ಪಟ್ಟಣದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ವಿಚಾರದಲ್ಲಿ ಪುರಸಭೆ ನಿರಂತರ ಸಬೂಬು ಹೇಳಿಕೊಂಡು ಬರುತ್ತಿದ್ದು,ರಾಜಕೀಯ ಒತ್ತಡಕ್ಕೆ ಮಣಿದು ತೆರವು ಕಾರ್ಯಾಚರಣೆಗೆ ಹಿಂದೇಟು ಹಾಕುತ್ತಿದೆ!
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ವಿಚಾರದಲ್ಲಿ ಪುರಸಭೆ ನಿರಂತರ ಸಬೂಬು ಹೇಳಿಕೊಂಡು ಬರುತ್ತಿದ್ದು,ರಾಜಕೀಯ ಒತ್ತಡಕ್ಕೆ ಮಣಿದು ತೆರವು ಕಾರ್ಯಾಚರಣೆಗೆ ಹಿಂದೇಟು ಹಾಕುತ್ತಿದೆ!‘ನಡೆಯುವ ಹಕ್ಕು ಮೂಲಭೂತ ಹಕ್ಕು’ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟ ಆದೇಶ ನೀಡಿ ಕೆಲ ತಿಂಗಳುಗಳೇ ಕಳೆದಿದ್ದು,ಪ್ರತಿ ರಸ್ತೆಯಲ್ಲೂ ಕನಿಷ್ಠ ೧.೨ ಮೀಟರ್ ಪಾದಚಾರಿ ಮಾರ್ಗ ಕಡ್ಡಾಯ ಎಂದು ರಾಜ್ಯ ಸರ್ಕಾರವೂ ಸೂಚನೆ ನೀಡಿದೆ.
ಆದರೆ ಗುಂಡ್ಲುಪೇಟೆ ಪುರಸಭೆ ಆಡಳಿತಾಧಿಕಾರಿ ಹಾಗೂ ಪುರಸಭೆ ಮುಖ್ಯಾಧಿಕಾರಿಗಳು ಮಾತ್ರ ಕಣ್ಣಿದ್ದೂ ಕುರುಡಾಗಿ ವರ್ತಿಸುತ್ತಿದ್ದಾರೆ ಎಂದು ಪಾದಚಾರಿಗಳು ಆರೋಪಿಸಿದ್ದು,ಜಿಲ್ಲಾಧಿಕಾರಿಗಳು ಕೂಡ ಈ ವಿಷಯದಲ್ಲಿ ಕೈ ಚೆಲ್ಲಿ ಕುಳಿತಿದ್ದಾರೆ ಎಂದಿದ್ದಾರೆ.ಕನ್ನಡಪ್ರಭ ಪತ್ರಿಕೆಯಲ್ಲಿ ಕಳೆದ ಜು.೧೫ ರಂದು ‘ಗುಂಡ್ಲುಪೇಟೆ ಪಾದಚಾರಿ ಮಾರ್ಗ: ನಡೆದಾಡಲು ಜಾಗ ಇಲ್ಲ’ ಎಂಬ ವರದಿ ಪ್ರಕಟವಾದ ಬೆನ್ನಲ್ಲೇ ಎಚ್ಚೆತ್ತ ಪುರಸಭೆ ಮುಖ್ಯಾಧಿಕಾರಿ ಎಸ್.ಶರವಣ ಜು.೨೪ ರಂದು ‘ಎಸ್‌ಐಆರ್ ಮುಗಿದ ಬಳಿಕ ಫುಟ್‌ಪಾತ್ ತೆರವು’ ಎಂದು ಭರವಸೆ ನೀಡಿದ್ದರು.
ಎಸ್‌ಆರ್‌ಐ ಮುಗಿದರೂ ಪುರಸಭೆ ಫುಟ್ ಪಾತ್ ತೆರವಿಗೆ ಮುಂದಾಗಲಿಲ್ಲ.ನಂತರ ಆ.೧೮ ರಂದು ‘ಫುಟ್‌ಪಾತ್ ಒತ್ತುವರಿ ತೆರವು: ಮಾತು ತಪ್ಪಿದ ಪುರಸಭೆ’ ಎಂದು ಮತ್ತೆ ವರದಿಯನ್ನುಕನ್ನಡಪ್ರಭ ಪ್ರಕಟಿಸಿತ್ತು.ಪತ್ರಿಕೆಯೊಂದಿಗೆ ಮಾತನಾಡಿದ್ದ ಪುರಸಭೆ ಮುಖ್ಯಾಧಿಕಾರಿ ಎಸ್.ಶರವಣ, ವರಮಹಾಲಕ್ಷ್ಮಿ ಹಬ್ಬದ ಬಳಿಕ ತೆರವು ಎಂದು ಸ್ಪಷ್ಟನೆ ನೀಡಿದ್ದರು. ಅಲ್ಲದೆ ಪೊಲೀಸರಿಗೆ ಪತ್ರ ಬರೆದಿರುವುದಾಗಿ ಹೇಳಿದ್ದರು.
ವರ ಮಹಾಲಕ್ಷ್ಮೀ ಹಬ್ಬ ಮುಗಿದರೂ ಫುಟ್ ಪಾತ್ ತೆರವಿಲ್ಲ ಎಂದು ಕನ್ನಡಪ್ರಭ ಮತ್ತೆ ವರದಿ ಪ್ರಕಟಿಸಿ ಗಮನ ಸೆಳೆಯಿತು. ವರ ಮಹಾಲಕ್ಷ್ಮೀ ಹಬ್ಬವಾಗಿ ಗೌರಿ-ಗಣೇಶ ಹಬ್ಬವೂ ಮುಗಿದಿದೆ. ಆದರೂ ತೆರವಿಗೆ ಗುಂಡ್ಲುಪೇಟೆ ಪುರಸಭೆ ಮುಂದಾಗಿಲ್ಲ.ರಸ್ತೆ ಒತ್ತುವರಿ ಮಾಡಿಕೊಂಡ ಬಹುತೇಕ ವ್ಯಾಪಾರಿಗಳು ಫುಟ್‌ಪಾತ್‌ನಲ್ಲೇ ವ್ಯಾಪಾರ ಮುಂದುವರಿಸಿದ್ದಾರೆ. ಪುರಸಭೆ ವಾಣಿಜ್ಯ ಮಳಿಗೆಯ ಮುಂದೆಯೂ ಒತ್ತುವರಿಯಾಗಿದೆ. ಪಾದಚಾರಿಗಳು ಜೀವ ಭಯದಲ್ಲಿ ರಸ್ತೆಯಲ್ಲಿ ಶಾಲಾ ಮಕ್ಕಳು, ಮಹಿಳೆಯರು,ವೃದ್ಧರು ನಡೆಯಲು ಪರದಾಡುತ್ತಿದ್ದಾರೆ.
ರಾಜಕೀಯ ಒತ್ತಡ?:ಪುರಸಭೆ ತೆರವಿಗೆ ಫುಟ್ಪಾತ್ ಒತ್ತುವರಿ ತೆರವಿಗೆ ಮುಂದಾಗದಿರಲು ಮತಬ್ಯಾಂಕಿಗೆ ಹೊಡೆತ ಬೀಳುತ್ತದೆ ಎಂದು ರಾಜಕಾರಣಿಗಳ ಪುರಸಭೆಗೆ ಒತ್ತಡ ಹಾಕಿದ ಪರಿಣಾಮ ತೆರವಿಗೆ ಮುಂದಾಗಿಲ್ಲ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಪತ್ರಿಕೆಗಳಲ್ಲಿ ವರದಿ ಬಂದಾಗ ಮಾತ್ರ ಎಚ್ಚರಗೊಂಡಂತೆ ಮಾತನಾಡುವ ಪುರಸಭೆ ಅಧಿಕಾರಿಗಳು,ನಂತರ ಮೌನವಾಗಿರುವುದು ಇಚ್ಛಾಶಕ್ತಿ ಕೊರತೆ ಎತ್ತಿ ತೋರಿಸುತ್ತಿದೆ.ಜಿಲ್ಲಾಧಿಕಾರಿಗಳಾದರೂ ಪಟ್ಟಣದಲ್ಲಿ ಫುಟ್‌ಪಾತ್ ಒತ್ತುವರಿ ತೆರವಿಗೆ ಮುಂದಾಗದ ಪುರಸಭೆ ಅಧಿಕಾರಿಗಳಿಗೆ ತುರ್ತಾಗಿ ಫುಟ್ಪಾತ್ ತೆರವಿಗೆ ಸೂಚನೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.