ಮಕ್ಕಳಿಗೆ ನೀಡುವ ಶಿಕ್ಷಣವೇ ಪಾಲಕರು ನೀಡಬಹುದಾದ ದೊಡ್ಡ ಆಸ್ತಿ.

ಸರ್ಕಾರಿ ಪಿಯು ಕಾಲೇಜಿನ ೫ ಕೊಠಡಿ, ವಿವಿಐಪಿ ಐಬಿ ಉದ್ಘಾಟಿಸಿದ ಮಂಕಾಳ ವೈದ್ಯ

ಕನ್ನಡಪ್ರಭ ವಾರ್ತೆ ಕುಮಟಾ

ಯಾವುದೇ ಕೊರತೆಗಿಂತ ಶಿಕ್ಷಣದ ಕೊರತೆ ದೊಡ್ಡದು. ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು. ಮಕ್ಕಳಿಗೆ ನೀಡುವ ಶಿಕ್ಷಣವೇ ಪಾಲಕರು ನೀಡಬಹುದಾದ ದೊಡ್ಡ ಆಸ್ತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.

ನೂತನ ನಿರ್ಮಿತ ಕಾಮಗಾರಿಗಳಾದ ಬೊಗರಿಬೈಲ್ ಸೇತುವೆ, ನೆಲ್ಲಿಕೇರಿ ಹನುಮಂತ ಬೆಣ್ಣೆ ಸರ್ಕಾರಿ ಪಿಯು ಕಾಲೇಜಿನ ೫ ಕೊಠಡಿಗಳು, ನೆಲ್ಲಿಕೇರಿ ಕೆಪಿಎಸ್ ಪ್ರಾಥಮಿಕ ವಿಭಾಗದ ನೂತನ ಕಟ್ಟಡ ಹಾಗೂ ವಿವಿಐಪಿ ಐಬಿಯನ್ನು ಮಂಗಳವಾರ ಉದ್ಘಾಟಿಸಿದರು.

ಶಿಕ್ಷಣದ ಜತೆ ಸಂಸ್ಕಾರವೂ ಅಗತ್ಯ. ನೆಲ್ಲಿಕೇರಿ ಕೆಪಿಎಸ್‌ನಲ್ಲಿ ಅತಿಹೆಚ್ಚು ಮಕ್ಕಳು ಇರುವುದರಿಂದ ಹೆಚ್ಚಿನ ಶೌಚಾಲಯ, ಬಾವಿ, ಪಂಪ್ ಸೆಟ್, ಉತ್ತಮ ಕುಡಿಯುವ ನೀರು, ಇಂಟರ್ ಲಾಕ್ ಅಳವಡಿಕೆಗೆ ಪಾಲಕರು ನೀಡಿದ ಮನವಿಗೆ ನಾನು ಮತ್ತು ಶಾಸಕ ದಿನಕರ ಶೆಟ್ಟಿ ಸೇರಿ ಎಲ್ಲಾ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸುತ್ತೇವೆ ಎಂದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ಒಂದು ಕಾಲದ ನೆಲ್ಲಿಕೇರಿ ಶಾಲೆ ಇಂದು ಎಜುಕೇಶನ್ ಹಬ್‌ನಂತಾಗಿ ಬೆಳೆದಿದೆ. ಇದು ನನ್ನೊಬ್ಬನ ಸಾಧನೆ ಅಲ್ಲ, ಅನೇಕರ ಸಹಯೋಗವಿದೆ. ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಟ್ಟಿದ್ದೇನೆ. ಬೊಗರಿಬೈಲ್ ಮತ್ತು ಗಂಗಾವಳಿ ಸೇತುವೆಗೆ ಹಣ ಬಿಡುಗಡೆಗೆ ಸಾಕಷ್ಟು ಪ್ರಯತ್ನ ಮಾಡಿದ್ದೇನೆ. ಈಗ ಕತಗಾಲದಿಂದ ಬೊಗರಿಬೈಲ್ ಸೇತುವೆ ಮೂಲಕ ಹೊನ್ನಾವರಕ್ಕೆ ಬಸ್ ಬಿಟ್ಟರೆ ೧೫-೨೦ ಕಿಮೀ ಉಳಿತಾಯವಾಗಲಿದೆ. ಈ ಮಾರ್ಗದಲ್ಲಿ ಬಸ್ ಓಡಿಸಲು ಸಾರಿಗೆ ಸಚಿವರಿಗೆ ಮನವಿ ನೀಡಿದ್ದೇನೆ. ಹಿಂದೆ ಗಂಗಾವಳಿ ಸೇತುವೆ ಮೇಲೆ ಬಸ್ ಓಡುವಂತೆ ಮಾಡಿದ್ದೆ, ಆದರೆ ಈಗ ಬದಲಾದ ಸರ್ಕಾರದಲ್ಲಿ ಬಸ್ ಬಂದ್ ಮಾಡಿದ್ದಾರೆ. ಈ ಬಗ್ಗೆ ಅಧಿವೇಶನದಲ್ಲಿ ಪ್ರಶ್ನಿಸುತ್ತೇನೆ ಎಂದರು.

ಪ್ರಾಚಾರ್ಯ ಸತೀಶ ನಾಯ್ಕ ಸ್ವಾಗತಿಸಿದರು. ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ನಿತ್ಯಾನಂದ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ, ತಾಪಂ ಇಒ ರಾಜೇಂದ್ರ ಎಲ್. ಭಟ್, ಡಿಡಿಪಿಐ ಲಲಿತಾ ಎಂ. ನಾಯ್ಕ, ಡಯಟ್ ಪ್ರಾಚಾರ್ಯ ಎನ್.ಆರ್. ಹೆಗಡೆ, ಬಿಇಒ ಉದಯ ನಾಯ್ಕ, ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಶಾಂತಿ ಅಡಿಗುಂಡಿ, ಪ್ರೌಢ ವಿಭಾಗದ ಮುಖ್ಯಶಿಕ್ಷಕ ಟಿ.ಎನ್. ಗೌಡ, ಜಿಪಂ ಎಇಇ ಕಲ್ಪನಾ ವಾಗ್ಮೋರೆ ಇತರರು ಇದ್ದರು.