ಸಾರಾಂಶ
ರವಿ ಮೇಗಳಮನಿ
ಕನ್ನಡಪ್ರಭ ವಾರ್ತೆ ಹಿರೇಕೆರೂರತಾಲೂಕಿನ ಬಡ ಜನರ ಹಸಿವು ನೀಗಿಸುವುದಕ್ಕಾಗಿ ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಸ್ಥಾಪಿಸಿಲಾಗಿದ್ದ ಇಂದಿರಾ ಕ್ಯಾಂಟೀನ್ ಅನುದಾನದ ಕೊರತೆಯಿಂದ ಬಂದ್ ಆಗಿದೆ.
ಪಟ್ಟಣಕ್ಕೆ ದೂರದ ಊರಿನಿಂದ ಕೆಲಸಕ್ಕಾಗಿ ಬರುವ ಸಾರ್ವಜನಿಕರು ಪ್ರತಿ ದಿನ ಊಟ, ಉಪಾಹಾರಕ್ಕಾಗಿ ಇಂದಿರಾ ಕ್ಯಾಂಟೀನ್ ಅನ್ನೇ ಅವಲಂಬಿಸಿದ್ದರು. ಆದರೆ ಈಗ ಅದು ಬಂದ್ ಆಗಿದ್ದು, ಇದರಿಂದ ಜನರು ಬೇಸತ್ತು ಹೋಗಿದ್ದಾರೆ. ಅದರಲ್ಲೂ ಸುತ್ತಮುತ್ತಲಿನ ಹಳ್ಳಿಗಳಿಂದ ಸರ್ಕಾರಿ ಕಚೇರಿ ಕೆಲಸಕ್ಕೆ ಬರುವ ಬಡಜನರು ಇಂದಿರಾ ಕ್ಯಾಂಟೀನ್ ನಂಬಿಯೇ ಬರುತ್ತಿದ್ದು, ವಾಪಸ್ ನಿರಾಸೆಯಿಂದ ತೆರಳುವಂತಾಗಿದೆ.ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಊಟ, ಉಪಾಹಾರ ಪೂರೈಸುವ ನಿಟ್ಟಿನಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿದೆ. ಸರ್ಕಾರ ಲಕ್ಷಾಂತರ ರು. ಖರ್ಚು ಮಾಡಿ ಮೂಲಭೂತ ಸೌಕರ್ಯ ಒದಗಿಸಿದೆ. ಆದರೆ ಇಲ್ಲಿ ಅನುದಾನ ಸಿಗದೆ, ಸರಿಯಾದ ನಿರ್ವಹಣೆ ಇಲ್ಲದೇ ಕಾಂಟೀನ್ ಅವ್ಯವಸ್ಥೆಯ ಆಗರವಾಗಿತ್ತು. ಜತೆಗೆ ಅಡುಗೆ ಸಿಬ್ಬಂದಿಗೆ ವೇತನ ಪಾವತಿಸದ ಹಿನ್ನೆಲೆ ಕ್ಯಾಂಟೀನ್‌ನ ಬಾಗಿಲು ಮುಚ್ಚಲಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇಂದಿರಾ ಕ್ಯಾಂಟೀನ್‌ಗಳಿಗೆ ಹೊಸ ರೂಪ ಕೊಡಲು ಮುಂದಾಗಿದೆ. ಆದರೆ ಹಿರೇಕೆರೂರ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಇದ್ದರೂ ಇಲ್ಲದಂತಾಗಿದೆ. ಬಡವರಿಗೆ ಅನುಕೂಲವಾಗುವ ಬದಲು ನೆಪ ಮಾತ್ರಕ್ಕೆ ಕ್ಯಾಂಟೀನ್ ಇದೆ ಎನ್ನುವ ಹಾಗೇ ಆಗಿದೆ.ಬಡವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶಾಸಕರು, ಸಂಬಂಧಿಸಿದ ಅಧಿಕಾರಿಗಳು ಕ್ಯಾಂಟೀನ್ ಪುನಾರಂಭದ ಬಗ್ಗೆ ಕೂಡಲೇ ಗಮನ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ನಿರ್ವಹಣೆ ಸರಿಯಾಗಿ ಮಾಡದೇ ಇರುವುದರಿಂದ ಸಾರ್ವಜನಿಕರಿಗೆ ಇಂದಿರಾ ಕ್ಯಾಂಟೀನ್ ಸದುಪಯೋಗವಾಗುತ್ತಿಲ್ಲ. ಇಲ್ಲಿ ಗುಣಮಟ್ಟದ ಅಡುಗೆ ಮತ್ತು ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ರಾಜ್ಯ ಸರ್ಕಾರ ರಾಜ್ಯದ ವಿವಿಧೆಡೆ ಇಂದಿರಾ ಕ್ಯಾಂಟೀನ್ ಸ್ಥಾಪಿಸುವ ಬಗ್ಗೆ ಹೆಚ್ಚು ಕಾಳಜಿ ತೊರುತ್ತಿದೆ. ಆದರೆ ಪಟ್ಟಣದ ಕ್ಯಾಂಟೀನ್ ಬಂದ್ ಮಾಡಲಾಗಿದೆ ಎನ್ನುತ್ತಾರೆ ಕರವೇ ಜಿಲ್ಲಾಧ್ಯಕ್ಷ ಗಿರೀಶ್ ಬಾರ್ಕಿ.ಈ ಹಿಂದಿರುವ ಗುತ್ತಿಗೆದಾರರಿಗೆ ಸರ್ಕಾರದಿಂದ ಹಣ ಬರಬೇಕು. ಸದ್ಯ ಬೇರೆಯವರಿಗೆ ಟೆಂಡರ್ ಆಗಿದೆ. ಅಡುಗೆ ಮಾಡುವವರ ವೇತನವನ್ನು ಗುತ್ತಿಗೆದಾರರು ನೀಡಿಲ್ಲ. ಹಾಗಾಗಿ ಕ್ಯಾಂಟೀನ್ ಬಂದ್ ಮಾಡಲಾಗಿದೆ ಎನ್ನುತ್ತಾರೆ ಅಡುಗೆ ಸಿಬ್ಬಂದಿ ನವೀನಕುಮಾರ ಪೂಜಾರ.