ಸಾರಾಂಶ
ನರಸಿಂಹರಾಜಪುರ, ಪ್ರಸ್ತುತ ದೇಶದಲ್ಲಿ ಜಾತಿ, ಧರ್ಮಗಳ ಹೊಂದಾಣಿಕೆ ಕೊರತೆಯಿಂದಅಶಾಂತಿ ಸೃಷ್ಟಿಯಾಗುತ್ತಿದೆ ಎಂದು ಭದ್ರಾ ಕಾಲೋನಿ ಮೊಹಿದ್ದೀನ್ ಜುಮ್ಮಾ ಮಸೀದಿಯ ಧರ್ಮಗುರು ಹನೀಫ್ ಅಸದಿ ಹೇಳಿದರು.
- ಶೆಟ್ಟಿಕೊಪ್ಪದ ಭದ್ರಾ ಕಾಲೋನಿಯಲ್ಲಿ ಮಹಮ್ಮದ್ ಪೈಗಂಬರ್ ಅವರ1500 ನೇ ಜನ್ಮ ದಿನಾಚರಣೆ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರಪ್ರಸ್ತುತ ದೇಶದಲ್ಲಿ ಜಾತಿ, ಧರ್ಮಗಳ ಹೊಂದಾಣಿಕೆ ಕೊರತೆಯಿಂದಅಶಾಂತಿ ಸೃಷ್ಟಿಯಾಗುತ್ತಿದೆ ಎಂದು ಭದ್ರಾ ಕಾಲೋನಿ ಮೊಹಿದ್ದೀನ್ ಜುಮ್ಮಾ ಮಸೀದಿಯ ಧರ್ಮಗುರು ಹನೀಫ್ ಸಅದಿ ಹೇಳಿದರು.
ಶುಕ್ರವಾರ ತಾಲೂಕಿನ ಶೆಟ್ಟಿಕೊಪ್ಪ ಸಮೀಪದ ಭದ್ರಾ ಕಾಲೋನಿಯ ಮೊಹಿದ್ದೀನ್ ಜುಮ್ಮಾ ಮಸೀದಿಯಿಂದ ನಡೆದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ 1500 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಧರ್ಮ ಸಂದೇಶ ಸಾರಿ, ಪ್ರವಾದಿ ಮೊಹಮ್ಮದ್ ಪೈಗಂಬರ್‌ಅವರ ಸಂದೇಶಗಳು ಕೇವಲ ಮುಸ್ಲಿಂ ಸಮುದಾಯದವರಿಗೆ ಮಾತ್ರ ಸೀಮಿತವಾಗಿಲ್ಲ. ಇಡೀ ಮನುಕುಲದ ಏಳಿಗೆಗಾಗಿ ನೀಡಿದ ಸಂದೇಶಗಳಾಗಿವೆ. ಅವರ ಸಂದೇಶಗಳು ವಿಶ್ವಕ್ಕೇ ಮಾದರಿಯಾಗಿವೆ. ಅವರು ಅತ್ಯಂತ ಶಾಂತಿಪ್ರಿಯರು. ಸಮಾಜದಲ್ಲಿ ಜಾತಿ , ಧರ್ಮಗಳ ನಡುವೆ ಪರಸ್ಪರ ಹೊಂದಣಿಕೆಗಳು ಇಲ್ಲದೇ ಇದ್ದರೆ ಅಂತಹ ಸಮಾಜದಲ್ಲಿ ಶಾಂತಿ ನೆಲೆಸುವುದಿಲ್ಲ. ಪ್ರವಾದಿಗಳು ತೋರಿಸಿದ ಮಾರ್ಗದಲ್ಲೇ ಎಲ್ಲರೂ ನಡೆಬೇಕು, ಆಗ ಮಾತ್ರ ಜೀವನದಲ್ಲಿ ಶಾಂತಿ, ನೆಮ್ಮದಿ ದೊರಕುತ್ತದೆ ಎಂದರು.ಧರ್ಮಗುರು ಫರ್ವೀಜ್ ನಯಿಮಿ ಮಾತನಾಡಿ, ಪ್ರವಾದಿ ಪೈಗಂಬರ್ ಸಂದೇಶಗಳು ಅನುಭವದ ಸಂದೇಶಗಳಾಗಿವೆ. ತಮ್ಮ ಬದುಕಿನಲ್ಲಿ ನಡೆದ ಅನುಭವಗಳೇ ದಿವ್ಯ ಸಂದೇಶ. ಅವರು ದೈವಾಂಶ ಸಂಭೂತರು. ಪೈಗಂಬರ್ ಕಾರುಣ್ಯದ ಕಡಲಾಗಿದ್ದಾರೆ. ಶರಣರು, ಸಂತರು, ಪ್ರವಾದಿಗಳು ಮನುಕುಲದ ಆಸ್ತಿಗಳಾಗಿದ್ದಾರೆ ಎಂದರು.ಶೆಟ್ಟಿಕೊಪ್ಪದ ಭದ್ರಾ ಕಾಲೋನಿ ಮೊಹಿದ್ದೀನ್ ಜುಮ್ಮಾ ಮಸೀದಿಯಿಂದ ಮುಸಲ್ಮಾನ್ ಬಾಂಧವರು ಅಲಂಕಾರಗೊಂಡ ವಾಹನಗಳು, ಮಕ್ಕಳ ದಫ್ ನೃತ್ಯದೊಂದಿಗೆ , ಮೆರವಣಿಗೆ ಮಧ್ಯದಲ್ಲಿ ಪೈಗಂಬರರ ಸಂದೇಶ ಸಾರುವ ಗೀತೆ ಹಾಡುತ್ತಾ ಮೆರವಣಿಗೆ ನಡೆಸಿದರು. ನಂತರ ನವಗ್ರಾಮದ ಕ್ರಿಶ್ಚಿಯನ್ ಹಾಗೂ ಹಿಂದೂ ಧರ್ಮದವರೂ ಕೂಡ ಮೆರವಣಿಗೆಯಲ್ಲಿ ಬಂದ ಮಸಲ್ಮಾನ್ ಬಾಂಧವರಿಗೆ ಸಿಹಿ ಹಂಚಿದರು.ಈ ಸಂದರ್ಭದಲ್ಲಿ ಮೊಹಿದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಸುಲೇಮಾನ್, ಅಬೂಬಕರ್, ಅಬ್ದುಲ್ ರೆಹಮಾನ್, ಇಬ್ರಾಹಿಂ, ಮಹಮ್ಮದ್ ಹಸನಬ್ಬ, ಹನೀಫ್, ಖಾದರ್, ಸಾಧಿಕ್, ರಫೀಕ್, ಮೊಹಿದ್ದಿನ್ ಸಿರಾಜ್ ಮತ್ತಿತರರು ಉಪಸ್ಥಿತರಿದ್ದರು.