂದಿಗೆ ಬರುವ ಭಕ್ತರಿಗೆ ಇದು ದೊಡ್ಡ ಹೊರೆಯಾಗಿದೆ.

ಕುಡಿಯುವ ನೀರಿಗೂ ಪರದಾಟ:

ಕ್ಷೇತ್ರಕ್ಕೆ ಬರುವ ಭಕ್ತರಿಗೆ ಅತ್ಯಂತ ಅಗತ್ಯವಾದ ಶೌಚಾಲಯ ವ್ಯವಸ್ಥೆಯೂ ಇಲ್ಲ. ಒಂದೆರಡು ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎನ್ನಲಾಗುತ್ತದೆಯಾದರೂ, ಅವು ೨೪ ಗಂಟೆಯೂ ಬೀಗ ಹಾಕಿಕೊಂಡಿರುತ್ತವೆ. ನಿರ್ವಹಣೆ ಇಲ್ಲದೆ ಅವು ದುರ್ವಾಸನೆ ಬೀರುತ್ತಿವೆ. ಇದರಿಂದಾಗಿ ಮಹಿಳಾ ಭಕ್ತರು ತೀವ್ರ ಮುಜುಗರ ಮತ್ತು ತೊಂದರೆ ಅನುಭವಿಸುವಂತಾಗಿದೆ. ಬಯಲನ್ನೇ ಶೌಚಾಲಯವಾಗಿ ಬಳಸಬೇಕಾದ ದುಸ್ಥಿತಿ ಇದೆ.

ಅದೇ ರೀತಿ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಬೆಟ್ಟ ಹತ್ತಿ ದೇವರ ದರ್ಶನ ಪಡೆದು ಬರುವ ಭಕ್ತರಿಗೆ ಒಂದು ಲೋಟ ಕುಡಿಯುವ ನೀರು ಸಿಗದಂತಾಗಿದೆ. ದಾರಿಯುದ್ದಕ್ಕೂ ಎಲ್ಲಿಯೂ ಶುದ್ಧ ಕುಡಿಯುವ ನೀರಿನ ನಳ ಅಥವಾ ಘಟಕಗಳಿಲ್ಲ. ಭಕ್ತರು ತಮ್ಮ ಮನೆಯಿಂದಲೇ ನೀರಿನ ಬಾಟಲ್ ತರಬೇಕಾದ ಪರಿಸ್ಥಿತಿ ಇದೆ. ಪ್ರವಾಸಿ ತಾಣವೆಂದು ಹೇಳಿಕೊಳ್ಳುವ ಸ್ಥಳದಲ್ಲಿ ಕುಡಿಯುವ ನೀರಿನಂತಹ ಕನಿಷ್ಠ ಸೌಲಭ್ಯವೂ ಇಲ್ಲದಿರುವುದು ನಿಜಕ್ಕೂ ವಿಪರ್ಯಾಸ.

ಪಾರ್ಕಿಂಗ್ ವ್ಯವಸ್ಥೆ ಇಲ್ಲ:

ಅಂತರಗಂಗೆಗೆ ಪ್ರತಿದಿನ ನೂರಾರು ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳಲ್ಲಿ ಜನರು ಬರುತ್ತಾರೆ. ಆದರೆ ಇಲ್ಲಿ ವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲ. ಬೆಟ್ಟದ ತಪ್ಪಲಿನಲ್ಲಿ ಮತ್ತು ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ.

ಪೊಲೀಸ್ ಭದ್ರತೆಯೂ ಇಲ್ಲ:

ಧಾರ್ಮಿಕ ಕ್ಷೇತ್ರವಾಗಿರುವ ಅಂತರಗಂಗೆ ಬೆಟ್ಟ ಮತ್ತು ಗುಹೆ ದೇವಾಲಯದಲ್ಲಿ ಭಕ್ತರ ರಕ್ಷಣೆಗೆ ಪೊಲೀಸ್ ಬಂದೋಬಸ್ತ್ ಕೂಡ ಇಲ್ಲ. ಸಂಜೆಯ ನಂತರ ಕ್ಷೇತ್ರದಲ್ಲಿ ಕಿಡಿಗೇಡಿಗಳ ಹಾವಳಿ ಹೆಚ್ಚಾಗಿದ್ದು, ಭಕ್ತರಲ್ಲಿ ಆತಂಕ ಮೂಡಿಸಿದೆ.

ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯ:

ಕೋಲಾರದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿರುವ ಅಂತರಗಂಗೆಯ ಅಭಿವೃದ್ಧಿಯ ಬಗ್ಗೆ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಇಲಾಖಾಧಿಕಾರಿಗಳು ಗಮನ ಹರಿಸದಿರುವುದು ದುರಂತವೇ ಸರಿ.

ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಪ್ರವಾಸಿಗರು ನಿರಾಶರಾಗಿ ವಾಪಸ್ಸಾಗುತ್ತಿದ್ದಾರೆ. ಈ ಕೂಡಲೇ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಮಹಾನಗರ ಪಾಲಿಕೆ ಮತ್ತು ಮುಜರಾಯಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಬಸ್ ಸೌಲಭ್ಯ, ಶೌಚಾಲಯ ನಿರ್ವಹಣೆ, ಕುಡಿಯುವ ನೀರು, ಪಾರ್ಕಿಂಗ್ ಮತ್ತು ಪೊಲೀಸ್ ಭದ್ರತೆ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಭಕ್ತರು ಮತ್ತು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಕೋಟ್:

ಮುಜರಾಯಿ ದೇವಾಲಯಗಳ ಅಭಿವೃದ್ದಿಗಾಗಿ ಸರ್ಕಾರವು ಕೋಟ್ಯಾಂತರ ಅನುದಾನ ಬಿಡುಗಡೆ ಮಾಡುತ್ತಲೇ ಇದೆ, ಸರ್ಕಾರದಿಂದ ಬರುವ ಹಣವೆಲ್ಲವೂ ಪೋಲಾಗುತ್ತಿದ್ದು, ಈ ಬಗ್ಗೆ ಜಿಲ್ಲಾಡಳಿತ, ಪ್ರವಾಸೋಧ್ಯಮ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಪುರಾತನ ಹಾಗೂ ಐತಿಹಾಸಿಕ ಹಿನ್ನಲೆಯುಳ್ಳ ಅಂತರಗಂಗೆ ಪ್ರವಾಸಿ ಕ್ಷೇತ್ರವನ್ನು ಅಭಿವೃದ್ದಿಗೊಳಿಸಬೇಕು.- ನಾಗರಾಜಶೆಣೈ, ಸ್ಥಳೀಯರು, ಕೋಲಾರ.