ಕಾಂಗ್ರೆಸ್‌ನಲ್ಲೇ ಸಮನ್ವಯತೆ ಕೊರತೆ : ಒಂದೇ ಸಮಯಕ್ಕೆ ಎರಡು ಕಡೆ ಸಭೆ

| Published : Apr 04 2024, 01:11 AM IST / Updated: Apr 04 2024, 08:07 AM IST

ಕಾಂಗ್ರೆಸ್‌ನಲ್ಲೇ ಸಮನ್ವಯತೆ ಕೊರತೆ : ಒಂದೇ ಸಮಯಕ್ಕೆ ಎರಡು ಕಡೆ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ ಅಂದರೆ ಹಾಗೆ. ಸಮನ್ವಯದ ಕೊರತೆ. ಗುಂಪುಗಾರಿಕೆ, ಒಳಜಗಳ ಮಾಮೂಲಿ ಎಂಬ ಮಾತಿದೆ. ಅದಕ್ಕೆ ಪುಷ್ಠಿ ನೀಡುವಂತೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬುಧವಾರ ನಡೆದಿರುವ ಘಟನೆ ಸಾಕ್ಷಿಯಾಗಿದೆ.

ಹುಬ್ಬಳ್ಳಿ:  ಕಾಂಗ್ರೆಸ್‌ ಅಂದರೆ ಹಾಗೆ. ಸಮನ್ವಯದ ಕೊರತೆ. ಗುಂಪುಗಾರಿಕೆ, ಒಳಜಗಳ ಮಾಮೂಲಿ ಎಂಬ ಮಾತಿದೆ. ಅದಕ್ಕೆ ಪುಷ್ಠಿ ನೀಡುವಂತೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬುಧವಾರ ನಡೆದಿರುವ ಘಟನೆ ಸಾಕ್ಷಿಯಾಗಿದೆ.

ಲೋಕಸಭಾ ಚುನಾವಣೆ ಉಸ್ತುವಾರಿ ಹೊತ್ತವರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಸಂತೋಷ ಲಾಡ್‌. ಇವರ ನೇತೃತ್ವದಲ್ಲೇ ಎಲ್ಲ ಸಭೆಗಳು ನಡೆಯುತ್ತಿವೆ. ಇವತ್ತು ಆಗಿದ್ದು ಏನೆಂದರೆ ಪಕ್ಷದಲ್ಲಿನ ವಿವಿಧ ಮುಂಚೂಣಿ ಘಟಕಗಳ ಪದಾಧಿಕಾರಿಗಳ ಸಭೆಯನ್ನು ಕಾಂಗ್ರೆಸ್‌ ಕಚೇರಿಯಲ್ಲಿ ಬೆಳಗ್ಗೆ ಕರೆಯಲಾಗಿತ್ತು. ಅದೇ ಸಮಯಕ್ಕೆ ಧಾರವಾಡ ಸಮೀಪದಲ್ಲಿರುವ ಮಯೂರ್‌ ರೇಸಾರ್ಟ್‌ನಲ್ಲಿ ಹಿಂದುಳಿದ ವರ್ಗಗಳ ಮುಂಚೂಣಿ ಘಟಕ ಹಾಗೂ ಯುವ ಕಾಂಗ್ರೆಸ್‌, ವಿದ್ಯಾರ್ಥಿ ಕಾಂಗ್ರೆಸ್‌ನ ಪದಾಧಿಕಾರಿಗಳ ಸಭೆ ಕರೆಯಲಾಗಿತ್ತು. 

ಎರಡು ಸಭೆಗಳ ನೇತೃತ್ವವನ್ನು ಸಚಿವ ಲಾಡ್‌ ಅವರೇ ವಹಿಸಬೇಕಿತ್ತು. ಅತ್ತ ಮಯೂರ್‌ ರೇಸಾರ್ಟ್‌ನಲ್ಲಿನ ಸಭೆಯ ನೇತೃತ್ವ ಸಚಿವರು ವಹಿಸಿದ್ದರು. ಹೀಗಾಗಿ ಇಲ್ಲಿ ಪಕ್ಷದ ಕಚೇರಿಯಲ್ಲಿ ನಡೆಯಬೇಕಿದ್ದ ಸಭೆಗೆ ಅವರು ಬರಲೇ ಇಲ್ಲ. ಇನ್ನು ಈ ಸಭೆಗೆ ಬರಬೇಕಿದ್ದವರಲ್ಲಿ ಕೆಲವರು ಅಲ್ಲಿನ ಸಭೆಗೆ ಹಾಜರಾಗಿದ್ದರು. ಉಳಿದವರು ಬಂದು ಕುಳಿತು ಕೆಲಕಾಲ ಕಾಯ್ದು ಪಕ್ಷದಲ್ಲಿ ಒಂದೇ ಒಂದು ಶಿಸ್ತು ಇಲ್ಲ. ಸಮನ್ವಯ ಇಲ್ಲ. ಅಲ್ಲೂ ಕರೆಯುತ್ತಾರೆ, ಇಲ್ಲೂ ಸಭೆ ಕರೆಯುತ್ತಾರೆ. ಅದ್ಹೇಗೆ ಅಟೆಂಡ್‌ ಆಗೋದು ಎಂದು ಗೊಣಗುತ್ತಾ ಅಲ್ಲಿಂದ ತೆರಳಿದರು.

ಇನ್ಮೇಲಾದರೂ ಈ ರೀತಿ ಆಗದಂತೆ ನೋಡಿಕೊಳ್ಳ ಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಈ ಕುರಿತು ಪಕ್ಷದ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ ಮಾತನಾಡಿ, ಎರಡು ಕಡೆ ಸಭೆ ಕರೆದಿದ್ದರೆ ಗೊಂದಲ ಉಂಟಾಗಿತ್ತು. ಹೀಗಾಗಿ ಪಕ್ಷದ ಕಚೇರಿಯಲ್ಲಿನ ಸಭೆ ನಡೆಯಲಿಲ್ಲ. ಆದರೆ ಮಯೂರ್‌ ರೇಸಾರ್ಟ್‌ನಲ್ಲಿನ ಸಭೆ ಮಾತ್ರ ನಡೆಯಿತು. ಇನ್ಮೇಲೆ ಈ ರೀತಿ ಆಗದಂತೆ ನೋಡಿಕೊಳ್ಳಲಾಗುವುದು ಎಂದರು.