ಐತಿಹಾಸಿಕ ಪ್ರಜ್ಞೆಯ ಕೊರತೆ, ಸಂಶೋಧನೆ ಅಗತ್ಯ: ಪಾಡಿಗಾರ

| Published : Jun 14 2024, 01:02 AM IST

ಐತಿಹಾಸಿಕ ಪ್ರಜ್ಞೆಯ ಕೊರತೆ, ಸಂಶೋಧನೆ ಅಗತ್ಯ: ಪಾಡಿಗಾರ
Share this Article
  • FB
  • TW
  • Linkdin
  • Email

ಸಾರಾಂಶ

ಸಾಂಸ್ಕೃತಿಕವಾಗಿ, ವಾಸ್ತು ನಿರ್ಮಾಣದ ದೃಷ್ಠಿಯಲ್ಲಿ ಮತ್ತು ಬಾಹುಳ್ಯದಲ್ಲೂ ಅತ್ಯಂತ ಪ್ರಬಲವಾಗಿ 200 ವರ್ಷಗಳ ಕಾಲ ಕಲ್ಯಾಣ ಚಾಲುಕ್ಯರ ಸಾಮ್ರಾಜ್ಯ ಮೆರೆದಿತ್ತು. ನೇಪಾಳ, ಕಾಶ್ಮೀರದವರೆಗೂ ಹರಡಿದ್ದ ಸಾಮ್ರಾಜ್ಯವಿದು.

ಕನ್ನಡಪ್ರಭ ವಾರ್ತೆ ಗುರುಮಠಕಲ್

ನಮ್ಮ ಭಾಗದಲ್ಲಿ ಐತಿಹಾಸಿಕ ಪ್ರಜ್ಞೆಯ ಕೊರತೆಯಿಂದಾಗಿ ಇತಿಹಾಸದ ಸಂಶೋಧನಾ ಕಾರ್ಯವು ಕುಂಠಿತಗೊಂಡಿದೆ. ಈ ಭಾಗದಲ್ಲಿ ಹೆಚ್ಚೆಚ್ಚು ಸಂಶೋಧನಾ ಕಾರ್ಯ ಜರುಗಬೇಕೆಂಬ ಆಶಯದೊಂದಿಗೆ ಈ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಶ್ರೀನಿವಾಸ ಪಾಡಿಗಾರ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆಯ ಕಲಬುರಗಿ ಹಾಗೂ ಬಂಡಾರ ಪ್ರಕಾಶನ ಮಸ್ಕಿ ಸಹಯೋಗದಲ್ಲಿ ನಡೆದ ಕಲ್ಯಾಣ ಚಾಲುಕ್ಯರ ಚರಿತ್ರೆಯ ದಾಖಲೆಗಳ ಕುರಿತು ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಾಂಸ್ಕೃತಿಕವಾಗಿ, ವಾಸ್ತು ನಿರ್ಮಾಣದ ದೃಷ್ಠಿಯಲ್ಲಿ ಮತ್ತು ಬಾಹುಳ್ಯದಲ್ಲೂ ಅತ್ಯಂತ ಪ್ರಬಲವಾಗಿ 200 ವರ್ಷಗಳ ಕಾಲ ಕಲ್ಯಾಣ ಚಾಲುಕ್ಯರ ಸಾಮ್ರಾಜ್ಯ ಮೆರೆದಿತ್ತು. ನೇಪಾಳ, ಕಾಶ್ಮೀರದವರೆಗೂ ಹರಡಿದ್ದ ಸಾಮ್ರಾಜ್ಯವಿದು. ಕಾಶ್ಮೀರದಿಂದ ಬಿಲ್ಲಣನು 6ನೇ ವಿಕ್ರಮಾದಿತ್ಯನ ಕಾಲದಲ್ಲಿ ಕಾಶ್ಮೀರದಿಂದ ಸಮರ್ಥ ಆಶ್ರಯವನ್ನರಿಸಿ ಬಂದ. ವಿಕ್ರಮಾಂಕದೇವ ಚರಿತಂ ಎಂಬ ಕಾವ್ಯವನ್ನೂ ರಚಿಸಿದ ಎಂದು ಹೇಳಿದರು..

ಕಲ್ಯಾಣದ ಚಾಲುಕ್ಯರ ಕುರಿತು ಇನ್ನೂ ಹಲವು ವಿಷಯಗಳ ಕುರಿತು ಜನತೆಗೆ ಅರಿವಿಲ್ಲ. ಆದರೆ, ಅದರ ಹಿಂದಿನ ಕಾಲಘಟ್ಟವನ್ನು ಮತ್ತು ಆ ಕಾಲಘಟ್ಟವನ್ನು ಕೂಲಂಕುಷವಾಗಿ ತುಲನೆ ಮಾಡಿದರೆ, ಹಿಂದೆಂದಿಗಿಂತಲೂ ಕಲ್ಯಾಣ ಚಾಲುಕ್ಯರ ಅವಧಿಯು ಅತ್ಯಂತ ವೈಭವವಾದುದು. ಕರ್ನಾಟಕದಲ್ಲಿನ 2500 ಶಾಸನಗಳಲ್ಲಿ 2 ಸಾವಿರ ಕಲ್ಯಾಣ ಚಾಲುಕ್ಯರವು, ಇನ್ನೂ ಮುಖ್ಯವಾಗಿ ಸುಮಾರು 800 ಶಾಸನಗಳು 6ನೇ ವಿಕ್ರಮಾದಿತ್ಯನ ಅವಧಿಗೆ ಸಂಬಂಧಿಸಿದ್ದು ಎಂದರು.

ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾದ್ಯಾಪಕ ಬಸವರಾಜ ಕೊಡಗಂಟಿ ಮಾತನಾಡಿ, ಸಂಶೋಧನಾ ಕಾಅರ್ಯಗಳು ಹೆಚ್ಚಬೇಕಿದೆ. ನಮ್ಮ ಭಾಗದಲ್ಲಿನ ಸಂಸ್ಕೃತಿ ಮತ್ತು ಸಾಹಿತ್ಯದ ಹಾಗೂ ಜೀವನವಿಧಾನವು ಅತ್ಯಂತ ಶ್ರೀಮಂತವಾಗಿದ್ದುದು ಕಲ್ಯಾಣದ ಚಾಲುಕ್ಯರ ಕಾಲಘಟ್ಟವನ್ನು ಅಧ್ಯಯನ ಮಾಡಿದಾಗ ತಿಳಿಯುತ್ತದೆ. ಅಂದಿನ ಕೃಷಿ ಪದ್ಧತಿಯನ್ನು ಇಂದಿಗೂ ಯಾದಗಿರಿ ಜಿಲ್ಲೆಯಲ್ಲಿ ಅಳವಡಿಸಿಕೊಂಡು ಮುಂದುವರೆಸಿರುವುದು ಕಾಣಬಹುದು ಎಂದರು.

ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ವೀರಶೆಟ್ಟಿ ಮಾತನಾಡಿ, ನಮ ಇಲಾಖೆಯ ವಿಭಾಗಿಯ ಕಚೇರಿ ಕಲಬುರಗಿಯಲ್ಲಿ ಸ್ಥಾಪನೆಯಾಗಿದ್ದು, ಇತಿಹಾಸಕ್ಕೆ ಸಂಬಂಧಿಸಿದ ಸಾಹಿತ್ಯ ದಾಖಲೆಗಳನ್ನು ಸಂರಕ್ಷಿಸಿ ಆಸಕ್ತ ಸಂಶೋಧಕರಿಗೆ ಅಧ್ಯಯನಕ್ಕಾಗಿ ಅನುಕೂಲ ಮಾಡಿಕೊಡಲಾಗಿದೆ. ಆಸಕ್ತ ಸಂಶೋಧಕರು ಇಲಾಖೆಯ ಸೇವೆ ಪಡೆಯಬಹುದು ಎಂದು ತಿಳಿಸಿದರು.

ಪ್ರಾಂಶುಪಾಲ ಗಚ್ಚಿನಮನಿ ಮೋತಪ್ಪ ಮಾತನಾಡಿದರು. ಬಂಡಾರ ಪ್ರಕಾಶನದ ಪರಶುರಾಮ ಕೊಡಗುಂಟಿ, ಪ್ರದ್ಯಾಪಕರಾದ ಬಾಬುರಾಯ ದೊರೆ, ಮೊಹ್ಮದ್ ಇಮ್ರಾಅನ್ ಖಾಜಿ, ಬಾಲಪ್ಪ ಕಟ್ಟೆಲ್, ಹಣಮಂತ ದಾಸನ್, ಪ್ರವೀಣ, ರಾಯಪ್ಪ, ಶ್ರೀನಿವಾಸ, ಆಕಾಶ, ಅಬ್ದುಲ್ ರೆಹಮಾನ, ಬುಗ್ಗಪ್ಪ, ವೆಂಕಟೇಶ ಕೊಲ್ಲಿ, ಎಸ್.ಎಸ್. ನಾಯಕ್, ಅಲ್ಲಾಭಕ್ಷ ಇತರರಿದ್ದರು.