ಗ್ರಾಪಂಗಳಲ್ಲಿ ಪಿಡಿಒಗಳ ಕೊರತೆ: ಗ್ರಾಮಸ್ಥರ ಪರದಾಟ

| Published : Jul 26 2025, 12:00 AM IST

ಸಾರಾಂಶ

ಒಬ್ಬ ಪಿಡಿಒ ಒಂದು ಪಂಚಾಯ್ತಿಯನ್ನು ನಿಬಾಯಿಸುವುದು ಕಷ್ಟಕರವಾಗಿದೆ, ಹೀಗಿರುವಾಗ ಒಬ್ಬರಿಗೆ ಎರಡು ಪಂಚಾಯ್ತಿಗಳಿಗೆ ಜವಾಬ್ದಾರಿ ನೀಡಿರುವುದರಿಂದ ಎರಡೂ ಕಡೆ ನ್ಯಾಯಕೊಡಿಸಲಾಗದೆ ಒತ್ತಡದಲ್ಲಿ ಪಿಡಿಒಗಳು ಪರದಾಡುವಂತಾಗಿದೆ. ಬಹುತೇಕ ಗ್ರಾಪಂಗಳಲ್ಲಿ ಕಾಯಂ ಪಿಡಿಒಗಳೇ ಇಲ್ಲ. ಇದರಿಂದ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ತಾಲೂಕಿನ ಗ್ರಾಮ ಪಂಚಾಯ್ತಿಗಳಲ್ಲಿ ಗ್ರಾಮಾಭಿವೃದ್ದಿ ಅಧಿಕಾರಿ(ಪಿಡಿಒ)ಗಳ ಕೊರತೆಯಿಂದ ಒಬ್ಬ ಪಿಡಿಒರನ್ನು ಎರಡು ಮೂರು ಪಂಚಾಯ್ತಿಗಳಿಗೆ ನಿಯೋಜನೆ ಮಾಡಲಾಗಿದೆ. ಇದರಿಂದಾಗಿ ಯಾವ ಪಂಚಾಯಿತಿಯಲ್ಲಿಯೂ ಸಾರ್ವಜನಿಕರ ಕೆಲಸ ಕಾರ್ಯಗಳು ಸರಾಗವಾಗಿ ನಡೆಯದೆ ವಿಳಂಬವಾಗುತ್ತಿದೆ. ತಾಲೂಕಿನ ೨೧ ಗ್ರಾಮ ಪಂಚಾಯ್ತಿಗಳ ಪೈಕಿ ಬಹುತೇಕ ಗ್ರಾಪಂಗಳಲ್ಲಿ ಕಾಯಂ ಪಿಡಿಒಗಳೇ ಇಲ್ಲ. ಇದರಿಂದ ಗ್ರಾಮಗಳಲ್ಲಿ ಅಗತ್ಯವಾಗಿ ಕೈಗೊಳ್ಳಬೇಕಿರುವ ಕಾಮಗಾರಿಗಳ ಹಾಗೂ ಕುಡಿಯುವ ನೀರು, ಸ್ವಚ್ಛತೆ ಹಾಗೂ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ.

ಒತ್ತಡದಲ್ಲಿ ಪಿಡಿಒಗಳು

ಒಬ್ಬ ಪಿಡಿಒ ಒಂದು ಪಂಚಾಯ್ತಿಯನ್ನು ನಿಬಾಯಿಸುವುದು ಕಷ್ಟಕರವಾಗಿದೆ, ಹೀಗಿರುವಾಗ ಒಬ್ಬರಿಗೆ ಎರಡು ಪಂಚಾಯ್ತಿಗಳಿಗೆ ಜವಾಬ್ದಾರಿ ನೀಡಿರುವುದರಿಂದ ಎರಡೂ ಕಡೆ ನ್ಯಾಯಕೊಡಿಸಲಾಗದೆ ಒತ್ತಡದಲ್ಲಿ ಪಿಡಿಒಗಳು ಪರದಾಡುವಂತಾಗಿದೆ. ತಾಲೂಕಿನ ಬಲಮಂದೆ, ತೊಪ್ಪನಹಳ್ಳಿ ಗ್ರಾಪಂಗೆ ಮಧುಚಂದ್ರ, ಆಲಂಬಾಡಿ ಜೋತೇನಹಳ್ಳಿ, ಎಳೆಸಂದ್ರಗೆ ವಸಂತ್, ದೊಡ್ಡವಲಗಮಾದಿ, ಮಾಗೊಂದಿಗೆ ಸರಸ್ವತಿ, ಚಿನ್ನಕೋಟೆ, ಹುನ್ಕುಂದ ಗ್ರಾಪಂಗೆ ಚಂದ್ರಪ್ಪ, ಕೇತಗಾನಹಳ್ಳಿ, ಐನೋರಹೊಸಹಳ್ಳಿ ಗ್ರಾಪಂಗೆ ಯಶ್ವಂತ್, ಮಾವಹಳ್ಳಿ, ಡಿಕೆಹಳ್ಳಿಗೆ ಭಾಸ್ಕರ್, ಕಸರನಹಳ್ಳಿ, ಸೂಲಿಕುಂಟೆ ಗ್ರಾಪಂಗೆ ಶಂಕರ್ ರನ್ನು ನಿಯೋಜನೆ ಮಾಡಿರುವುದರಿಂದ ಒಬ್ಬ ಪಿಡಿಒ ನಿತ್ಯ ಎರಡೂ ಪಂಚಾಯಿತಿಗಳಲ್ಲಿ ಕಾರ್ಯನಿರ್ವಾಹಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಆಗದೆ ಪರದಾಡುವಂತಾಗಿದೆ.ಗ್ರಾಮಸ್ಥರ ಪರದಾಟ

ಗ್ರಾಮಸ್ಥರು ನಿತ್ಯ ತಮ್ಮ ಕೆಲಸ ಕಾರ್ಯಗಳಿಗಾಗಿ ಪಂಚಾಯ್ತಿ ಕಚೇರಿಗೆ ಅಲೆಯುವಂತಾಗಿದೆ, ಅಲ್ಲಿಗೆ ಬಂದರೆ ಪಿಡಿಒ ಬಂದಿಲ್ಲ ಎಂದು ಹೇಳಿ ಕಳುಹಿಸುತ್ತಾರೆ. ಇದಲ್ಲದೆ ಗ್ರಾಮಗಳಲ್ಲಿ ಇರುವ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಂಡು ನೀಗಿಸಿಕೊಳ್ಳಬೇಕೆಂಬುದು ತಿಳಿಯದೆ ಸದಸ್ಯರೂ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಕೆಲ ಗ್ರಾಪಂಗಳಲ್ಲಿ ಸದಸ್ಯರ ಹಾಗೂ ರಾಜಕೀಯ ಒತ್ತಡಗಳಿಂದ ಕೂಡಿದ್ದು ಒತ್ತಡಗಳಿಗೆ ಹೆದರಿ ಪಿಡಿಒಗಳು ಆ ಕಡೆ ತಲೆ ಹಾಕಲು ಹಿಂಜರಿಯುವಂತಾಗಿದೆ. ನಮಗೆ ಎರಡು ಜವಾಬ್ದಾರಿ ಬೇಡವೆಂದರೂ ತಾಪಂ ಇಒ ನೀಡಿದ್ದಾರೆಂದು ಹೆಸರು ಹೇಳಲು ಇಚ್ಚಿಸದ ಪಿಡಿಒ ಒಬ್ಬರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.ಜಿಪಂ ಸಿಇಒ ಅಸಹಾಯಕತೆ

ತಾಲೂಕಿನ ೮ ಗ್ರಾಪಂಗಳಲ್ಲಿ ಖಾಯಂ ಪಿಡಿಒಗಳ ಕೊರತೆ ಇದ್ದು ಈ ಸಮಸ್ಯೆ ಬಗೆಹರಿಸುವಂತೆ ಕೋಲಾರ ಜಿಪಂ ಸಿಇಒ ರವರನ್ನು ಕೇಳಿದರೆ, ಸರ್ಕಾರ ಪಿಡಿಒಗಳನ್ನು ನೇಮಿಸಬೇಕು, ಅಲ್ಲಿಯವರೆಗೂ ಒಬ್ಬರಿಗೆ ಎರಡು ಮೂರು ಪಂಚಾಯ್ತಿಗಳ ಜವಾಬ್ದಾರಿ ಅನಿವಾರ್ಯ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಯಾವ ದಿನ ಯಾವ ಪಂಚಾಯ್ತಿಯಲ್ಲಿ ಕಾರ್ಯನಿರ್ವಹಿಸುವರು ಎಂಬುದನ್ನು ಪಿಡಿಒಗಳು ಕಡ್ಡಾಯವಾಗಿ ಪುಸ್ತಕದಲ್ಲಿ ದಾಖಲಿಸಿ ಜನರಿಗೆ ತೊಂದರೆಯಾಗದಂತೆ ಕೆಲಸ ಮಾಡಬೇಕೆಂದು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.