ಸಾರಾಂಶ
ಯಗಚಿ ಜಲಾಶಯದ ಸಮೀಪದಲ್ಲಿರುವ ನೆಟ್ಟೆಕೆರೆ ಗ್ರಾಮದ ಜನತೆ ಕುಡಿಯುವ ನೀರಿನ ಅಭಾವದಿಂದ ರೋಸಿ ಹೋಗಿದ್ದಾರೆ. ಗ್ರಾಮದಲ್ಲಿ ಐದಾರು ಕೊಳವೆಬಾವಿಗಳಿದ್ದರೂ ನೀರಿನ ಅಭಾವ ತಲೆ ಎತ್ತಿದೆ. ಗ್ರಾಮದಲ್ಲಿ ಜಾತ್ರೆ ಸಂದರ್ಭದಲ್ಲಿ ಹೆಚ್ಚಿನ ನೀರಿನ ಅವಶ್ಯವಿರುವ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಸಬೂಬು ಹೇಳುತ್ತಾ ಯಾವುದೇ ಕೆಲಸ ಮಾಡುತ್ತಿಲ್ಲ.
ಕನ್ನಡಪ್ರಭ ವಾರ್ತೆ ಬೇಲೂರು
ತಾಲೂಕಿನ ಇಬ್ಬೀಡು ಗ್ರಾಪಂ ವ್ಯಾಪ್ತಿಯಲ್ಲಿನ ನೆಟ್ಟೆಕೆರೆ ಗ್ರಾಮದಲ್ಲಿ ಕುಡಿಯುವ ನೀರಿಗೆ ತೀವ್ರ ಅಭಾವ ಉಂಟಾಗಿದೆ. ಟ್ಯಾಂಕರ್ ಮೂಲಕವೂ ನೀರನ್ನು ಸರಿಯಾಗಿ ಸರಬರಾಜು ಮಾಡುತ್ತಿಲ್ಲ, ಕೇಳಿದರೆ ಅಧಿಕಾರಿಗಳು ಇಲ್ಲ-ಸಲ್ಲದ ಸಬೂಬು ಹೇಳುತ್ತಾರೆ ಎಂದು ನೆಟ್ಟೆಕೆರೆ ಗ್ರಾಮಸ್ಥರಾದ ಪ್ರಸಾದ್, ಕೇಶವಮೂರ್ತಿ, ಸುರೇಶ್, ಪುಟ್ಟಸ್ವಾಮಿ ಅಳಲು ತೋಡಿಕೊಂಡರು. ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಯಗಚಿ ಜಲಾಶಯದ ಸಮೀಪದಲ್ಲಿರುವ ನೆಟ್ಟೆಕೆರೆ ಗ್ರಾಮದ ಜನತೆ ಕುಡಿಯುವ ನೀರಿನ ಅಭಾವದಿಂದ ರೋಸಿ ಹೋಗಿದ್ದಾರೆ. ಗ್ರಾಮದಲ್ಲಿ ಐದಾರು ಕೊಳವೆಬಾವಿಗಳಿದ್ದರೂ ನೀರಿನ ಅಭಾವ ತಲೆ ಎತ್ತಿದೆ. ಗ್ರಾಮದಲ್ಲಿ ಜಾತ್ರೆ ಸಂದರ್ಭದಲ್ಲಿ ಹೆಚ್ಚಿನ ನೀರಿನ ಅವಶ್ಯವಿರುವ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಸಬೂಬು ಹೇಳುತ್ತಾ ಯಾವುದೇ ಕೆಲಸ ಮಾಡುತ್ತಿಲ್ಲ, ನಮಗೆ ಸೂಕ್ತ ರೀತಿಯಲ್ಲಿ ಕುಡಿಯುವ ನೀರನ್ನು ನೀಡಬೇಕಿದೆ. ಸರ್ಕಾರ ಈಗಾಗಲೇ ಜಿಲ್ಲಾಡಳಿತಕ್ಕೆ ಅಧಿಕಾರ ನೀಡಿದ್ದು, ಕುಡಿಯುವ ನೀರಿನ ಅಭಾವ ಉಂಟಾಗದಂತೆ ಕ್ರಮವಹಿಸಬೇಕು ಎಂದರೂ ಕೂಡ ಅಧಿಕಾರಿಗಳು ಮೀನ-ಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿದರು. ಇಬ್ಬೀಡು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ್ ಮಾತನಾಡಿ, ಇಬ್ಬೀಡು ಗ್ರಾಮ ಪಂಚಾಯಿತಿಯ ಚಿಲ್ಕೂರು,ಸುರಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವದ ಹಿನ್ನೆಲೆಯಲ್ಲಿ ಖಾಸಗಿ ಕೊಳವೆಬಾವಿಗಳಿಂದ ನೀರು ಪೂರೈಸಲಾಗುತ್ತಿದೆ. ಅಂತೆಯೇ ತೆಂಡೆಕೆರೆ ಗ್ರಾಮಕ್ಕೂ ಖಾಸಗಿ ಮತ್ತು ಟ್ಯಾಂಕರ್ ಮೂಲಕ ವ್ಯವಸ್ಥೆ ಮಾಡಿದೆ. ಆದರೆ ನೆಟ್ಟೆಕೆರೆ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜಾತ್ರೆ ಸಂದರ್ಭದಲ್ಲಿ ಅಭಾವ ಉಂಟಾಗಿದೆ.ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.------