ಸಾರಾಂಶ
ಕಮಲಾಪುರ ಸೇರಿದಂತೆ 60ಕ್ಕೂ ಹೆಚ್ಚು ಗ್ರಾಮಗಳ 25 ಹಳ್ಳಿಗಳು, 25 ತಾಂಡಗಳು, ಪಟ್ಟಣದ ಹತ್ತು ಸಾವಿರ ಜನಸಂಖ್ಯೆ ಸೇರಿದಂತೆ 15ರಿಂದ 20 ಸಾವಿರ ಜನರು ಚಿಕಿತ್ಸೆಗೆ ಇದೇ ಆಸ್ಪತ್ರೆ ಅವಲಂಬಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕಮಲಾಪುರ
ಕಮಲಾಪುರ ಆಸ್ಪತ್ರೆಯಲ್ಲಿ ಮೂಲ ಸೌಕರ್ಯಗಳಿಲ್ಲದೆ ರೋಗಿಗಳು ನಿತ್ಯ ಪರದಾಡುವಂತಾಗಿದ್ದು, ಕಮಲಾಪುರ ಸೇರಿದಂತೆ 60ಕ್ಕೂ ಹೆಚ್ಚು ಗ್ರಾಮಗಳ 25 ಹಳ್ಳಿಗಳು, 25 ತಾಂಡಗಳು, ಪಟ್ಟಣದ ಹತ್ತು ಸಾವಿರ ಜನಸಂಖ್ಯೆ ಸೇರಿದಂತೆ 15ರಿಂದ 20 ಸಾವಿರ ಜನರು ಚಿಕಿತ್ಸೆಗೆ ಇದೇ ಆಸ್ಪತ್ರೆ ಅವಲಂಬಿಸಿದ್ದಾರೆ.ಆದರೆ ಸಿಬ್ಬಂದಿ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬರುವುದಿಲ್ಲ. ರೋಗಿಗಳು ಕೇಳಿದರೆ ಆಫೀಸ್ ಕೆಲಸದ ನಿಮಿತ್ತ ಲೇಟಾಗಿದೆ ಎಂದು ಸಿಬ್ಬಂದಿ ಸಿದ್ಧ ಉತ್ತರ ನೀಡುತ್ತಾರೆ.
ಆಸ್ಪತ್ರೆಯಲ್ಲಿ ಹಾಸಿಗೆ ವ್ಯವಸ್ಥೆ ಸರಿಯಾಗಿ ಇಲ್ಲ, ಚಿಕಿತ್ಸೆ ದೊರೆಯದ ಕಾರಣ ರೋಗಿಗಳು ಖಾಸಗಿ ಆಸ್ಪತ್ರೆಯತ್ತ ಮುಖ ಮಾಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ಒಬ್ಬರೇ ವೈದ್ಯರಿದ್ದಾರೆ ಆದರೆ ಗರ್ಭಿಣಿಯರು, ಬಾಣತಿಯರು, ವೃದ್ಧರು, ಮಕ್ಕಳು ಸೇರಿದಂತೆ ಬಡ ಕುಟುಂಬಗಳು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದರೆ ಸಣ್ಣ ಪುಟ್ಟ ಗಾಯಗಳಾದರೂ ಚಿಕಿತ್ಸೆ ನೀಡದೆ ಕಲಬುರಗಿಯಂತಹ ನಗರಗಳಿಗೆ ಹೋಗುವಂತೆ ಹೇಳುತ್ತಾರೆ. ರೋಗಿಗಳಿಗೆ ಸಣ್ಣಪುಟ್ಟ ಗಾಯಗಳಾದರೂ ಖಾಸಗಿ ಆಸ್ಪತ್ರೆಯಿಂದ ಔಷಧಿ ತರಿಸುವುದು ಅನಿವಾರ್ಯವಾಗಿದೆ.ಸಮಯಕ್ಕೆ ವೈದ್ಯರು ಸಿಗಲ್ಲ:
ಆಸ್ಪತ್ರೆಗೆ ಪ್ರತಿದಿನ 200 ಹೆಚ್ಚು ಹೊರರೋಗಿಗಳು ಮತ್ತು 30ಕ್ಕೂ ಹೆಚ್ಚು ಜನ ಒಳರೋಗಿಗಳು ಚಿಕಿತ್ಸೆ ಬರುತ್ತಾರೆ, ಮಾಸಿಕ 200 ಹೆಚ್ಚು ಜನರು ಮಲೇರಿಯ ತಪಾಸಣೆ, ರಕ್ತ ಪರಿಶೀಲನೆ ಮಾಡಿಕೊಳ್ಳುವವರು, ಪ್ರತಿ ತಿಂಗಳು ಸುಮಾರು 50ಕ್ಕೂ ಹೆಚ್ಚು ಗರ್ಭಿಣಿಯರು ತಪಾಸಣೆಗೆ ಬರುವರು, ಆದರೆ ಹೆರಿಗೆ ಸಮಯದಲ್ಲಿ ವೈದ್ಯರು ಕಲಬುರಗಿ ನಗರದ ಆಸ್ಪತ್ರೆಗೆ ಹೋಗಲು ಸೂಚಿಸುತ್ತಿರುವುದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ. ಹಾಗೆಯೇ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕುಡಿಯಲು ಶುದ್ಧ ನೀರಿನ ಕೊರತೆ, ಶೌಚಾಲಯಕ್ಕೆ ನೀರಿನ ಕೊರತೆ ಇರುವುದರಿಂದ ಕಾರಣ ಖಾಸಗಿ ಆಸ್ಪತ್ರೆ ಕಡೆಗೆ ರೋಗಿಗಳು ಮುಖ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.ಆಸ್ಪತ್ರೆಯಲ್ಲಿ ಕೇವಲ ನಾಲ್ಕು ಜನ ಸಿಬ್ಬಂದಿಗಳಿದ್ದು ಒಬ್ಬರು ವೈದ್ಯರಿದ್ದಾರೆ. ಅಪಘಾತ ದಂತಹ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಲು ವೈದ್ಯರು ಇರುವುದಿಲ್ಲ ಆದ್ದರಿಂದ ರೋಗಿಗಳಿಗೆ ಮತ್ತಷ್ಟು ತೊಂದರೆಯಾಗುತ್ತಿದೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೊಳಿಸಬೇಕು. ಆಸ್ಪತ್ರೆ ಸುಸಜ್ಜಿತ ಕಟ್ಟಡ ಸೇರಿದಂತೆ ಇನ್ನಿತರ ಮೌಲ್ಯ ಸೌಕರ್ಯಗಳು ಕಲ್ಪಿಸಬೇಕು. ಹೆಚ್ಚಿನ ವೈದ್ಯರನ್ನು ನಿಯೋಜಿಸಬೇಕು ಎಂದು ಆಸ್ಪತ್ರೆ ಹೆಚ್ಚಿನ ಪ್ರಮಾಣದಲ್ಲಿ ಔಷಧಿ ಸರಬರಾಜು ಮಾಡಬೇಕು ಎಂದು ಗ್ರಾಮಸ್ಥರಾದ ಸಂತೋಷ್ ರಾಂಪುರ, ನಟರಾಜ ಕಲ್ಯಾಣ್, ಕಲ್ಲಪ್ಪ ಪೂಜಾರಿ, ಶರಣು ಗೌರೆ, ಸುಭಾಷ ಓಕಳಿ, ಮಲ್ಲು ಹಳ್ಳಿ, ಜೈಕುಮಾರ್ ಜೈಕುಮಾರ ಒತ್ತಾಯಿಸಿದ್ದಾರೆ.ಇನ್ನು ಕಾಂಗ್ರೆಸ್ ಮುಖಂಡ ಗುರುರಾಜ ಮಾಟೂರ್ ಈ ಕುರಿತು ಕನ್ನಡಪ್ರಭ ಜೊತೆ ಮಾತನಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 18 ಸಿಬ್ಬಂದಿಗಳಿರಬೇಕು, ಸಿಬ್ಬಂದಿ ಕೊರತೆ ಬಗ್ಗೆ ಮೇಲೆ ಅಧಿಕಾರಿಗಳಿಗೆ ಐದಾರು ಬಾರಿ ಜಿಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ ಆದರೂ ಸಿಬ್ಬಂದಿ ನೇಮಿಸುತ್ತಿಲ್ಲವೆಂದು ಬೇಸರಿಸಿದ್ದಾರೆ.