ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ ಮೂಡುಬಿದಿರೆ ತಾಲೂಕು ಕೇಂದ್ರವಾದರೂ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪೂರ್ಣಕಾಲಿಕ ವೈದ್ಯರಿಲ್ಲ. ದಂತ ವೈದ್ಯರೇ ಸದ್ಯಕ್ಕೆ ಪ್ರಮುಖ ವೈದ್ಯರಾಗಿದ್ದಾರೆ. ವರಿಂದ ಎಲ್ಲವೂ ಸಾಧ್ಯವಿಲ್ಲ. ಬಡ ಜನರಿಗೆ ಸೇವೆ ಒದಗಿಸಬೇಕಾದ ಈ ಸರ್ಕಾರಿ ಆಸ್ಪತ್ರೆಯಲ್ಲಿ ಪೂರ್ಣಕಾಲಿಕ ವೈದ್ಯರಿಲ್ಲದಿರುವುದು ನಮಗೆ ಶೇಮ್, ಈ ಬಗ್ಗೆ ನಿರ್ಣಯ ಕೈಗೊಂಡು ಆರೋಗ್ಯ ಸಚಿವರು, ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾಧಿಕಾರಿಯವರಿಗೆ ಪತ್ರ ಬರೆಯಬೇಕು ಎಂಬ ಆಗ್ರಹ ಪುರಸಭೆ ಸಭೆಯಲ್ಲಿ ಕೇಳಿಬಂತು.
ಮೂಡುಬಿದಿರೆ ಪುರಸಭೆ ಸಾಮಾನ್ಯ ಸಭೆ ಮಂಗಳವಾರ ಪುರಸಭಾ ಅಧ್ಯಕ್ಷೆ ಜಯಶ್ರೀ ಅವರು ಅಧ್ಯಕ್ಷತೆಯಲ್ಲಿ ನಡೆಯಿತು. ಸದಸ್ಯ ಕೊರಗಪ್ಪ ಅವರು ಸಭೆಯಲ್ಲಿ ವೈದ್ಯರ ಕೊರತೆಯ ಬಗ್ಗೆ ಪ್ರಸ್ತಾಪಿಸಿದಾಗ ಇತರ ಸದಸ್ಯರೂ ಅದಕ್ಕೆ ಧ್ವನಿಗೂಡಿಸಿದರು.ಒಂದು ಪೋಸ್ಟ್ ಮಾರ್ಟಮ್ ಮಾಡಬೇಕಾದರೂ ಪಕ್ಕದ ಆಸ್ಪತ್ರೆಗಳ ವೈದ್ಯರನ್ನು ಕಾಯಬೇಕು, ಬೆಳಗ್ಗೆ ಶವವನ್ನು ಶವಾಗಾರದಲ್ಲಿಟ್ಟು ರಾತ್ರಿವರೆಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸದಸ್ಯ ಪುರಂದರ ದೇವಾಡಿಗ ಹೇಳಿದರು.
ಹಿಂದೆ ಶಶಿಕಲಾ ಮೇಡಂ ಇರುವಾಗ ಬಡಜನರಿಗೆ ಒಳ್ಳೆಯ ಸೇವೆ ಸಿಗುತ್ತಿತ್ತು, ಅವರು ಹೋದ ಬಳಿಕ ಆಸ್ಪತ್ರೆಗೆ ಪೂರ್ಣಕಾಲಿಕ ವೈದ್ಯರು ಬರಲಿಲ್ಲ, ಬಂದರೂ ಉನ್ನತ ವ್ಯಾಸಂಗಕ್ಕಾಗಿ ಹೋಗಿದ್ದಾರೆ, ಹೀಗಾದರೆ ಬಡರೋಗಿಗಳು ಎಲ್ಲಿಗೆ ಹೋಗಬೇಕು ? ಎಂದು ಸುರೇಶ್ ಕೋಟ್ಯಾನ್ ಪ್ರಶ್ನಿಸಿದರು.ಸದಸ್ಯರ ಆಗ್ರಹದಂತೆ ಆರೋಗ್ಯ ಸಚಿವರು, ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು ಪೂರ್ಣಕಾಲಿಕ ವೈದ್ಯರ ನೇಮಕಾತಿಗೆ ಆಗ್ರಹಿಸಲು ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಮಾಜಿ ಅಧ್ಯಕ್ಷರಾದ ಪ್ರಸಾದ್ ಕುಮಾರ್, ರೂಪಾ ಸಂತೋಷ್ ಶೆಟ್ಟಿ, ಸದಸ್ಯರಾದ ಪಿ.ಕೆ. ಥೋಮಸ್, ಸುರೇಶ್ ಪ್ರಭು, ಇಕ್ಬಾಲ್ ಕರೀಮ್, ಜೊಸ್ಸಿ ಮಿನೇಜಸ್, ಮಮತಾ ಆನಂದ್, ಶಕುಂತಲಾ ಹರೀಶ್, ಸೌಮ್ಯ ಸಂದೀಪ್, ದಿವ್ಯ ಜಗದೀಶ್, ಸುಜಾತ, ರಾಜೇಶ್ ನಾಯ್ಕ್ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.