ತಿಂಗಳಾಂತ್ಯಕ್ಕೆ 50 ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ: ಜಿಲ್ಲಾಧಿಕಾರಿ ದಿವ್ಯಪ್ರಭು

| Published : Feb 13 2024, 12:49 AM IST

ತಿಂಗಳಾಂತ್ಯಕ್ಕೆ 50 ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ: ಜಿಲ್ಲಾಧಿಕಾರಿ ದಿವ್ಯಪ್ರಭು
Share this Article
  • FB
  • TW
  • Linkdin
  • Email

ಸಾರಾಂಶ

ತೀವ್ರ ಬೇಸಿಗೆಯ ಹಿನ್ನೆಲೆಯಲ್ಲಿ ಬರುವ ಮಾರ್ಚ್‌ ಪ್ರಾರಂಭವಾಗುವ ವೇಳೆಗೆ ಜಿಲ್ಲೆಯ 50 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುವ ಸಂಭವವಿದೆ.

ಹುಬ್ಬಳ್ಳಿ: ಈ ತಿಂಗಳಾಂತ್ಯಕ್ಕೆ ಜಿಲ್ಲೆಯ 50ಕ್ಕೂ ಅಧಿಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಬರ ಉಲ್ಬಣವಾಗುವ ಸಂಭವವಿದ್ದು, ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚಿಸಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಜಿಲ್ಲೆಯ ಯಾವುದೇ ಹಳ್ಳಿಗಳಲ್ಲಿ ಕುಡಿಯುವ ನೀರಿನ ಗಂಭೀರ ಸಮಸ್ಯೆಯಾಗಿಲ್ಲ. ಆದರೆ, ತೀವ್ರ ಬೇಸಿಗೆಯ ಹಿನ್ನೆಲೆಯಲ್ಲಿ ಬರುವ ಮಾರ್ಚ್‌ ಪ್ರಾರಂಭವಾಗುವ ವೇಳೆಗೆ ಜಿಲ್ಲೆಯ 50 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುವ ಸಂಭವವಿದೆ ಎಂದು ತಹಸೀಲ್ದಾರ್‌, ಪಿಡಿಒಗಳು ಮಾಹಿತಿ ನೀಡಿದ್ದಾರೆ. ಈಗಾಗಲೇ ಅವರಿಗೆ ಸೂಚನೆ ನೀಡಿದ್ದು, ಎಲ್ಲಿ ಕುಡಿಯುವ ನೀರಿನ ಉಲ್ಬಣವಾಗುವ ಸಂಭವವಿದೆಯೋ ಅಲ್ಲಿ ಖಾಸಗಿ ಬೋರವೆಲ್‌ ಮಾಲೀಕರೊಂದಿಗೆ ಮಾತನಾಡಿ ಕುಡಿಯುವ ನೀರು ಪೂರೈಕೆಗಾಗಿ ಬೋರವೆಲ್‌ಗಳನ್ನು ಬಾಡಿಗೆ ರೂಪದಲ್ಲಿ ಪಡೆದುಕೊಳ್ಳಲು ಸೂಚನೆ ನೀಡಿದ್ದು, ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡಿವೆ.

ತುರ್ತು ಕಾಮಗಾರಿ ಕೈಗೊಳ್ಳಲು ಈಗಾಗಲೇ ನಮ್ಮಲ್ಲಿ ₹21 ಕೋಟಿ ಅನುದಾನವಿದೆ. ಗುರುತಿಸಿದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾದಲ್ಲಿ ಕೂಡಲೇ ನೀರು ಪೂರೈಕೆಗೆ ಬೇಕಾದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಂದು ವೇಳೆ ಖಾಸಗಿ ಬೋರವೆಲ್‌ ಇರದೇ ಇದ್ದಲ್ಲಿ ಅಂತಹ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಕೆಗೆ ಬೇಕಾದ ಕ್ರಮ ಕೈಗೊಳ್ಳಲು ಈಗಾಗಲೇ ಸೂಚನೆ ನೀಡಲಾಗಿದೆ. ಹೀಗಾಗಿ, ಯಾವುದೇ ರೀತಿ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು.

2.11 ಲಕ್ಷ ಹೆಕ್ಟೇರ್‌ ಹಾನಿ

ತೀವ್ರ ಬರದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸುಮಾರು 2.11 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆಗಳು ಹಾನಿಗೊಳಗಾಗಿವೆ. 1ಲಕ್ಷ 60 ಸಾವಿರ ರೈತರು ಬರದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜಿಲ್ಲೆಗೆ ಬರಪರಿಹಾರದ ಮೊತ್ತ ₹212 ಕೋಟಿ ಬರಬೇಕಿದೆ. ಕೇಂದ್ರ ಸರ್ಕಾರದಿಂದ ಈ ವರೆಗೆ ಬರಪರಿಹಾರ ಬಾರದ ಹಿನ್ನೆಲೆಯಲ್ಲಿ ಈಗಾಗಲೇ ಬೆಳೆ ಹಾನಿಗೊಳಗಾದ ಪ್ರತಿಯೊಬ್ಬ ರೈತರ ಖಾತೆಗೆ ₹2 ಸಾವಿರ ಮಧ್ಯಂತರ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಬರಕ್ಕೆ ತುತ್ತಾದ ರೈತರ ಸಮಗ್ರ ಮಾಹಿತಿಯನ್ನು ಸರ್ಕಾರಕ್ಕೆ ಕಳಿಸಲಾಗಿದೆ. ಈಗಾಗಲೇ ಹಲವು ರೈತರಿಗೆ ಮಧ್ಯಂತರ ಪರಿಹಾರದ ಹಣ ಅವರ ಖಾತೆಗೆ ಜಮೆಯಾಗಿದ್ದು, ಯಾರಿಗೆ ಜಮಾ ಆಗಿದೆ ಎಂಬುದರ ಕುರಿತು ಎಲ್ಲ ತಹಸೀಲ್ದಾರ್‌ ಕಚೇರಿಗಳಲ್ಲಿ ಮಾಹಿತಿಯ ಫಲಕ ಹಾಕಲಾಗಿದೆ ಎಂದರು.

ಸಂವಿಧಾನ ಜಾಗೃತಿ ಕಾರ್ಯಕ್ರಮ

ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ಜಿಲ್ಲೆಯಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ. ಸಂವಿಧಾನದ ಸಾರಾಂಶ ಪ್ರತಿಬಿಂಬಿಸುವ ಟ್ಯಾಬ್ಲೋ ತಯಾರಿಸಲಾಗಿದ್ದು, ಇದರೊಂದಿಗೆ 15 ಕಲಾತಂಡಗಳು, 15 ಪ್ರಮುಖ ಭಾಷಣಕಾರರು ಭಾಗಿಯಾಗಿ ಸಂವಿಧಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳುತ್ತಿದ್ದಾರೆ. ಇದಲ್ಲದೇ ಮಕ್ಕಳಿಂದಲೂ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದಕ್ಕೆ ಜನರಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ದೊರೆಯುತ್ತಿದೆ ಎಂದರು.

ಹು-ಧಾ ಮಹಾನಗರ ಹಾಗೂ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಸಂಚರಿಸುವಂತೆ ರೂಟ್‌ಮ್ಯಾಪ್‌ ತಯಾರಿಸಲಾಗಿದೆ. ಅದರಂತೆ ಮಹಾನಗರದಲ್ಲಿರುವ 82 ವಾರ್ಡ್‌ಗಳಲ್ಲಿ ಈಗಾಗಲೇ 35 ವಾರ್ಡ್‌ಗಳು ಹಾಗೂ 144ರಲ್ಲಿ 93 ಗ್ರಾಪಂಗಳಲ್ಲಿ ಸಂವಿಧಾನ ಕುರಿತು ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಾಗಿದೆ. ಇನ್ನುಳಿದ ವಾರ್ಡ್‌ ಹಾಗೂ ಗ್ರಾಮಗಳಲ್ಲಿ ವಿಶೇಷ ಹಾಗೂ ವಿಭಿನ್ನ ರೀತಿಯಲ್ಲಿ ಸಂವಿಧಾನ ಜಾಗೃತಿಗೆ ಕ್ರಮ ಕೈಗೊಳ್ಳಲು ನಿರ್ಧರಿಸಿರುವುದಾಗಿ ತಿಳಿಸಿದರು.

ಧಾರವಾಡ ಜಿಲ್ಲೆ ಪ್ರಥಮ

ರಾಜ್ಯಾದ್ಯಂತ ಹಮ್ಮಿಕೊಂಡಿರುವ ಈ ಸಂವಿಧಾನ ಜಾಗೃತಿ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ವಿಶೇಷ ಹಾಗೂ ವಿಭಿನ್ನ ರೀತಿಯಲ್ಲಿ ಜಾಗೃತಿ ಮೂಡಿಸುವ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಪ್ರಚಾರ, ಜನರಿಂದ ಮೆಚ್ಚುಗೆ ಪಡೆದು ಕಳೆದ 2-3 ದಿನಗಳಿಂದ ಜಾಗೃತಿ ಕಾರ್ಯಕ್ರಮದಲ್ಲಿ ರಾಜ್ಯದಲ್ಲಿಯೇ ಧಾರವಾಡ ಜಿಲ್ಲೆಯು ಪ್ರಥಮ ಸ್ಥಾನದಲ್ಲಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಜನರಿಗೆ ತಲುಪಲು ಬೇಕಾದ ಅಂಶಗಳನ್ನು ಗಣನೆಗೆ ತಗೆದುಕೊಂಡು ಜಾಗೃತಿ ಕಾರ್ಯಕ್ರಮದಲ್ಲಿ ಅಳವಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ತಹಸೀಲ್ದಾರ್‌ರಾದ ಪ್ರಕಾಶ ನಾಶಿ, ಕಲಗೌಡ ಪಾಟೀಲ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು.