ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ಕನ್ನಡ ನಾಡಿನ ಜಲ, ನೆಲ, ಉದ್ಯೋಗ ಇತ್ಯಾಧಿ ಸೌಲಭ್ಯಗಳನ್ನು ಪಡೆಯುವ ಜನತೆ ಕನ್ನಡ ರಾಜ್ಯೋತ್ಸವ, ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಕನ್ನಡ ಪರ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕಾಳಜಿವಹಿಸದಿರುವುದು ಬೇಸರ ಸಂಗತಿ. ಇದೇ ಚಾಳಿ ಮುಂದುವರೆದರೆ ಮುಂದಿನ ದಿನಗಳಲ್ಲಿ ನಮ್ಮ ಮಾತೃಭಾಷೆ ಕನ್ನಡಕ್ಕೆ ಕುತ್ತು ಬರುವುದು ಕಟ್ಟಿಟ್ಟಭುತ್ತಿ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಎಚ್ಚರಿಸಿದರು.ಪಟ್ಟಣದ ಸರ್ಕಾರಿ ಬಾಲಕಿಯರ ಶಾಲಾ ಆವರಣದಲ್ಲಿ ಆಯೋಜಿಸಿದ್ದ 6 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಕನ್ನಡಪರ ನಡೆಯುವ ಸಭೆ ಸಮಾರಂಭ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಜನರು ಆಸಕ್ತಿ ತೋರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅನ್ಯ ಭಾಷಾ ಧ್ವೇಷ ಬೇಡಕನ್ನಡ ಭಾಷೆ ಮೇಲಿನ ಪ್ರೇಮ ಪ್ರೀತಿ ವಾತ್ಸಲ್ಯ ಕೇವಲ ವೇದಿಕೆಗಳಿಗೆ ಮತ್ತು ಒಂದು ದಿನದ ಕಾರ್ಯಕ್ರಮಗಳಿಗೆ ಸೀಮಿತವಾಗದೆ ನಮ್ಮ ಉಸಿರು ಇರುವ ತನಕ ಇರಬೇಕು, ಅನ್ಯಭಾಷೆಗಳ ಮೇಲೆ ದ್ವೇಷ ಮಾಡುವುದು ಬೇಡ ನಮ್ಮ ಭಾಷೆಯನ್ನು ಪ್ರೀತಿಸೋಣ ಎಂದ ಅವರು ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಹೆಚ್ಚು ಹೆಚ್ಚು ಕನ್ನಡ ಕಾರ್ಯಕ್ರಮಗಳ ನಡೆಯಬೇಕಾದ ಅಗತ್ಯವಿದೆ ಎಂದರು.
ಅತೀ ಶೀಘ್ರದಲ್ಲಿಯೇ ಬಾಗೇಪಲ್ಲಿ ಹೆಸರನ್ನು ಬದಲಿಸಿ ಭಾಗ್ಯನಗರ ಎಂಬುದಾಗಿ ಮರುನಾಮಕರಣ ಮಾಡುವ ಹಾಗೂ ಮುಂದಿನ ಕನ್ನಡ ರಾಜ್ಯೋತ್ಸವದ ವೇಳೆಗೆ ಬಾಗೇಪಲ್ಲಿಯಲ್ಲಿ ಕನ್ನಡ ಭವನ ನಿರ್ಮಿಸುವುದಾಗಿ ಭರವಸೆ ನೀಡಿದರು.ಭಾಷಾ ಸಾಮರಸ್ಯಕ್ಕೆ ಶ್ಲಾಘನೆ
6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎಸ್. ಉದಯ ಕುಮಾರ್ ಮಾತನಾಡಿ ಆಂಧ್ರದ ಗಡಿ ಭಾಗದಲ್ಲಿ ಹೆಚ್ಚು ಕನ್ನಡ ಕಾರ್ಯಕ್ರಮಗಳು ನಡೆಯಬೇಕಾದ ಅಗತ್ಯವಿದೆ. ಕನ್ನಡ ಭಾಷೆ, ನೆಲ, ಜಲ ಉಳಿಸಿ ಬೆಳಸುವುದು ನಾಡಿನ ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ. ಬಾಗೇಪಲ್ಲಿ ನೆರೆಯ ಆಂಧ್ರಪ್ರದೇಶದ ಗಡಿ ಭಾಗದಲ್ಲಿದೆ ಇಲ್ಲಿ ತೆಲುಗು ಪ್ರಭಾವ ಹೆಚ್ಚಾಗಿದೆ ಇಲ್ಲಿನ ಬಹುತೇಕರ ಆಡು ಭಾಷೆ ತೆಲುಗು ಆದರೂ ಸಹ ಕನ್ನಡ ಭಾಷೆಗೆ ಎಂದೂ ಧಕ್ಕೆ ತಂದಿಲ್ಲ, ಕನ್ನಡ ಮತ್ತು ತೆಲುಗು ಮಾತನಾಡುವವರು ಭಾಷಾಸಾಮರಸ್ಯವನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ಇದನ್ನು ಮುಂದುವರೆಸಿಕೊಂಡು ಹೋಗಬೇಕಾಗಿದೆ ಎಂದರು.1975-80 ರ ಕಾಲಘಟ್ಟದಲ್ಲಿ ಇಲ್ಲಿ ಕನ್ನಡ ಕಲಾ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್‍ವತಿಯಿಂದ ಕನ್ನಡ ನಾಟಕ, ಮನೆ ಮನೆಗೆ ಕನ್ನಡ ಪುಸ್ತಕ ವಿತರಣೆ ಸೇರಿದಂತೆ ಅನೇಕ ಕನ್ನಡ ಪರ, ಕನ್ನಡ ಸಾಹಿತ್ಯದ ಬಗ್ಗೆ ಕಾರ್ಯಕ್ರಮಗಳನ್ನ ಮೆಲುಕುಹಾಕಿದ ಅವರು, ಅಂದಿನ ದಿನಗಳಲ್ಲಿಯೇ ಬಾಗೇಪಲ್ಲಿ ಹೆಸರನ್ನು ಭಾಗ್ಯನಗರ ಎಂಬುದಾಗಿ, ಪಟ್ಟಣದ ಮುಖ್ಯ ರಸ್ತೆಗೆ ಡಿ.ವಿ.ಜಿ ರಸ್ತೆ, ಗೂಳೂರು ರಸ್ತೆಗೆ ಜಚನಿ ರಸ್ತೆ ಹಾಗೂ ಪಟ್ಟಣದ ಮುಖ್ಯ ವೃತ್ತಕ್ಕೆ ಸರ್ ಎಂ.ವಿ ರಸ್ತೆ ಎಂಬುದಾಗಿ ನಾಮರಣ ಮಾಡಲಾಗಿತ್ತು ಎಂದ ನೆನಪಿಸಿದರು.
ಸಮ್ಮೇಳನಾಧ್ಯಕ್ಷರಿಗೆ ಸನ್ಮಾನತಾಲೂಕು ಸಾಹಿತ್ಯ ಪರಿಷತ್‍ವತಿಯಿಂದ ಸಮ್ಮೇಳನದ ಅಧ್ಯಕ್ಷ ಎಸ್.ಉದಯಕುಮಾರ್, ಶಾಸಕ ಎಸ್.ಎನ್.ಸುಬ್ಬಾರೆಡ್ಡಿರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ. ಮಹೇಶ್ ಜೋಷಿ, ಜಿಲ್ಲಾಧ್ಯಕ್ಷ ಕೋಡಿರಂಗಪ್ಪ, ತಾಲೂಕು ಅಧ್ಯಕ್ಷ ಡಿ.ಎನ್.ಕೃಷ್ಣಾರೆಡ್ಡಿ ಮಾತನಾಡಿದರು.
ಇದಕ್ಕೂ ಮೊದಲು 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎಸ್. ಉದಯಕುಮಾರ್ ರವರನ್ನು ಪಟ್ಟಣದ ಸಿವಿಲ್ ನ್ಯಾಯಾಲಯದ ಮುಂಭಾಗದಲ್ಲಿ ತಾಲೂಕು ಕಸಪಾವತಿಯಿಂದ ಆತ್ಮೀಯವಾಗಿ ಬರಮಾಡಿಕೊಂಡು ನಂತರ ಸಮ್ಮೇಳನದ ಅಧ್ಯಕ್ಷರನ್ನು ನ್ಯಾಯಾಲಯದ ಮುಂಭಾಗದಿಂದ ಮಂಗಳ ವಾದ್ಯಗಳೊಂದಿಗೆ ತೆರದ ವಾಹನದಲ್ಲಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿದರು.ಈ ಸಂದರ್ಭದಲ್ಲಿ ತಾಲೂಕು ಕಸಾಪ ನಿಕಪೂರ್ವ ಅಧ್ಯಕ್ಷ ಎ.ಜಿ.ಸುಧಾಕರ್, ತಾಲೂಕು ಕಸಾಪ ಅಧ್ಯಕ್ಷ ಡಿ.ಎನ್.ಕೃಷ್ಣಾರೆಡ್ಡಿ, ತಹಸೀಲ್ದಾರ್ ಪ್ರಶಾಂತ್ ಕೆ ಪಾಟಿಲ್, ಪೊಲೀಸ್ ಇನ್ಸ್‍ಪೆಕ್ಟರ್ ಪ್ರಶಾಂತ್ ವರ್ಣಿ, ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಮತ್ತಿತರರು ಇದ್ದರು.