ಹರಪನಹಳ್ಳಿಯಲ್ಲಿ ಬಿಸಿಎಂ ಹಾಸ್ಟೆಲ್‌ ಕೊರತೆ ವಿದ್ಯಾರ್ಥಿಗಳ ಪರದಾಟ

| Published : Jun 20 2024, 01:04 AM IST

ಸಾರಾಂಶ

ದ್ವಿತೀಯ ಪಿಯು ವಿದ್ಯಾರ್ಥಿಗಳು ತೇರ್ಗಡೆಯಾಗಿ ಹೋಗುವುದರಿಂದ ಪ್ರತಿ ವರ್ಷ ಅಂದಾಜು 500 ವಿದ್ಯಾರ್ಥಿಗಳಿಗೆ ಮಾತ್ರ ಸ್ಥಳಾವಕಾಶವಿರುತ್ತದೆ

ಬಿ.ರಾಮಪ್ರಸಾದ್ ಗಾಂಧಿ

ಹರಪನಹಳ್ಳಿ:

ತಾಲೂಕಿನಲ್ಲಿ ಬಿಸಿಎಂ ಇಲಾಖೆ ಅಡಿ ಕಾರ್ಯ ನಿರ್ವಹಿಸುವ ಹಾಸ್ಟೆಲ್‌ಗಳ ಕೊರತೆ ತೀವ್ರವಾಗಿದ್ದು, ಪ್ರತಿ ವರ್ಷ ಸ್ಥಳಾವಕಾಶಕ್ಕಾಗಿ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.

ಸದ್ಯ ತಾಲೂಕಿನಲ್ಲಿ ಬಿಸಿಎಂ ಇಲಾಖೆ ಅಡಿಯಲ್ಲಿ 3 ಬಾಲಕರ, 5 ಬಾಲಕಿಯರ ಹಾಸ್ಟೆಲ್‌ ಸೇರಿದಂತೆ ಒಟ್ಟು 8 ಹಾಸ್ಟೆಲ್‌ಗಳು ಕಾರ್ಯಾಚರಿಸುತ್ತಿವೆ. ಇವುಗಳಲ್ಲಿ 3 ಬಾಲಕರ ಹಾಸ್ಟೆಲ್‌ ಪೈಕಿ ಎರಡು ಮಾತ್ರ ಹರಪನಹಳ್ಳಿ ಪಟ್ಟಣದಲ್ಲಿ ಇವೆ.

8 ಹಾಸ್ಟೆಲ್‌ಗಳು ಸೇರಿ ಒಟ್ಟು 1151 ವಿದ್ಯಾರ್ಥಿಗಳಿಗೆ ಸ್ಥಳಾವಕಾಶವಿದೆ. ದ್ವಿತೀಯ ಪಿಯು ವಿದ್ಯಾರ್ಥಿಗಳು ತೇರ್ಗಡೆಯಾಗಿ ಹೋಗುವುದರಿಂದ ಪ್ರತಿ ವರ್ಷ ಅಂದಾಜು 500 ವಿದ್ಯಾರ್ಥಿಗಳಿಗೆ ಮಾತ್ರ ಸ್ಥಳಾವಕಾಶವಿರುತ್ತದೆ. ಆದರೆ ಪ್ರತಿ ವರ್ಷ 3500ರಿಂದ 4 ಸಾವಿರ ವಿದ್ಯಾರ್ಥಿಗಳು ಹಾಸ್ಟೆಲ್‌ಗಾಗಿ ಅರ್ಜಿ ಸಲ್ಲಿಸುತ್ತಾರೆ.

ಒತ್ತಡದಲ್ಲಿ ವಾರ್ಡನ್‌ಗಳು: ಸ್ಥಳಾವಕಾಶಕ್ಕಿಂತ 5-6 ಪಟ್ಟು ಅಧಿಕ ಬೇಡಿಕೆ ಬರುವುದರಿಂದ ನಿಲಯ ಮೇಲ್ವಿಚಾರಕರು ಸಾಕಷ್ಟು ಒತ್ತಡದಲ್ಲಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖಂಡರು, ಜನಪ್ರತಿನಿಧಿಗಳು, ವಿವಿಧ ಗಣ್ಯ ವ್ಯಕ್ತಿಗಳು ತಮಗೆ ಬೇಕಾದವರಿಗೆ ಶಿಫಾರಸು ಮಾಡುತ್ತಲೇ ಇರುತ್ತಾರೆ. ಆದರೆ ಸ್ಥಳಾವಕಾಶ ಇಲ್ಲದಿರುವುದರಿಂದ ನಿಲಯ ಮೇಲ್ವಿಚಾರಕರು ತೀವ್ರ ಒತ್ತಡ ಅನುಭವಿಸಬೇಕಾಗುತ್ತದೆ.

ಸಮಾಜ ಕಲ್ಯಾಣ ಇಲಾಖೆಗೆ ಒಳಪಡುವ ಹಾಸ್ಟೆಲ್‌ಗಳಲ್ಲಿ ಅರ್ಜಿ ಹಾಕಿದವರಿಗೆಲ್ಲ ಸೀಟು ಕೊಡುವ ಆದೇಶವಿದೆ. ಬಿಸಿಎಂ ಇಲಾಖೆ ಅಡಿಯ ಹಾಸ್ಟೆಲ್‌ಗಳಿಗೆ ಸೀಟುಗಳ ನಿರ್ಬಂಧವಿದೆ.

ಪಟ್ಟಣದಲ್ಲಿ ಪ್ರಿ ಮೆಟ್ರಿಕ್‌ನಲ್ಲಿ 3 ಬಾಲಕರ, 1 ಬಾಲಕಿಯರ ಹಾಸ್ಟೆಲ್‌ ಇವೆ. ಪಟ್ಟಣದಲ್ಲಿ ಪ್ರಿ ಮೆಟ್ರಿಕ್‌ ಹಾಸ್ಟೆಲ್‌ಗಳ ಅಗತ್ಯವಿದೆ. ಬಾಲಕ, ಬಾಲಕೀಯರು ಸೇರಿ ಮೆಟ್ರಿಕ್‌ ನಂತರದ ಇನ್ನು 8 ಹಾಸ್ಟೆಲ್‌ ಬೇಕಿದೆ.

ಹರಪನಹಳ್ಳಿ ತಾಲೂಕು ಡಾ.ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ತಾಲೂಕು. ಆದರೆ ಶೈಕ್ಷಣಿಕವಾಗಿ ಮುಂದಿದೆ. ಇಲ್ಲಿ ಸರ್ಕಾರಿ ಪಾಲಿಟೆಕ್ನಿಕ್, ಐಟಿಐ ಕಾಲೇಜುಗಳು, ಪಿಯು, ಪದವಿ ಕಾಲೇಜುಗಳಿವೆ. ಖಾಸಗಿ ನರ್ಸಿಂಗ್, ಪ್ಯಾರಾ ಮೆಡಿಕಲ್, ಬಿಇಡಿ, ಫಾರ್ಮಸಿ ಸೇರಿದಂತೆ ಇನ್ನು ಅನೇಕ ಶಾಲಾ ಕಾಲೇಜುಗಳಿವೆ. ಇಲ್ಲಿಗೆ ಅಭ್ಯಾಸ ಮಾಡಲು ಅಕ್ಕ ಪಕ್ಕದ ತಾಲೂಕು ಸೇರಿದಂತೆ ದೂರದ ಜಿಲ್ಲೆ, ಹೊರ ರಾಜ್ಯಗಳಿಂದಲೂ ವಿದ್ಯಾರ್ಥಿಗಳು ಬರುತ್ತಾರೆ.

ಆದರೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ಹಾಸ್ಟೆಲ್‌ಗಳ ಕೊರತೆಯಂತೂ ತೀವ್ರವಾಗಿದೆ. ಶೀಘ್ರ ಈ ವರ್ಷದಲ್ಲಿ ಹಾಸ್ಟೆಲ್‌ ಸೇರಲು ಅರ್ಜಿ ಆಹ್ವಾನ ಮಾಡಲಾಗುತ್ತದೆ.

2 ಹಾಸ್ಟೆಲ್‌ ಮಂಜೂರು: ಇದೀಗ ವಿಜಯನಗರ ಜಿಲ್ಲೆಗೆ ಮೆಟ್ರಿಕ್‌ ನಂತರದ ಬಾಲಕ, ಬಾಲಕಿಯರ ತಲಾ ಒಂದೊಂದು ಹಾಸ್ಟೆಲ್‌ ಮಂಜೂರಾಗಿವೆ. ಬೇಡಿಕೆಗೆ ಅನುಗುಣವಾಗಿ ಹಂಚಿಕೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದೀಗ ಜಿಲ್ಲೆಗೆ ಮಂಜೂರಾದ 2 ಹಾಸ್ಟೆಲ್‌ ಪೈಕಿ 1 ಮೆಟ್ರಿಕ್‌ ನಂತರದ ಬಾಲಕರ ಹಾಸ್ಟೆಲನ್ನು ಇಲ್ಲಿಯ ಶಾಸಕರು ಹರಪನಹಳ್ಳಿಗೆ ಮಂಜೂರಾತಿ ಮಾಡಿಸಿದರೆ ಸ್ವಲ್ಪ ಮಟ್ಟಿನ ಕೊರತೆ ನೀಗಿಸಬಹುದು. ಮೇ 21ರಂದು ಸಿಎಂ ವಿಜಯನಗರ ಜಿಲ್ಲಾ ಕೇಂದ್ರದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದು, ಈ ಕುರಿತು ಪ್ರಸ್ತಾಪವಾದರೆ ಅನುಕೂಲ ಎಂಬುದು ಸಾರ್ವಜನಿಕರ ಆಶಯವಾಗಿದೆ.

ತಾಲೂಕಲ್ಲಿ ಬಿಸಿಎಂ ಹಾಸ್ಟೆಲ್‌ಗಳ ಕೊರತೆ ಇದೆ. 5 ಬಾಲಕರ, 4 ಬಾಲಕಿಯರ, 1 ವೃತ್ತಿ ಶಿಕ್ಷಣ ಸೇರಿ ಒಟ್ಟು 10 ಮೆಟ್ರಿಕ್‌ ನಂತರದ ಹಾಸ್ಟೆಲ್‌ಗಳ ಮಂಜೂರಾತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎನ್ನುತ್ತಾರೆ ಹರಪನಹಳ್ಳಿ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿಜಯಲಕ್ಷ್ಮಿ ವಿ. ಹತ್ತಿಕಾಳು.