ಮುಂಜಾಗ್ರತೆ ಕೊರತೆ, ಮುಂಡರಗಿಯಲ್ಲಿ ಡೆಂಘೀ ಹಾವಳಿ

| Published : Oct 28 2023, 01:15 AM IST

ಮುಂಜಾಗ್ರತೆ ಕೊರತೆ, ಮುಂಡರಗಿಯಲ್ಲಿ ಡೆಂಘೀ ಹಾವಳಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಡರಗಿ ಪಟ್ಟಣದಲ್ಲಿ ಡೆಂಘೀ ಜ್ವರದ ಹಾವಳಿ ಹೆಚ್ಚಾಗಿದ್ದು, ಪುರಸಭೆ ಇದುವರೆಗೂ ಯಾವುದೇ ರೀತಿಯ ಗಮನಾರ್ಹ ಕ್ರಮಗಳನ್ನು ಕೈಗೊಂಡಿಲ್ಲ.
ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು, ಸರ್ಕಾರಿ ಆಸ್ಪತ್ರೆಯಲ್ಲಿ ಡೆಂಘೀ ಕೇಸುಗಳೇ ಇಲ್ಲ ಶರಣು ಸೊಲಗಿ ಕನ್ನಡಪ್ರಭ ವಾರ್ತೆ ಮುಂಡರಗಿ ಮುಂಡರಗಿ ಪಟ್ಟಣದಲ್ಲಿ ಡೆಂಘೀ ಜ್ವರದ ಹಾವಳಿ ಹೆಚ್ಚಾಗಿದ್ದು, ಪುರಸಭೆ ಇದುವರೆಗೂ ಯಾವುದೇ ರೀತಿಯ ಗಮನಾರ್ಹ ಕ್ರಮಗಳನ್ನು ಕೈಗೊಂಡಿಲ್ಲ. ಪಟ್ಟಣದಲ್ಲಿ ಕಳೆದ ಅನೇಕ ದಿನಗಳಿಂದ ಡೆಂಘೀ ಜ್ವರದಿಂದ ಜನತೆ ಬಳಲುತ್ತಿದ್ದು, ಈ ಬಗ್ಗೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಮಾತ್ರ ಒಂದೇ ಒಂದು ಡೆಂಘೀ ಕೇಸುಗಳು ದಾಖಲಾಗಿಲ್ಲ. ಈ ಜ್ವರಕ್ಕೆ ತುತ್ತಾದ ಅನೇಕ ರೋಗಿಗಳು ಸರ್ಕಾರಿ ಆಸ್ಪತ್ರೆಗೆ ದಾಖಲಾಗದೇ ಪಟ್ಟಣದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಪಟ್ಟಣದ ಕೊಪ್ಪಳ ರಸ್ತೆಯ ಹೇಮರಡ್ಡಿ ಮಲ್ಲಮ್ಮ ನಗರ, ವಿದ್ಯಾನಗರ, ಹೆಸರೂರು ರಸ್ತೆ ಆಶ್ರಯ ಕಾಲೋನಿ, ಕಾಲೇಜು ರಸ್ತೆಯಲ್ಲಿರುವ ಚರಂಡಿ ಸೇರಿದಂತೆ ಪಟ್ಟಣದ ವಿವಿಧೆಡೆಗಳಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸದೇ ಇರುವುದರಿಂದ ಹಾಗೂ ಎಳನೀರು ಮಾರಾಟ ಮಾಡುವವರು ಎಲ್ಲೆಂದರಲ್ಲಿ ಕುಡಿದ ತೆಂಗಿನ ಸೊಟ್ಟೆಗಳನ್ನು ಎಸೆಯುತ್ತಿರುವುದು ಕಂಡು ಬರುತ್ತಿದ್ದು, ಅದರಲ್ಲಿಯೂ ಸಹ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಇದರಿಂದಾಗಿ ಡೆಂಘೀ ಜ್ವರ ಹರಡುವ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ ಎನ್ನುವುದು ಪಟ್ಟಣದ ಸಾರ್ವಜನಿಕರ ಆರೋಪವಾಗಿದೆ. ಪಟ್ಟಣದಲ್ಲಿ ಪುರಸಭೆಯಿಂದ ಅಲ್ಲಲ್ಲಿ ನಗರೋತ್ಥಾನ ಯೋಜನೆಯಡಿಯಲ್ಲಿ ವಿವಿಧ ವಾರ್ಡ್‌ಗಳಲ್ಲಿ ಚರಂಡಿ ಹಾಗೂ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು, ಆ ಕಾಮಗಾರಿಗಳು ಅರ್ಧಕ್ಕೆ ನಿಂತಿರುವ ಹಿನ್ನೆಲೆಯಲ್ಲಿ ಅಲ್ಲಿನ ಚರಂಡಿಗಳಲ್ಲಿ ಗಲೀಜು ನಿಂತು ಅವು ಸೊಳ್ಳೆಗಳ ಉತ್ಪಾದನೆಯಾಗುತ್ತಿವೆ. ಅವುಗಳನ್ನು ನಿಗದಿತವಾಗಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಪುರಸಭೆ ಮುಂದಾಗಬೇಕು. ಪಟ್ಟಣದಲ್ಲಿ ಸಾರ್ವಜನಿಕರು ಡೆಂಘೀ ಜ್ವರಕ್ಕೆ ತುತ್ತಾಗುತ್ತಿದ್ದಾರೆನ್ನುವ ಸುದ್ದಿ ಸಾಕಷ್ಟು ವೇಗವಾಗಿ ಹರಡುತ್ತಿದ್ದರೂ ಸಹ ಪುರಸಭೆಯಿಂದ ಸೊಳ್ಳೆಗಳ ನಿಯಂತ್ರಣಕ್ಕಾಗಿ ಇದುವರೆಗೂ ಚರಂಡಿಗಳ ಅಕ್ಕಪಕ್ಕದಲ್ಲಿ ಪೌಡರ್ ಹಾಕಿಸುವ ಕಾರ್ಯಮಾತ್ರ ನಡೆಯುತ್ತಿಲ್ಲ. ಅಲ್ಲದೇ ಈ ಹಿಂದೆ ಡೆಂಘೀ ಹಾವಳಿ ಹೆಚ್ಚಾದರೆ ಎಲ್ಲ ವಾರ್ಡ್‌ಗಳಲ್ಲಿಯೂ ಫಾಗಿಂಗ್ ಮಾಡಿಸಲಾಗುತ್ತಿತ್ತು. ಇದುವರೆಗೂ ಪಟ್ಟಣದಲ್ಲಿ ಆ ಕಾರ್ಯವೂ ಪ್ರಾರಂಭವಾಗಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ. ಕಾಯಿಲೆಗಳು ಸ್ವಲ್ಪ ಪ್ರಮಾಣದಲ್ಲಿ ಇರುವಾಗಲೇ ಅದರ ನಿಯಂತ್ರಕ್ಕೆ ಕ್ರಮ ಕೈಗೊಳ್ಳುವುದು ಅವಶ್ಯವಾಗಿದ್ದು, ಇದೀಗ ಪುರಸಭೆಯಲ್ಲಿ ಆಡಳಿತ ಮಂಡಳಿ ಇಲ್ಲದಿರುವುದರಿಂದ ಪುರಸಭೆ ಅಧಿಕಾರಿಗಳೇ ಈ ಕುರಿತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಇಲ್ಲಿನ ಪುರಸಭೆ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುವರೋ ಕಾದು ನೋಡಬೇಕಿದೆ. ಮುಂಡರಗಿಯಲ್ಲಿ ಸರಿಯಾಗಿ ಮಳೆ ಇಲ್ಲ, ಅಲ್ಲಲ್ಲಿ ಚರಂಡಿ ಸೇರಿದಂತೆ ವಿವಿಧ ಕಾಮಗಾರಿಗಳು ಪ್ರಾರಂಭವಾಗಿ ಅರ್ಧಕ್ಕೆ ನಿಂತಿರುವ ಹಿನ್ನೆಲೆಯಲ್ಲಿ ಅಲ್ಲೆಲ್ಲ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಇದರಿಂದಾಗಿ ಡೆಂಘೀ ಜ್ವರ ಹೆಚ್ಚಾಗುತ್ತಿದ್ದು, ಪುರಸಭೆಯಿಂದ ಈ ಕೂಡಲೇ ಸ್ವಚ್ಛೆತೆಗೆ ಕ್ರಮ ಕೈಗಳ್ಳುವ ಮೂಲಕ ಅಲ್ಲಲ್ಲಿ ಪೌಡರ್ ಹೊಡೆಸುವುದು, ಫಾಗಿಂಗ್ ಮಾಡಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಕಾರ್ಮಿಕ ಸಂಘಟನೆ ಮುಖಂಡಅಡಿವೆಪ್ಪ ಛಲವಾದಿ ಹೇಳುತ್ತಾರೆ.