ಕನ್ನಡಿಗರಲ್ಲಿ ಅಭಿಮಾನದ ಕೊರತೆಯೇ ದೊಡ್ಡ ಸಮಸ್ಯೆ

| Published : Dec 01 2024, 01:30 AM IST

ಸಾರಾಂಶ

ಕನ್ನಡಿಗರಲ್ಲಿರುವ ನಿರಾಭಿಮಾನದಿಂದ ಕನ್ನಡಕ್ಕೆ ಹೆಚ್ಚು ಸಮಸ್ಯೆ ಎದುರಾಗಿದೆ ಎಂದು ನಾಡೋಜ ಡಾ ಗೊ.ರು.ಚನ್ನಬಸಪ್ಪ ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ಕನ್ನಡಿಗರಲ್ಲಿರುವ ನಿರಾಭಿಮಾನದಿಂದ ಕನ್ನಡಕ್ಕೆ ಹೆಚ್ಚು ಸಮಸ್ಯೆ ಎದುರಾಗಿದೆ ಎಂದು ನಾಡೋಜ ಡಾ ಗೊ.ರು.ಚನ್ನಬಸಪ್ಪ ಕಳವಳ ವ್ಯಕ್ತಪಡಿಸಿದರು.ಅವರು ನಗರದ ಬಿಕೆಡಿಬಿ ಕಚೇರಿ ಅತಿಥಿಗೃಹದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಪ್ರಯುಕ್ತ ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ನಡೆದ ಅಭಿನಂದನೆ ಹಾಗೂ ಸಂವಾದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕನ್ನಡ ನಾಡಿಗೆ ವಲಸಿಗರು ಬರುವುದು ಹಾಗೂ ಅವರು ಕನ್ನಡ ಕಲಿಯದೇ ಇರುವುದು ಒಂದು ಸಮಸ್ಯೆಯಾದರೆ, ಕರ್ನಾಟಕ ಏಕೀಕರಣವಾಗಿ ಅದೆಷ್ಟೋ ವರ್ಷಗಳಾಗಿವೆ. ಇತ್ಯರ್ಥವಾಗದೇ ಇರುವ ಗಡಿ ಸಮಸ್ಯೆ, ನೀರಿನ ಸಮಸ್ಯೆ ಹಾಗೇಯೇ ಉಳಿದಿವೆ. ಅಂತಾರಾಜ್ಯ ಸಮಸ್ಯೆಗಳನ್ನು ನೀಗಿಸಲು ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ನೀತಿ ಜಾರಿಗೆ ಬರುವ ಅಗತ್ಯವಿದೆ ಎಂದರು.

ಕನ್ನಡ ಭಾಷೆ ಮತ್ತು ಕನ್ನಡಿಗರಿಗೆ ಉದ್ಯೋಗಾವಕಾಶ ಈಗ ಬಹು ದೊಡ್ಡ ಪ್ರಶ್ನೆಯಾಗಿದೆ. ಕನ್ನಡ ಭಾಷೆ ಮತ್ತು ಕನ್ನಡಿಗರ ಸವಾಲುಗಳ ಕುರಿತು ಹಲವಾರು ವರದಿಗಳು ಮತ್ತು ಶಿಫಾರಸ್ಸು ಸರ್ಕಾರದಲ್ಲಿ ಅಂಗೀಕೃತವಾಗಿವೆ ಆದರೆ ಅನುಷ್ಠಾನಕ್ಕೆ ಬಂದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದ ನಾವು ಸರ್ಕಾರದ ಮೇಲೆ ಒತ್ತಡ ತರಬೇಕು. ಕನ್ನಡದ ಕೆಲಸಗಳು ನೆರವೇರಲು ಚಳುವಳಿ ಹಾಗೂ ಹೋರಾಟ ನಡೆಸುತ್ತಲೇ ಇರಬೇಕು ಎಂದರು.ಹಿರಿಯ ತಲೆಮಾರಿನ ವಿದ್ವಾಂಸರು ಮಾಡುವ ಸಂಶೋಧನೆ ಒಂದು ನಿರ್ಧಿಷ್ಟ ಉದ್ದೇಶ ಹೊಂದಿರುತ್ತಿತ್ತು. ಜನರ ಅರಿವಿಗೆ ಇರದ, ಅವಜ್ಞೆಗೊಳಗಾದ ಸಂಗತಿಗಳು ಜನರಿಗೆ ತಿಳಿಸುವ ಹೊಣೆಗಾರಿಕೆಯನ್ನು ವಿದ್ವಾಂಸರು ಹೊತ್ತು ಶ್ರಮಿಸುತ್ತಿದ್ದರು. ಹೊಸ ತಲೆಮಾರಿನ ಸಂಶೋಧಕರು ಹೊಸ ವಿಷಯ ದಾಟಿಸುವ, ದಾಖಲಿಸುವ ಕೆಲಸ ಹೆಚ್ಚು ಪ್ರಜ್ಞಾಪೂರ್ವಕವಾಗಿ ಮಾಡಬೇಕಿದೆ ಎಂದರು.ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ನೂತನ ಅನುಭವ ಮಂಟಪವು ವಚನ ವಿಶ್ವವಿದ್ಯಾಲಯದ ಕೇಂದ್ರವಾಗಬೇಕು. ಆ ಮೂಲಕ ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ತೆರೆದುಕೊಳ್ಳುತ್ತದೆ ಎಂಬ ಆಶಯ ವ್ಯಕ್ತಪಡಿಸಿದರು.ಪ್ರತಿಷ್ಠಾನದ ನಿರ್ದೇಶಕ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, 1974ರಲ್ಲಿ ಡಾ. ಜಯದೇವಿತಾಯಿ ಲಿಗಾಡೆ ಅವರು ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಈಗ 2024ರಲ್ಲಿ ಗೊ.ರು.ಚ ಅವರು ಅಲ್ಲಿಯೇ ಸಮ್ಮೇಳನದ ಅಧ್ಯಕ್ಷತೆರಾದದ್ದು ಅಭಿಮಾನದ ಸಂಗತಿ. ಈ ನೆಲದ ಅಸ್ಮಿತೆಗಾಗಿ ದುಡಿದ ಈ ಇಬ್ಬರೂ ಮಹಾನ್‌ ಚೇತನರಾಗಿದ್ದಾರೆ ಎಂದರು.ಅನುಭವ ಮಂಟಪ ಟ್ರಸ್ಟ್‌ ಅಧ್ಯಕ್ಷರಾದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು, ಡಾ.ಗಂಗಾಂಬಿಕಾ ಅಕ್ಕ , ಹಿರಿಯ ವಿದ್ವಾಂಸ ಡಾ.ವೀರಣ್ಣ ರಾಜೂರ, ಗುಲಬರ್ಗಾ ವಿಶ್ವ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಪ್ರೊ.ಜಯಶ್ರೀ ದಂಡೆ, ಹಿರಿಯ ಸಾಹಿತಿ ಡಾ.ಕಾಶಿನಾಥ ಅಂಬಲಗೆ, ಯೋಗೇಶ ಮಾಸ್ಟರ್‌, ಅಶೋಕ ದ್ಯಾಮ್ಲೂರು, ಶಿವರಾಜ್ ನರಶೆಟ್ಟೆ, ಪ್ರತಿಷ್ಠಾನದ ಅಧ್ಯಕ್ಷ ಶ್ರೀಶೈಲ ಹುಡೇದ, ಧರ್ಮಣ್ಣ ಚಿತ್ತಾ, ರಾಜಶೇಖರ ಬಿರಾದಾರ, ಮಹಾದೇವಪ್ಪ ಇಜಾರೆ, ಡಾ. ಬಾಬಾಸಾಹೇಬ ಗಡ್ಡೆ, ನಾಗರಾಜ್ ಮಾನೆ, ಕಲ್ಯಾಣರಾವ ಮದರಗಾಂವಕರ, ಧನರಾಜ್ ರಾಜೋಳೆ ಮತ್ತಿತರರಿದ್ದರು.ಪ್ರತಿಷ್ಠಾನದ ಕಾರ್ಯದರ್ಶಿ ದೇವೇಂದ್ರ ಬರಗಾಲೆ ಸ್ವಾಗತಿಸಿದರು. ಚಂದ್ರಕಾಂತ ಅಕ್ಕಣ್ಣಾ ವಂದಿಸಿದರು.