ಕನ್ನಡಪ್ರಭ ವಾರ್ತೆ ಹಾಸನ

ನಗರದ ಎಸ್‌ಎಂಕೆ ನಗರ ಬಡಾವಣೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಎಂಟು ದಿನಗಳಿಂದ ವಿದ್ಯುತ್ ಮತ್ತು ಕುಡಿಯುವ ನೀರಿನ ಸರಬರಾಜು ಸ್ಥಗಿತಗೊಂಡಿರುವುದರಿಂದ ಸಾರ್ವಜನಿಕರು ಸಂಕಷ್ಟದಲ್ಲಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿ ಬಡಾವಣೆಯ ನಿವಾಸಿಗಳು ಬಿಜಿಎಸ್ ವೃತ್ತದಲ್ಲಿ ಬೃಹತ್ ಸಭೆ ನಡೆಸಿ ಹೋರಾಟದ ರೂಪುರೇಷೆಗಳ ಕುರಿತು ಚರ್ಚಿಸಿದರು. ಇದೇ ವೇಳೆ ಕ್ಷೇತ್ರದ ಶಾಸಕ ಎಚ್. ಪಿ. ಸ್ವರೂಪ್ ಆಗಮಿಸಿ ಚರ್ಚಿಸಿ ಇನ್ನು ೧೫ ದಿನಗಳಲ್ಲಿ ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡಿದರು.

ಬಡಾವಣೆಯ ನಿವಾಸಿಗಳ ಅಧ್ಯಕ್ಷ ಧರ್ಮೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ದೇಶಕ ವೈ. ಬಿ. ರವಿ ಮಾತನಾಡಿ, ಎಸ್‌ಎಂಕೆ ನಗರವನ್ನು ಏಷ್ಯಾದ ಅತಿದೊಡ್ಡ ಬಡಾವಣೆ ಎಂದು ಹೇಳಿಕೊಳ್ಳಲಾಗುತ್ತಿದ್ದರೂ, ಇಲ್ಲಿನ ಜನರು ಕನಿಷ್ಠ ಮೂಲಸೌಕರ್ಯಗಳಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯುತ್ ಇಲ್ಲದೆ ಮನೆಗಳಲ್ಲಿ ಕತ್ತಲು ಆವರಿಸಿದ್ದು, ಕುಡಿಯುವ ನೀರಿನ ಕೊರತೆಯಿಂದ ಕುಟುಂಬಗಳು ತೀವ್ರ ತೊಂದರೆ ಅನುಭವಿಸುತ್ತಿವೆ. ಶಾಲಾ ಮಕ್ಕಳು, ವೃದ್ಧರು, ಮಹಿಳೆಯರು ಸೇರಿದಂತೆ ಎಲ್ಲ ವರ್ಗದ ಜನರು ಸಂಕಷ್ಟದಲ್ಲಿದ್ದಾರೆ. ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿ ಎಂದು ಆರೋಪಿಸಿದರು.ಸಭೆಯಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ಮಹಿಳೆಯರು, ಪುರುಷರು ಹಾಗೂ ಮಕ್ಕಳು ಭಾಗವಹಿಸಿ ತಮ್ಮ ಅಳಲು ತೋಡಿಕೊಂಡರು. ದಿನನಿತ್ಯದ ಬದುಕು ದುಸ್ತರವಾಗಿದ್ದು, ವಿದ್ಯುತ್ ಇಲ್ಲದ ಕಾರಣ ಕುಡಿಯುವ ನೀರಿನ ಪೂರೈಕೆಯೂ ಸ್ಥಗಿತಗೊಂಡಿದೆ. ರಾತ್ರಿ ವೇಳೆ ಕತ್ತಲಿನಿಂದ ಭದ್ರತೆಯ ಸಮಸ್ಯೆ ಎದುರಾಗಿದ್ದು, ಮಕ್ಕಳು ಮತ್ತು ಮಹಿಳೆಯರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ ಎಂದು ನಿವಾಸಿಗಳು ತಿಳಿಸಿದರು.ನಿವಾಸಿಗಳು ಮಾತನಾಡಿ, ಬಡಾವಣೆಯ ಬಹುತೇಕ ರಸ್ತೆಗಳಲ್ಲಿ ಬೀದಿದೀಪಗಳೇ ಇಲ್ಲ. ಎಲ್ಲೆಡೆ ಗಿಡಗಂಟೆಗಳು ಬೆಳೆದಿದ್ದು, ಹಾವು-ಚೇಳುಗಳ ಕಾಟ ಹೆಚ್ಚಾಗಿದೆ. ಕೆಲ ಪ್ರದೇಶಗಳು ಕಾಡಿನಂತಾಗಿದ್ದು, ಸಾರ್ವಜನಿಕರು ಓಡಾಡುವುದಕ್ಕೂ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ವೇಳೆ ಕಳ್ಳತನ ಸೇರಿದಂತೆ ಅಹಿತಕರ ಘಟನೆಗಳು ನಡೆಯುವ ಭೀತಿ ಕಾಡುತ್ತಿದೆ. ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಬಡಾವಣೆಯ ಸಮಸ್ಯೆಗಳ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

15 ದಿನಗಳೊಳಗೆ ಪರಿಹಾರದ ಭರವಸೆ:ಸಭೆ ನಡೆಯುತ್ತಿರುವ ವೇಳೆ ಶಾಸಕ ಎಚ್. ಪಿ. ಸ್ವರೂಪ್ ಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಂದು ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದು ಶೀಘ್ರದಲ್ಲೇ ಪರಿಹಾರ ಕಲ್ಪಿಸಲಾಗುವುದು. ಸೋಮವಾರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಕುಡಿಯುವ ನೀರು, ವಿದ್ಯುತ್, ಬೀದಿದೀಪ ಹಾಗೂ ಇತರೆ ಮೂಲಸೌಕರ್ಯಗಳ ಕುರಿತು ಸಮಗ್ರ ಸಭೆ ನಡೆಸಲಾಗುವುದು. ವಿಶೇಷವಾಗಿ ವಿದ್ಯುತ್ ಸಮಸ್ಯೆಯನ್ನು ೧೫ ದಿನಗಳೊಳಗೆ ಸಂಪೂರ್ಣವಾಗಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಶಾಸಕರ ಭರವಸೆಯ ಬಳಿಕ ನಿವಾಸಿಗಳು ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಮುಂದೂಡಲು ನಿರ್ಧರಿಸಿದರು. ಸೋಮವಾರದ ಅಧಿಕಾರಿಗಳ ಸಭೆ ಮತ್ತು ನಂತರದ ಕ್ರಮಗಳನ್ನು ಗಮನಿಸಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು. ಸಭೆಯಲ್ಲಿ ಬಡಾವಣೆಯ ಪದಾಧಿಕಾರಿಗಳು, ಹಿರಿಯ ನಾಗರಿಕರು, ಮಹಿಳೆಯರು, ಯುವಕರು ಹಾಗೂ ನೂರಾರು ನಿವಾಸಿಗಳು ಉಪಸ್ಥಿತರಿದ್ದು, ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯುವವರೆಗೆ ಹೋರಾಟ ಮುಂದುವರಿಸುವ ಸಂಕಲ್ಪ ವ್ಯಕ್ತಪಡಿಸಿದರು.